ಬೆಂಗಳೂರು: ಕೆಲ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಮಹಿಳಾ ಕಾರ್ಪೊರೇಟರ್ ಪ್ರಾಣ ತೆಗೆದಿದ್ದಾರೆ. ಅನ್ಲಾಕ್ ಆಗಿ ಜನ್ರ ಓಡಾಟ ಹೆಚ್ಚಾಗ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರ ಕೈಗೆತ್ತಿಕೊಂಡಿದ್ದಾರೆ. ಸದ್ಯ ಛಲವಾದಿ ಪಾಳ್ಯದ ಕಾರ್ಪೊರೇಟರ್ ಆಗಿದ್ದ ರೇಖಾ ಕದಿರೇಶ್ ಹತ್ಯೆ ಬಗ್ಗೆ ಖಾಕಿ ತನಿಖೆ ಮತ್ತಷ್ಟು ಚುರುಕು ಪಡೆದಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಿರೋ ಪೊಲೀಸರು ದುಷ್ಕರ್ಮಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.
ಖಾಕಿ ತನಿಖೆಯಲ್ಲಿ ಬಯಲಾಯ್ತಾ ಹತ್ಯೆ ಹಿಂದಿನ ಕಾರಣ?
ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದ ರೇಖಾ ಕದಿರೇಶ್ ಹತ್ಯೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗೇ ಪರಿಗಣಿಸಿದ್ದಾರೆ. ಹಾಡಹಗಲೇ ಸ್ಥಳೀಯ ಜನಪ್ರತಿನಿಧಿಯೊಬ್ಬರನ್ನು ಬರ್ಬರ ಹತ್ಯೆ ಮಾಡಿರೋ ಪ್ರಕರಣದ ಆರೋಪಿಗಳ ಬಂಧನಕ್ಕೆ ಖಾಕಿ ಟೀಂ ಸರ್ವಸನ್ನದ್ಧವಾಗಿದೆ. ಹತ್ಯೆ ಹಿಂದಿನ ಕಾರಣಗಳ ಬಗ್ಗೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಈ ನಡುವೆ ಹತ್ಯೆ ಕೃತ್ಯದ ಬಳಿಕ ತಲೆ ಮರೆಸಿಕೊಂಡಿರುವ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇವತ್ತೇ ಇಬ್ಬರ ಬಂಧನಕ್ಕೆ ಪೊಲೀಸರು ಪಣ ತೊಟ್ಟಿದ್ದು, ಇಬ್ಬರ ಬಂಧನದ ಬಳಿಕ ರೇಖಾ ಕೊಲೆಯ ಹಿಂದಿನ ಅಸಲಿ ಕಾರಣ ಗೊತ್ತಾಗಲಿದೆ.
ಯಾವ ಕಾರಣಕ್ಕಾಗಿ ನಡೀತು ರೇಖಾ ಮರ್ಡರ್?
ಇನ್ನು ರೇಖಾ ಕದಿರೇಶ್ ಹತ್ಯೆ ಸಂಬಂಧ ತನಿಖೆ ನಡೆಸಿರೋ ಪೊಲೀಸರು, ಮರ್ಡರ್ ಹಿಂದೆ ಇರೋ ಕಾರಣಗಳನ್ನು ಪತ್ತೆ ಹಚ್ಚೋಕೆ ಌಂಗಲ್ನಲ್ಲಿ ತನಿಖೆ ನಡೆಸ್ತಿದ್ದಾರೆ. ಕೌಟುಂಬಿಕ ಕಲಹದಿಂದ ಹಿಡಿದು ಟೆಂಡರ್ ಗಲಾಟೆ, ಹಣಕಾಸಿನ ವ್ಯವಹಾರವರೆಗೂ ತನಿಖೆ ನಡೆಸಬೇಕಾಗಿದೆ.
ರೇಖಾ ಭೀಕರ ಹತ್ಯೆಯ ಹಿಂದೆ ಸೋದರಳಿಯನ ಕೈವಾಡ?
ಇನ್ನು ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಹಿಂದೆ ಸೋದರಳಿಯನ ಕೈವಾಡ ಇದೆ ಎನ್ನಲಾಗ್ತಿದೆ. ರೇಖಾ ಕದಿರೇಶ್ ಅಣ್ಣನ ಮಗ ಸೂರ್ಯ ಅತ್ತೆ ರೇಖಾ ಜೊತೆಗೆ ಇರ್ತಿದ್ದ. ಹೀಗಾಗಿ ಸೂರ್ಯನ ಮೇಲೆ ಅನುಮಾನ ಹೊಂದಿರೋ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಈಗಾಗಲೇ ಕದಿರೇಶ್ ಅಕ್ಕ ಮಾಲಾ ಎಂಬುವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸದ್ಯ ಕಿಮ್ಸ್ ಶವಾಗಾರದಲ್ಲಿ ರೇಖಾ ಕದಿರೇಶ್ ಮೃತದೇಹ ಇಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕೊವಿಡ್ ಟೆಸ್ಟ್ ಮಾಡಲಾಗಿದೆ. ಕೊವಿಡ್ ವರದಿ ನೆಗೆಟಿವ್ ಬಂದಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು ಆಂಜಿನಪ್ಪ ಗಾರ್ಡನ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ 8.30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದ ಪಿ.ಸಿ.ಮೋಹನ್, ಆರ್. ಅಶೋಕ್ ಸೇರಿದಂತೆ ನಾಯಕರು ಅಂತಿಮ ದರ್ಶನ ಪಡೆಯಲಿದ್ದಾರೆ.
ರೇಖಾ ಜತೆಗಿದ್ದ ಪೀಟರ್ ಹತ್ಯೆ ಮಾಡಿರುವ ಅನುಮಾನವಿದೆ. ಪೊಲೀಸ್ ತನಿಖೆಯ ಬಳಿಕ ಸತ್ಯಾಂಶ ಬಯಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿಕೆ ನೀಡಿದ್ದಾರೆ. ಕದಿರೇಶ್‌ನನ್ನು ರಾಜಕೀಯ ದ್ವೇಷಕ್ಕೆ ಕೊಲೆ ಮಾಡಿದ್ದರು. ರೇಖಾ ಸಾವಿನ ಸುದ್ದಿ ಕೇಳಿ ನನಗೆ ಬಹಳ ದುಃಖವಾಯಿತು. ರೇಖಾ ಕದಿರೇಶ್ ಸಮಾಜ ಸೇವೆಯನ್ನು ಮಾಡುತ್ತಿದ್ದರು. ಕೊವಿಡ್ ಸಂಕಷ್ಟದ ವೇಳೆ ಉತ್ತಮ ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ರೇಖಾ ಪತಿ ಕದಿರೇಶ್ ಹತ್ಯೆಯಾಗಿತ್ತು. ಇದೀಗ ರೇಖಾ ಕದಿರೇಶ್‌ರನ್ನು ಹತ್ಯೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಆದಷ್ಟು ಬೇಗ ಕ್ರಮಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸಬಾರದು ಎಂದರು.
ಇದನ್ನೂ ಓದಿ: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆಗೈದವರನ್ನು 24 ಗಂಟೆಯಲ್ಲಿ ಬಂಧಿಸುತ್ತೇವೆ: ಸಿಎಂ ಯಡಿಯೂರಪ್ಪ