ಬೆಂಗಳೂರು: ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಶಪಥ ಹೆದ್ದಾರಿಯನ್ನು (Bengaluru-Mysuru Expressway) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಮಂಡ್ಯದ ಮದ್ದೂರು ತಾಲೂಕಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಡೆದುಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿ ಮಧ್ಯೆ ರಾಜಕೀಯ ಜಿದ್ದಾಜಿದ್ದಿಯೂ ಏರ್ಪಟ್ಟಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಬಿಜೆಪಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಮಧ್ಯೆ ವಾಕ್ಸಮರ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ದಶಪಥ ಹೆದ್ದಾರಿಯ ವಿಶೇಷಗಳು, ಬೆಂಗಳೂರು – ಮೈಸೂರು ನಡುವಣ ಸಂಪರ್ಕದ ನಿಟ್ಟಿನಲ್ಲಿ ಹೆದ್ದಾರಿಯ ಮಹತ್ವ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರನ್ನು ಸಂಪರ್ಕಿಸುವ 117 ಕಿಲೋಮೀಟರ್ ಉದ್ದದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ, ಎನ್ಎಚ್ 275 ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣಕ್ಕೆ 8,408 ಕೋಟಿ ರೂ. ವ್ಯಯಿಸಲಾಗಿದೆ. ಈ ವರ್ಷ ಜನವರಿಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ನಿತಿನ್ ಗಡ್ಕರಿ ಹೆದ್ದಾರಿಯ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಆ ಬಳಿಕ, ಯೋಜನೆಯ ವೆಚ್ಚ ಮತ್ತು ಇತರ ವಿವರಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಜತೆಗೆ ಎಕ್ಸ್‌ಪ್ರೆಸ್ ವೇಯ ಲೇನ್ ಗೊಂದಲಕ್ಕೆ ತೆರೆ ಎಳೆದಿದ್ದರು. 6 ಲೇನ್ಗಳನ್ನು ಪ್ರಮುಖ ಕ್ಯಾರೇಜ್ವೇ ಆಗಿ ಗುರುತಿಸಲಾಗಿದ್ದು, ಎರಡೂ ಬದಿಗೆ 2 ಲೇನ್ನ ಸರ್ವೀಸ್ ರಸ್ತೆ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.
ಸರ್ವೀಸ್ ರಸ್ತೆಯನ್ನೂ ಎಕ್ಸ್‌ಪ್ರೆಸ್ ವೇಯ ಭಾಗವಾಗಿಯೇ ಗುರುತಿಸಲಾಗುತ್ತದೆ ಎಂದು ಟ್ರಾಫಿಕ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನಲ್ಲಿ ಸುಮಾರು ನಾಲ್ಕು ದಶಕಗಳ ಅನುಭವ ಹೊಂದಿರುವ ತಜ್ಞ ಎಂಎನ್ ಶ್ರೀಹರಿ ‘ನ್ಯೂಸ್ 9’ಗೆ ತಿಳಿಸಿದ್ದಾರೆ. ತುರ್ತು ಸಂದರ್ಭಗಳಿಗಾಗಿ ಎಕ್ಸ್‌ಪ್ರೆಸ್ ವೇಗಳ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗಳಿರಬೇಕು ಮತ್ತು ರಸ್ತೆ ತಡೆಗಳೂ ಇರಬೇಕು ಎಂದು ಕೇಂದ್ರ ಸರ್ಕಾರದ ನಿಯಮ ಹೇಳುತ್ತದೆ. ಇದಂತೆ, ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ 10 ಲೇನ್ಗಳದ್ದಾದರೂ 6 ಲೇನ್ಗಳನ್ನು ಪ್ರಮುಖ ಲೇನ್ಗಳೆಂದು ಪರಿಗಣಿಸಲಾಗುತ್ತದೆ. ಉಳಿದ ನಾಲ್ಕನ್ನು (ಎರಡೂ ಬದಿಯ ತಲಾ 2 ಲೇನ್) ಸರ್ವೀಸ್ ರಸ್ತೆ ಎಂದೇ ಪರಿಗಣಿಸಲಾಗುತ್ತದೆ.
ಎಕ್ಸ್‌ಪ್ರೆಸ್ ವೇ ಸಂಪೂರ್ಣವಾಗಿ ಕಾರ್ಯಾಚರಣೆಗೆ ತೆರೆದುಕೊಂಡ ಬಳಿಕ ಬೆಂಗಳೂರು – ಮೈಸೂರು ನಡುವಣ ಪ್ರಯಾಣದ ಸಮಯ 3.5 ಗಂಟೆಯಿಂದ 1.5 ಗಂಟೆಗೆ ಇಳಿಕೆಯಾಗಲಿದೆ. ಒಂದೂ ಕಾಲು ಗಂಟೆಯಲ್ಲೇ ಪ್ರಯಾಣಿಸಬಹುದು ಎಂದೂ ಕೆಲವು ಮೂಲಗಳು ಹೇಳಿವೆ.
ಬೆಂಗಳೂರು – ಮೈಸೂರಿನ ನಡುವಣ ಸಂಪರ್ಕದ ದೃಷ್ಟಿಯಿಂದ ಎಕ್ಸ್‌ಪ್ರೆಸ್ ವೇ ಮಹತ್ವದ್ದಾಗಿದೆ. ಅದೇ ರೀತಿ ಊಟಿ, ಕೇರಳ, ಕೊಡಗು ಪ್ರದೇಶಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿಯೂ ಪ್ರಮುಖವಾದದ್ದಾಗಿದೆ. ಅದೇ ರೀತಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದಲೂ ಪ್ರಮುಖವಾದದ್ದಾಗಿದೆ ಎಂದು ಸರ್ಕಾರ ಹೇಳಿದೆ.
ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರವನ್ನು ಇತ್ತೀಚೆಗೆ ಹೆದ್ದಾರಿ ಪ್ರಾಧಿಕಾರ ಬಿಡುಗಡೆ ಮಾಡಿತ್ತು. ನಿಗದಿಯಂತೆ ಈಗಾಗಲೇ ಟೋಲ್ ಸಂಗ್ರಹ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳುವ ಮುನ್ನ, ಉದ್ಘಾಟನೆಗೂ ಮೊದಲೇ ಹಾಗೂ ಸರ್ವೀಸ್ ರಸ್ತೆ ಕುರಿತ ಗೊಂದಲ ಬಗೆಹರಿಸದೇ ಟೋಲ್ ಸಂಗ್ರಹಿಸುವುದಕ್ಕೆ ಸಾರ್ವಜನಿಕರು, ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟೋಲ್ ಸಂಗ್ರಹ ಮುಂದೂಡಿಕೆ ಮಾಡಲಾಗಿತ್ತು.
ವಾಹನ | ಏಕಮುಖ ಸಂಚಾರ ದರ (ರೂ.ಗಳಲ್ಲಿ) | ಅದೇ ದಿನ ಮರು ಸಂಚಾರದ ದರ (ರೂ.ಗಳಲ್ಲಿ) | ಸ್ಥಳೀಯ ವಾಹನಗಳಿಗೆ ನಿಗದಿಪಡಿಸಿದ ದರ (ರೂ.ಗಳಲ್ಲಿ) | 1 ತಿಂಗಳ 50 ಸಂಚಾರದ ಪಾಸ್ ದರ (ರೂ.ಗಳಲ್ಲಿ) |
ಕಾರು, ಜೀಪು, ವ್ಯಾನ್ | 135 | 205 | 70 | 4525 |
ಲಘು ವಾಣಿಜ್ಯ/ ಸರಕು ವಾಹನ/ ಮಿನಿ ಬಸ್ | 220 | 320 | 110 | 7315 |
ಬಸ್/ಟ್ರಕ್ (ಡಬಲ್ ಆಕ್ಸೆಲ್) | 460 | 690 | 230 | 15325 |
ವಾಣಿಜ್ಯ ವಾಹನ (ಮೂರು ಆಕ್ಸೆಲ್) | 500 | 750 | 250 | 16715 |
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನಗಳು, ಬಹು ಆಕ್ಸೆಲ್ (6 ರಿಂದ 8) | 720 | 1080 | 360 | 24030 |
ಭಾರೀ ಗಾತ್ರದ ವಾಹನ (7ಕ್ಕೂ ಹೆಚ್ಚಿನ ಆಕ್ಸೆಲ್ | 880 | 1315 | 440 | 29255 |
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Thu, 9 March 23