ಬೆಂಗಳೂರು, (ನವೆಂಬರ್16): ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್(Bengaluru-Dharwad Vande Bharat) ರೈಲನ್ನು ಬೆಳಗಾವಿಗೆ (Belagavi) ವಿಸ್ತರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಕೇಂದ್ರ ರೈಲ್ವೆ ಇಲಾಖೆ ಸ್ಪಂದಿಸಿದೆ. ಬೆಳಗಾವಿ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್‌ನ್ನು ಬೆಂಗಳೂರು- ಧಾರವಾಡದಿಂದ ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ. ಸಿದ್ದರಾಮಯ್ಯ ಮಾತ್ರವಲ್ಲದೇ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಹ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಗೆ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಇಬ್ಬರ ಪ್ರಯತ್ನದಿಂದಾಗಿ ಇದೀಗ ಬೆಳಗಾವಿಗೆ ವಂದ್ ಭಾರತ್ ರೈಲು ಆಗಮನವಾಗಲಿದೆ.
ಬೆಂಗಳೂರು – ಧಾರವಾಡ ಮಧ್ಯೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಳಗಾವಿವರೆಗೂ ವಿಸ್ತರಿಸಲಾಗಿದ್ದು, ರೈಲು ಸಂಖ್ಯೆ 20661 ಬೆಳಗ್ಗೆ 05.45 ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 01.30 ಕ್ಕೆ ಬೆಳಗಾವಿ ತಲುಪಲಿದೆ. ಇನ್ನು ರೈಲು ಸಂಖ್ಯೆ (20662) ಮಧ್ಯಾಹ್ನ 2ಕ್ಕೆ ಬೆಳಗಾವಿಯಿಂದ ಹೊರಟು ರಾತ್ರಿ 10.10ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಆದ್ರೆ, ರೈಲು ಸಂಚಾರ ಯಾವಾಗಿನಿಂದ ಶುರುವಾಗಲಿದೆ ಎನ್ನುವ ದಿನಾಂಕ ನಿಗದಿಯಾಗಿಲ್ಲ.
ಇದನ್ನೂ ಓದಿ: ಬೆಳಗಾವಿವರೆಗೂ ವಂದೇ ಭಾರತ್ ರೈಲು ವಿಸ್ತರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಸಿದ್ದರಾಮಯ್ಯ ಪತ್ರ
ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಹಾಗೂ ರೈಲ್ವೆ ಇಲಾಖೆಗೆ ಪ್ರಕಟಣೆ ಮೂಲಕ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಶ್ರೀಘ್ರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ ಎಂದಿದ್ದಾರೆ.
ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿಗೂ ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಪ್ರಸ್ತುತ ವಂದೇ ಭಾರತ್ ರೈಲು ಬೆಂಗಳೂರು-ಹುಬ್ಬಳ್ಳಿ- ಧಾರವಾಡ ನಡುವೆ ಸಂಚಾರ ನಡೆಸುತ್ತಿದ್ದು ಈ ಮಾರ್ಗದ ಪ್ರಯಾಣಿಕರಿಕೆ ಉತ್ತಮ ಸೌಕರ್ಯ ಒದಗಿಸುತ್ತಿದೆ. ಬೆಳಗಾವಿ ಕಿತ್ತೂರು ಕರ್ನಾಟಕದ ಪ್ರಮುಖ ನಗರವಾಗಿದ್ದು ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳಲ್ಲಿಮುಂಚೂಣಿಯಲ್ಲಿದೆ. ಅಲ್ಲದೇ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳೊಂದಿಗೆ ಬೆಳಗಾವಿ ಜಿಲ್ಲೆಗಡಿ ಹಂಚಿಕೊಂಡಿದ್ದು, ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರದಿಂದ ಅಂತಾರಾಜ್ಯ ಸಂಚಾರ ವ್ಯವಸ್ಥೆ ಅಭಿವೃದ್ಧಿಯಾಗಲಿದೆ. ಈಗಾಗಲೇ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಿಸುವಂತೆ ಕರ್ನಾಟಕ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರು ಮನವಿ ಮಾಡಿದ್ದಾರೆ. ಈ ಎಲ್ಲಕಾರಣಗಳಿಗಾಗಿ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿಗೂ ವಿಸ್ತರಿಸುವಂತೆ ಮನವಿ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ