Namma metro yellow line: ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ಶುರುವಾಗಲಿದೆ ಐದನೇ ರೈಲಿನ ಸಂಚಾರ
ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ 5ನೇ ರೈಲು ಸಂಚಾರ ಶುರುವಾಗಲಿದೆ. ಆಗಸ್ಟ್ 10 ರಂದು ಈ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆ ನಂತರ ಮೂರು ರೈಲುಗಳು 25 ನಿಮಿಷಕ್ಕೊಂದರಂತೆ ಸಂಚಾರ ಮಾಡುತ್ತಿದ್ದವು. ನಂತರ 4ನೇ ರೈಲಿನ ಸಂಚಾರಕ್ಕೂ ಚಾಲನೆ ಸಿಕ್ಕಿತ್ತು. ಈಗ 5ನೇ ರೈಲು ಕಾರ್ಯರೋಪಕ್ಕೆ ತರಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ಬೆಂಗಳೂರು, ಅಕ್ಟೋಬರ್ 1: ಪ್ರಧಾನಿ ನರೇಂದ್ರ ಮೋದಿಯವರಿಂದ (Narendra modi) ಉದ್ಘಾಟಿಸಲ್ಪಟ್ಟಿದ್ದ ಯೆಲ್ಲೋ ಲೈನ್ ಮೆಟ್ರೋ ಮತ್ತೊಮ್ಮೆ ಹೊಸ ಬೆಳವಣಿಗೆ ಕಂಡಿದೆ. ಮೊದಲು ಕೇವಲ 3 ರೈಲುಗಳ ಸಂಚಾರವಿತ್ತು. ನಂತರದಲ್ಲಿ ಇನ್ನೊಂದು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಈಗ ಸಂಚರಿಸಲಿರುವ ರೈಲುಗಳ ಸಂಖ್ಯೆಯನ್ನು 5 ಕ್ಕೆ ಏರಿಸಲು BMCRL ನಿರ್ಧಾರ ಮಾಡಿದೆ.
ಆಗಸ್ಟ್ 10 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೆಲ್ಲೋ ಮೆಟ್ರೋ ಲೈನ್ನ್ನು ಉದ್ಘಾಟಿಸಿದ್ದರು. 18.82 ಕಿಮೀ ಉದ್ದದ ಯೆಲ್ಲೋ ಲೈನ್ನಲ್ಲಿ ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರದ ನಡುವೆ 3 ರೈಲುಗಳಷ್ಟೇ ಸಂಚರಿಸುತ್ತಿದ್ದವು. 25 ನಿಮಿಷಗಳಿಗೊಂದು ರೈಲಿನ ಸೇವೆಯಿತ್ತು. ಸೆಪ್ಟೆಂಬರ್ 10 ರಂದು ರೈಲಿನ ಸಂಖ್ಯೆಯನ್ನು ನಾಲ್ಕಕ್ಕೇರಿಸಿದ್ದರು. ಅದರೊಂದಿಗೆ 19 ನಿಮಿಷಗಳಿಗೊಮ್ಮೆ ಒಂದು ರೈಲು ಸೇವೆ ಒದಗಿಸುತ್ತಿತ್ತು. ಈ ವ್ಯವಸ್ಥೆಗೀಗ ಇನ್ನೊಂದು ರೈಲು ಸೇರುವ ಸೂಚನೆಯಿದೆ.
ಹೊಸ ರೈಲಿನ ವ್ಯವಸ್ಥೆ ಹೇಗಿರಲಿದೆ?
ಹೊಸ ಬೊಗಿಗಳು ಕೋಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್ನಿಂದ ಹೊರಟು ಸೆಪ್ಟೆಂಬರ್ 19 ರಂದು ಬೆಂಗಳುರು ತಲುಪಿತ್ತು. ಬೆಂಗಳೂರಿನಲ್ಲಿ ಎಲ್ಲಾ ಬೋಗಿಗಳ ಜೋಡಣೆಯಾದ ಬಳಿಕ 20 ದಿನಗಳ ಪರೀಕ್ಷೆ ನಡೆಯಲಿದೆ. ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈಗಳು ಪರೀಕ್ಷೆಗೆ ಒಳಪಡಲಿವೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ Namma Metro Yellow Line: ನಮ್ಮ ಮೆಟ್ರೋ ಯೆಲ್ಲೋ ಲೈನ್ನಲ್ಲಿ ನಾಲ್ಕನೇ ಮೆಟ್ರೋ ರೈಲು ಸಂಚಾರ ಶುರು
ಹೊಸದಾಗಿ ಸೇರ್ಪಡೆಗೊಳ್ಳಲಿರುವ ಈ 5 ನೇ ರೈಲಿನಿಂದ ಮೆಟ್ರೋ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾದ ಜನದಟ್ಟಣೆ ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ. ನೂತನ ರೈಲು ಸೇವೆ ಪೂರ್ತಿಯಾಗಿ ಸಂವಹನ ಆಧಾರಿತ ರೈಲು ನಿಯಂತ್ರಣಕ್ಕೆ (CBTC) ಒಳಪಟ್ಟಿದೆ. ಇದರಿಂದಾಗಿ ನಮ್ಮ ಮೆಟ್ರೋದಲ್ಲಿ ಪ್ರಪ್ರಥಮ ಬಾರಿಗೆ ಚಾಲಕ ರಹಿತ ರೈಲು ಸಂಚಾರವಾಗಲಿದೆ. ಈ ವ್ಯವಸ್ಥೆಯು ಸೈದ್ಧಾಂತಿಕವಾಗಿ ಎರಡು ರೈಲು ಸಂಚಾರದ ಮಧ್ಯೆ ಸಮಯವನ್ನು ಉಳಿಸುವ ಭರವಸೆ ನೀಡಿದೆ. ಆರಂಭಿಕ ಹಂತದಲ್ಲಿ ತರಬೇತಿ ಪಡೆದ ಲೋಕೋಮೋಟಿವ್ ಪೈಲಟ್‌ಗಳಿಂದ ಹಸ್ತಚಾಲಿತ ಕಾರ್ಯಾಚರಣೆಯು ಮುಂದುವರೆಯಲಿದೆ.
ಮುರಿದುಬಿದ್ದ ಚೀನಾದೊಂದಿನ ಒಪ್ಪಂದವೇ ವಿಳಂಬಕ್ಕೆ ಕಾರಣ
ಸಿವಿಲ್ ಕಾಮಗಾರಿ ಒಂದು ವರ್ಷದ ಕೆಳಗೇ ಮುಗಿದಿದ್ದರೂ ಸ್ಟಾಕ್ ಸಂಗ್ರಹಣೆಯಲ್ಲಿ ವಿಳಂಬ ಸೃಷ್ಟಿಯಾಗಿತ್ತು. ಇದರಿಂದಾಗಿ 5ನೇ ರೈಲು ಸಂಚಾರ ತಡವಾಗಿತ್ತು. 2019ರಲ್ಲಿ ಚೀನಾದ CRRC ಕಂಪನಿಯು 216 ಕೋಚ್ಗಳನ್ನು ಪೂರೈಸುವುದಾಗಿ 1,578 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಮುರಿದುಬಿದ್ದ ನಂತರವೂ BMRCL ಹಲವಾರು ಬಾರಿ CRRC ಯನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿತ್ತು. ಅದರೊಂದಿಗೆ 372 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನೂ ನೀಡಿತ್ತು. ಕೊನೆಯಲ್ಲಿ ಟೀಟಾಘರ್ನೊಂದಿಗೆ ಜಂಟಿಯಾಗಿ ಈ ಒಪ್ಪಂದವನ್ನು ಮತ್ತೆ ಸ್ವೀಕರಿಸಿದೆ. ಸ್ವಲ್ಪ ತಡವಾಗಿಯಾದರೂ ಈಗ ರೈಲುಸೆಟ್ಗಳನ್ನು ಒದಗಿಸಲು ಮುಂದಾಗಿದೆ.




