ಬೆಳಗಾವಿ: ಎಲೆಕ್ಷನ್ಗೆ ರಣಕಹಳೆ ಮೊಳಗಿಸಿರುವ ರಾಜ್ಯ ಕೇಸರಿ ಪಡೆಗೆ ಇಂದು ಅಮಿತ್ ಶಾ ಎಂಟ್ರಿಯಿಂದ ಮತ್ತಷ್ಟು ಹುರುಪು ತುಂಬಿತ್ತು. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಚಾಣಕ್ಯ ಮಿಂಚಿನ ಸಂಚಾರ ನಡೆಸಿದರು. ಇನ್ನು ಬೆಳಗಾವಿ(Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಇಂದು(ಜನವರಿ 28) ನಡೆದ ಬಿಜೆಪಿ ಬೃಹತ್ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಬೆಳಗಾವಿ ಭಾಗಕ್ಕೆ ವಂದೇ ಮಾತರಂ ರೈಲು (vande bharat train)ಯೋಜನೆ ಜಾರಿಯಾಗಲಿದೆ. ಹಾಗೇ ಕೆಲವೇ ದಿನಗಳಲ್ಲಿ ಮಹದಾಯಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಘೋಷಣೆ ಮಾಡಿದರು.
ಇದು ವಿಜಯ ಸಂಕಲ್ಪ ಯಾತ್ರೆ ಅಲ್ಲ ವಿಜಯ ಯಾತ್ರೆ. ದೇಶದ ಇತಿಹಾಸದಲ್ಲಿ ಮನೆ ಮನೆಗೆ ಶುದ್ದ ನೀರು ಕೊಡುವ ಜಲಜೀವನ್ ಮಿಷನ್ ಯೋಜನೆ ಕೇವಲ ಬಿಜೆಪಿಗೆ ಮಾತ್ರ ಸಾಧ್ಯ. ಕಾಂಗ್ರೆಸ್ ಜನ ಹಿತ ಸಂಪೂರ್ಣ ಮರೆತು ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ರೈತರಿಗೆ ಹತ್ತು ಸಾವಿರ ರೂಪಾಯಿ ಕೊಡ್ತಿರುವ ತೃಪ್ತಿ ಇದೆ. ಒಂದೇ ಮಾತರಂ ರೈಲು ಮುಂದಿನ ದಿನಗಳಲ್ಲಿ ನೀಡುತ್ತೇವೆ. ಕಳಸಾಬಂಡೂರಿ ಯೋಜನೆಗೆ ಡಿಪಿಆರ್ ಆಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ತಡಿಯಲು ಯಾವ ಶಕ್ತಿಗೂ ಸಾಧ್ಯವಿಲ್ಲ. ರಾಜ್ಯದಲ್ಲಿ 140ಸ್ಥಾನಗಳನ್ನ ಗೆದ್ದು ಬಿಜೆಪಿ ಅಧಿಕಾರಕ್ಕೆ ತರೋಣ. ಬೆಳಗಾವಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ ಗೆದ್ದು ಮತ್ತೊಮ್ಮೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ತರೋಣ. ಉಕ್ಕಿನ ಮನುಷ್ಯ ದೇಶದ್ರೋಹಿಗಳಿಗೆ ಸಿಂಹ ಸ್ವಪ್ನ ಆಗಿರುವ ಅಮಿತ್ ಶಾ ಅವರು ಬಂದಿದ್ದಾರೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಅಭಿವೃದ್ಧಿಯಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಆಗುತ್ತಿದೆ. ಪ್ರಧಾನಿ ಮೋದಿ ಯಾವುದೇ ಕ್ಷೇತ್ರವನ್ನು ಕಡೆಗಣಿಸಿಲ್ಲ ಎಂದರು
ಉತ್ತರ ಕರ್ನಾಟಕದ ದಶಕಗಳ ಹೋರಾಟವಾದ ಮಹದಾಯಿ ಕಳಸಾ ಬಂಡೂರಿ ಯೋಜನೆ ಡಿಪಿಆರ್ ಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಈಗ ಅಧಿಕೃತವಾಗಿ ಕಾಮಗಾರಿಗೆ ಚಾಲನೆ ನೀಡಬೇಕಿದೆ. ಇದೀಗ ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದು, ಮಹದಾಯಿ ಹೋರಾಟಗಾರರ ಸಂತಸಕ್ಕೆ ಕಾರಣವಾಗಿದೆ.