ಮಾಗಡಿ ಬಳಿ ಮಾಜಿ ಸಚಿವ ರೇವಣ್ಣ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು
ಮಾಜಿ ಸಚಿವ ರೇವಣ್ಣ ಅವರ ಮಗನ ಕಾರು ಬೈಕ್ಗೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕು ಗುಡೇಮಾರನಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಗುರುವಾರ ರಾತ್ರಿ ಅಪಘಾತ ಸಂಭವಿಸಿದ್ದು, ಆ ಸಂದರ್ಭ ಸಚಿವರ ಪುತ್ರನೇ ಕಾರು ಚಲಾಯಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ, ಸಚಿವರು ಅದನ್ನು ನಿರಾಕರಿಸಿದ್ದಾರೆ.

ರಾಮನಗರ, ಡಿಸೆಂಬರ್ 12: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ (Magadi) ತಾಲೂಕು ಗುಡೇಮಾರನಹಳ್ಳಿ ಗ್ರಾಮದ ಬಳಿ ಗುರುವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Accident) ಬೈಕ್ ಸವಾರನೊಬ್ಬ ದುರ್ಮರಣ ಹೊಂದಿದ್ದಾನೆ. ಮಾಜಿ ಸಚಿವ ಹೆಚ್ಎಂ ರೇವಣ್ಣ (HM Revanna) ಅವರ ಪುತ್ರ ಆರ್. ಶಶಾಂಕ್‌ಗೆ ಸೇರಿದ ಕಾರು ಬೈಕ್ಗೆ ಡಿಕ್ಕಿಯಾಗಿತ್ತು. ಘಟನೆ ವೇಳೆ ರೇವಣ್ಣ ಪುತ್ರ ಶಶಾಂಕ್ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ಘಟನೆ ಚರ್ಚೆಗೆ ಗ್ರಾಸವಾಗಿದೆ. ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್ (27) ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, KA 51 MQ 0555 ನಂಬರ್‌ನ ಕಾರು ಡಿಕ್ಕಿಯಾದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕಾರು ಆರ್. ಶಶಾಂಕ್ ಅವರ ಹೆಸರಿನಲ್ಲಿರುವುದು ದೃಢಪಟ್ಟಿದೆ.
ಘಟನೆಯ ಬಳಿಕ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಕುರಿತು ‘ಟಿವಿ9’ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್ಎಂ ರೇವಣ್ಣ, ‘ಅಪಘಾತ ಸಂಭವಿಸಿದ ವೇಳೆ ನನ್ನ ಪುತ್ರ ಕಾರು ಚಲಾಯಿಸುತ್ತಿರಲಿಲ್ಲ. ಚಾಲಕ ಕಾರು ಓಡಿಸುತ್ತಿದ್ದಾಗ ಅಪಘಾತ ಸಂಭವಿಸಿದೆ’ ಎಂದು ಹೇಳಿದ್ದಾರೆ.
ಕುದೂರು ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಹೆಚ್ಚಿನ ಮಾಹಿತಿ ಪರಿಶೀಲಿಸುತ್ತಿದ್ದಾರೆ.
ಮೃತ ರಾಜೇಶ್ ಕುಟುಂಬಸ್ಥರ ಆರೋಪವೇನು?
ಕಾರು ಡಿಕ್ಕಿಯಾಗಿ ರಾಜೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ ಅವರು ಹಿಟ್ ಅಂಡ್ ರನ್ ಮಾಡಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಮೃತ ರಾಜೇಶ್ ಕುಟುಂಬಸ್ಥರ ಆರೋಪಿಸಿದ್ದಾರೆ. ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಅವರನ್ನು ಅಡ್ಡಗಟ್ಟಿದ್ದಾರೆ. ಆಗ ಅವರು, ‘‘ನಾನು ರೇವಣ್ಣ ಮಗ’’ ಎಂದಿದ್ದಾರೆ. ‘‘ನಿಮಗೆ ಮಾನವೀಯತೆ ಇಲ್ವಾ’’ ಎಂದು ಜನ ಪ್ರಶ್ನೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಆನೇಕಲ್ ಬಳಿ ಭೀಕರ ಬೈಕ್ ಅಪಘಾತ: ಎದೆ ಝಲ್ ಎನಿಸುವಂತಿದೆ ದೃಶ್ಯ
ನಮಗೆ ನ್ಯಾಯ ಒದಗಿಸಿಕೊಡಿ ಎಂದು ಮೃತ ರಾಜೇಶ್ ಸಂಬಂಧಿ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Fri, 12 December 25



