ಬೆಂಗಳೂರು: ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ಮುಂದಾಗಿತ್ತು. ಆದರೆ, ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಅದನ್ನು ಹಿಂಪಡೆದಿತ್ತು. ಹೀಗಾಗಿ, ಹೊಸ ವರ್ಷಾಚರಣೆ ವೇಳೆ ಜನರನ್ನು ನಿಯಂತ್ರಿಸುವ ಭಾರ ಪೊಲೀಸ್ ಇಲಾಖೆ ಮೇಲೆ ಬಿದ್ದಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಸುದ್ದಿಗೋಷ್ಠಿ ನಡೆಸಿ, ಹೊಸ ವರ್ಷದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದರು.
31ರ ರಾತ್ರಿ ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಅಂದರೆ, ಯಾರೊಬ್ಬರೂ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರುವಂತಿಲ್ಲ. ಯಾವುದೇ ರಸ್ತೆಗಳ ಮೇಲೆ ಸೆಲೆಬ್ರೇಷನ್ ಮಾಡಲು ಅವಕಾಶ ಇರುವುದಿಲ್ಲ. ಖಾಸಗಿ ಕ್ಲಬ್ಗಳು, ಅಪಾರ್ಟ್ಮೆಂಟ್ಗಳಲ್ಲಿ ನಿವಾಸಿಗಳು ಹೊಸ ವರ್ಷ ಆಚರಣೆ ಮಾಡಬಹುದು. ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನ ಆಯೋಜಿಸುವಂತಿಲ್ಲ. ಹೊಸ ವರ್ಷಾಚರಣೆ ವೇಳೆ ಡಿಜೆ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಕಮಲ್ ಪಂತ್ ತಿಳಿಸಿದರು.
ರೆಸ್ಟೋರೆಂಟ್, ಪಬ್, ಕ್ಲಬ್ಗಳಲ್ಲಿ ಕಡ್ಡಾಯವಾಗಿ ಕೊವಿಡ್-19 ನಿಯಮಗಳನ್ನ ಪಾಲಿಸಬೇಕು. ಗ್ರಾಹಕರಿಗೆ ಅಡ್ವಾನ್ಸ್ ಬುಕಿಂಗ್ಗೆ ಅವಕಾಶ ನೀಡಬೇಕು. ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಶೇ.50ರಷ್ಟು ಗ್ರಾಹಕರು ಬರಲು ಮಾತ್ರ ಅವಕಾಶ ನೀಡಬೇಕು. ಕೂಪನ್ ಪಡೆದ ಗ್ರಾಹಕರು ಮಾತ್ರ ಹೋಟೆಲ್ ಒಳಗೆ ಇರಬೇಕು. ಅವರು ರಸ್ತೆಗೆ ಬಂದು ಸೆಲಬ್ರೇಷನ್ ಮಾಡಬಾರದು ಎಂದು ಕಮಲ್ ಪಂತ್ ಮಾಹಿತಿ ನೀಡಿದರು.
ರಾತ್ರಿ ಕಚೇರಿಯಿಂದ ಮನೆಗೆ ತೆರಳುವವರಿದ್ದರೆ, ಆಸ್ಪತ್ರೆಗೆ ಹೋಗುವವರಿದ್ದರೆ ಇಲ್ಲವೆ ಇತರೆ ಯಾವುದೇ ಅಗತ್ಯ ಸೇವೆಗಾಗಿ ಸಂಚಾರ ನಡೆಸಬಹುದು. ಅವರಿಗೆ ನಮ್ಮ ಕಡೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ರಾತ್ರಿ ಜಾಲಿ ರೈಡ್ ಉದ್ದೇಶ ಇಟ್ಟುಕೊಂಡು ಸಂಚಾರ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಎಚ್ಚರಿಕೆ ನೀಡಿದರು.
ಬೆಂಗಳೂರು ನಗರಾದ್ಯಂತ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತೇವೆ. ಡಿ.31ರಂದು ಎಂದಿಗಿಂತ ಹೆಚ್ಚಿನ ಕಡೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತೇವೆ ಎಂದರು. ಈ ಮೂಲಕ ಕುಡಿದು ವಾಹನ ಓಡಿಸುವವರಿಗೆ ತಡೆ ಹಾಕಲು ಕ್ರಮ ಕೈಗೊಳ್ಳುತ್ತಿದ್ದೇವೆ ಎನ್ನುವ ಸಂದೇಶ ರವಾನಿಸಿದರು.
ಎಲ್ಲಾ ಫ್ಲೈಓವರ್ ಬಂದ್:
ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಕೆಲವರು ಫ್ಲೈಓವರ್ಗಳ ಮೇಲೆ ವಾಹನ ನಿಲ್ಲಿಸಿ ಗಲಾಟೆ ಮಾಡುತ್ತಾರೆ. ಇದಕ್ಕೆ ಬ್ರೇಕ್ಹಾಕುವ ಉದ್ದೇಶದಿಂದ ಡಿ.31ರಂದು ರಾತ್ರಿ 8 ಗಂಟೆಯಿಂದ ಫ್ಲೈಓವರ್ಗಳು ಬಂದ್ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಇರಲಿದೆ.
ಹೊಸ ವರ್ಷಕ್ಕೆ ಹೊಸ ಕಿಕ್ ಕೊಟ್ಟ ಚಂದನ್ ಶೆಟ್ಟಿ.. ಪಾರ್ಟಿ ಫ್ರೀಕ್ಗೆ ನ್ಯೂ ಸಾಂಗ್ ರಿಲೀಸ್
Published On - 7:17 pm, Mon, 28 December 20