ಬೆಳಗಾವಿ, ಮಾ.7: ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗವು ಬೆಳಗಾವಿಯ (Belagavi) ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿಯಾಗಿ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಪತ್ರವನ್ನು ಸಲ್ಲಿಸದೆ. ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದ ಗಡಿ ಗ್ರಾಮಗಳ ಹೊಲಗಳಿಗೆ ರಾಜ್ಯದ ನೀರಾವರಿ ಯೋಜನೆಗಳಿಂದ ಸ್ವಲ್ಪ ನೀರು ಬಿಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ದಯವಿಟ್ಟು ನಮಗೆ ನೀರು ಕೊಡಿ ಅಥವಾ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಜತ್ತ ತಾಲೂಕಿನ ಸುಮಾರು 40 ಗ್ರಾಮಗಳು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿವೆ.
ಬಿಕ್ಕಟ್ಟಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಾವು ಪದೇ ಪದೇ ಮಾಡಿದ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಇಡೀ ತಾಲೂಕು ಬರಪೀಡಿತವಾಗಿದ್ದರೂ ಮಹಾರಾಷ್ಟ್ರ ಸರಕಾರ ಬರಪೀಡಿತ ಎಂದು ಘೋಷಿಸುವಲ್ಲಿ ವಿಫಲವಾಗಿದೆ ಎಂದು ನಿಯೋಗ ಆರೋಪಿಸಿದೆ.
ಇದನ್ನೂ ಓದಿ: 2 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ, ಮಂಗನ ಕಾಯಿಲೆ ತಡೆಗೆ ಕ್ರಮ: ಶಿರಸಿಯಲ್ಲಿ ಇನ್ನೂ ಏನೇನಂದ್ರು ಸಿಎಂ ಸಿದ್ದರಾಮಯ್ಯ?
ಜತ್ತ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಸುಮಾರು 60 ಟ್ಯಾಂಕರ್‌ಗಳನ್ನು ಮಾತ್ರ ಬಳಸಲಾಗುತ್ತಿದೆ. ವಿಶೇಷ ನೀರಾವರಿ ಯೋಜನೆಯನ್ನು ನಿರ್ಮಿಸುವ ಮೂಲಕ ಜತ್ತ ತಾಲೂಕಿನ ನೀರಿನ ಕೊರತೆಯನ್ನು ನೀಗಿಸಲು ಸರ್ಕಾರಗಳು ನೀಡಿದ ಭರವಸೆಗಳು ಈಡೇರಿಲ್ಲ. ಆದ್ದರಿಂದ, ಜತ್ತ ತಾಲೂಕಿನ ರೈತರೊಂದಿಗೆ ತುಬಚಿ ಬಬಲೇಶ್ವರ ಅಥವಾ ಕೊಟ್ಟಲಗಿ ಯೋಜನೆಗಳಂತಹ ಯೋಜನೆಗಳಿಂದ ಸ್ವಲ್ಪ ನೀರನ್ನು ಹಂಚಿಕೊಳ್ಳಲು ನಾವು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮನವಿ ಮಾಡಿದೆ.
ಮಹಾರಾಷ್ಟ್ರದಲ್ಲಿರುವಂತೆ ಕರ್ನಾಟಕ ಸರ್ಕಾರಕ್ಕೆ ನೀರು ಕೊಡಲು ಸಾಧ್ಯವಾಗದಿದ್ದರೆ 40 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ ನೀರಾವರಿ ಕಲ್ಪಿಸುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದೆ. ಮಾಜಿ ಸಚಿವ ವಿಶ್ವಜಿತ್ ಕದಂ, ಜತ್ತ ಶಾಸಕ ವಿಕ್ರಂ ಸಾವಂತ್, ಸ್ಥಳೀಯ ಮುಖಂಡರಾದ ಬಾಬು ಮಾಳಿ, ರಮೇಶ ಪಾಟೀಲ, ಎಂ.ಸಿರಗೊಂಡ, ನೀಲೇಶ ಬಾಮನೆ, ಸುಜಯ ಶಿಂಧೆ ಇತರರು ಇದ್ದರು. ನಿಯೋಗದಲ್ಲಿ ಕೆಲ ಗ್ರಾಮ ಪಂಚಾಯಿತಿಗಳ ಗ್ರಾಮದ ಮುಖ್ಯಸ್ಥರು ಹಾಗೂ ಸದಸ್ಯರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ