
ಬೆಂಗಳೂರು, ಡಿಸೆಂಬರ್ 12: ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಹೀಗಿದ್ದರೂ ಜನ ಮಾತ್ರ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ. ದಂಡದ ಜೊತೆಗೆ ಕಸ ಎಸೆಯುವವರ ಮನೆ ಮುಂದೆಯೇ ಜಿಬಿಎ ಲೋಡ್ಗಟ್ಟಲೆ ಕಸ ಸುರಿದರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಹೋಗುವ ಪ್ರಕರಣಗಳಿಗೆ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಬೆಂಗಳೂರಲ್ಲಿ ಮತ್ತೊಂದು ಘಟನೆ ನಡೆದಿದೆ.
ಸರ್ವಜ್ಞನನಗರದ ವಾರ್ಡ್ 29ರಲ್ಲಿ SUV ಕಾರಿನಲ್ಲಿ ಬಂದವರು ರಸ್ತೆ ಬದಿ ರಾಶಿ ರಾಶಿ ಕಸವನ್ನು ಎಸೆದು ಹೋಗಿದ್ದಾರೆ. ಟ್ರಾಫಿಕ್ ಪೊಲೀಸರ ಸಹಾಯದಿಂದ ಅವರ ಮನೆಯನ್ನು ಪತ್ತೆ ಮಾಡಲಾಗಿದ್ದು, 5 ಸಾವಿರ ರೂ. ದಂಡವನ್ನು ಜಿಬಿಎ ಅಧಿಕಾರಿಗಳು ವಸೂಲಿ ಮಾಡಿದ್ದಾರೆ. ಮನೆಗೆ ಭೇಟಿ ನೀಡಿದ್ದ ಜೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಸಂದೀಪ್ ಮತ್ತು ಇತರೆ ಅಧಿಕಾರಿಗಳು ಫೈನ್ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ಎಚ್ಚರಿಕೆ ನೀಡಿರೋದಾಗಿ ಜಿಬಿಎ ತಿಳಿಸಿದೆ.
ಇದನ್ನೂ ಓದಿ: 5 ಪಾಲಿಕೆಗಳಿಂದ ಜಿಬಿಎ ಆರ್ಥಿಕ ದಿವಾಳಿ! ಅಂಕಿಅಂಶ ಸಹಿತ ಕಾರಣ ಬಿಚ್ಚಿಟ್ಟ ಬಿಜೆಪಿ ಮುಖಂಡ, ಸಿಎಂಗೆ ಪತ್ರ
ರಸ್ತೆ ಬದಿ ಕಸ ಎಸೆಯುವ ಪ್ರಕರಣಗಳ ತಡೆಗೆ ಇತ್ತೀಚೆಗಷ್ಟೇ ‘ಕಸ ಸುರಿಯುವ ಹಬ್ಬ’ದ ಹೆಸರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಕಸ ಎಸೆಯುವರ ಮನೆಗಳನ್ನು ಪತ್ತೆ ಮಾಡಿ ದಂಡ ವಿಧಿಸುವ ಜೊತೆಗೆ, ಮನೆ ಮುಂದೆ ಕಸ ಸುರಿದ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಅಂತವರಿಗೆ ಅವಮಾನ ಮಾಡುವ ಕೆಲಸಕ್ಕೂ ಮುಂದಾಗಿತ್ತು.
Unless fines are high no one will care. These miscreants ought to have been fined ₹50K and vehicle impounded until fine was paid. The 2 people in the video also should have been arrested https://t.co/NkkWYliXZa
— Kiran Mazumdar-Shaw (@kiranshaw) December 11, 2025
ಇನ್ನು ಸರ್ವಜ್ಞನನಗರದ ವಾರ್ಡ್ 29ರಲ್ಲಿ ಕಾರಲ್ಲಿ ಬಂದು ಕಸ ಸುರಿದಿದ್ದವರಿಗೆ ದಂಡ ವಿಧಿಸಿರುವ ಬಗ್ಗೆ ಜಿಬಿಎ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ದಂಡ ಹೆಚ್ಚಿಲ್ಲದಿದ್ದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ದುಷ್ಟರಿಗೆ 50 ಸಾವಿರ ರೂ. ದಂಡ ವಿಧಿಸಬೇಕಿತ್ತು. ಜೊತೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ವಿಡಿಯೋದಲ್ಲಿ ಕಾಣುವ ಇಬ್ಬರು ವ್ಯಕ್ತಿಗಳನ್ನು ಸಹ ಬಂಧಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Fri, 12 December 25