
ಬೆಂಗಳೂರು, ಮೇ 16: ವಂಚನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ED)ದ ಮಾಜಿ ಅಧಿಕಾರಿ ವಿರುದ್ಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ (Pinya Police Station) ಎಫ್ಐಆರ್ ದಾಖಲಾಗಿದೆ. ಇಡಿಯ ಮಾಜಿ ಸಹಾಯಕ ನಿರ್ದೇಶಕರಾಗಿದ್ದ ಸೋಮಶೇಖರ್.ಎನ್ ಹಾಗೂ ಅವರ ಪುತ್ರ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೋಮಶೇಖರ್ ಮತ್ತು ಅವರ ಮಗ ನಿರಂಜನ್ ಎಸ್ ಮಯೂರ್ ಅವರು ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಿದ್ದರೆಂದು ವಾಫೆ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಜಿ ನಿರ್ದೇಶಕ ಸುಹಾಸ್. ಆರ್ ಅವರು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಐಪಿಸಿ ಸೆಕ್ಷನ್ 120ಬಿ, 406, 420ರ ಅಡಿ ಎಫ್ಐಆರ್ ದಾಖಲಾಗಿದೆ.
ಸೋಮಶೇಖರ್ ಪುತ್ರ 2021ರ ಡಿಸೆಂಬರ್ನಲ್ಲಿ ಸುಹಾಸ್ರನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ವಾಫೆ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಆರಂಭದ ಬಗ್ಗೆ ಮಾತುಕತೆ ನಡೆದಿತ್ತು. ಸುಹಾಸ್ ಕಂಪನಿಯ 3,334 ಶೇರ್ ಖರೀದಿ ಮಾಡಿದ್ದರು. ಅಲ್ಲದೇ ಸುಹಾಸ್ ಕಂಪನಿಯ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡಿದ್ದರು ಎಂದೂ ದೂರಿನ ಪ್ರತಿಯಲ್ಲಿದೆ.
ಆದರೆ, ಕಂಪನಿ ನಿಯಂತ್ರಣ ಸಂಪೂರ್ಣ ಸೋಮಶೇಖರ್ ಬಳಿ ಇತ್ತು. ಸೋಮಶೇಖರ್ ಆ ಅವಧಿಯಲ್ಲಿ ಸರ್ಕಾರಿ ಹುದ್ದೆಯಲ್ಲಿದ್ದರು. ಹೀಗಾಗಿ ತನ್ನ ಮಗನ ಮೂಲಕ ಕಾರ್ಯಾಚರಿಸುತ್ತಿದ್ದರು ಎಂದು ದೂರಿನಲ್ಲಿದೆ.
ಯಂತ್ರಗಳ ಖರೀದಿ ಮತ್ತು ಏರೋಸ್ಪೇಸ್ ಉತ್ಪಾದನೆಗಾಗಿ ಅಶೋಕ ಎಂಎ ಒಡೆತನದ ಎಸ್ಎಲ್ಎನ್ ಸಿಎನ್‌ಸಿಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ 2.15 ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ. ಆದರೆ, ಉಪಕರಣಗಳು ಮಾತ್ರ ಕಂಪನಿಗೆ ತಲುಪಲೇ ಇಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದ ನಿಯಮ ಮೀರಿ ಬರೋಬ್ಬರಿ 60 ಶಿಕ್ಷಕರ ವರ್ಗಾವಣೆ: ಬಿಇಒ ಕಳ್ಳಾಟ ಬಯಲು!
ಒತ್ತಡ ಹೇರಿ ಬೆದರಿಸಿ ತಮ್ಮ ಬಳಿ ಹಲವು ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಬಳಿಕ ಬೇರೆ ಕಂಪನಿ ಆರಂಭಿಸಿ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಇದರಿಂದ ತಮಗೆ 80 ಲಕ್ಷಕ್ಕೂ ಅಧಿಕ ನಷ್ಟ ಮಾಡಿದ್ದರೆಂದು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
Published On - 10:11 pm, Fri, 16 May 25