ಆಜಾನ್​ ಶಬ್ದ ನಿಯಂತ್ರಣದಲ್ಲಿರಲಿ; ಬೆಂಗಳೂರಿನ 300ಕ್ಕೂ ಹೆಚ್ಚು ಮಸೀದಿಗೆಳಿಗೆ ನೋಟಿಸ್ ನೀಡಿದ ಪೊಲೀಸರು

| Updated By: Lakshmi Hegde

Updated on: Apr 23, 2022 | 11:43 AM

ಪೊಲೀಸರು ದೇಗುಲಗಳಿಗೆ ನೀಡಿದ ಈ ನೋಟಿಸ್​ನಿಂದ ವಿವಾದ ಸೃಷ್ಟಿಯಾಗಿತ್ತು. ಸರ್ಕಾರ, ಪೊಲೀಸರ ನಡೆಯನ್ನು ಹಿಂದು ಸಂಘಟನೆಗಳು ಟೀಕಿಸಿದ್ದವು. ಮಸೀದಿಗಳಲ್ಲಿ ಅಷ್ಟು ದೊಡ್ಡದಾಗಿ ಆಜಾನ್ ಕೂಗಿದರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ ಎಂಬ ಆರೋಪಗಳು ಬಲವಾಗಿದ್ದವು.

ಆಜಾನ್​ ಶಬ್ದ ನಿಯಂತ್ರಣದಲ್ಲಿರಲಿ; ಬೆಂಗಳೂರಿನ 300ಕ್ಕೂ ಹೆಚ್ಚು ಮಸೀದಿಗೆಳಿಗೆ ನೋಟಿಸ್ ನೀಡಿದ ಪೊಲೀಸರು
ಸಾಂಕೇತಿಕ ಚಿತ್ರ
Follow us on

ಬೆಂಗಳೂರಿನ ಪ್ರಮುಖ ದೇವಸ್ಥಾನಗಳಿಗೆ ಪೊಲೀಸರು ನೋಟಿಸ್ ಕೊಟ್ಟು, ಜೋರಾಗಿ ಗಂಟೆ ಬಾರಿಸಿದರೆ ಕೇಸ್​ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅದು ತೀವ್ರ ಟೀಕೆ, ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈಗ ಪೊಲೀಸರು ಬೆಂಗಳೂರಿನ ಸುಮಾರು 300 ಮಸೀದಿಗಳಿಗೆ ನೋಟಿಸ್​ ಕೊಟ್ಟು, ಆಜಾನ್​ ಕೂಗುವ (ಮಸೀದಿಗಳಲ್ಲಿ ಪ್ರಾರ್ಥನೆ)  ವೇಳೆ ಮೈಕ್​ನ ಶಬ್ದ ಮಟ್ಟವನ್ನು ಕಡಿಮೆ ಇಡುವಂತೆ ಸೂಚಿಸಿದ್ದಾರೆ. ಆಜಾನ್​ ವೇಳೆ ಧ್ವನಿವರ್ಧಕಗಳ ಶಬ್ದ ಮಟ್ಟವನ್ನು ಅತ್ಯಂತ ದೊಡ್ಡದಾಗಿ ಇಡಬಾರದು ಎಂದು ಈ ಹಿಂದೆಯೇ ಹೇಳಿದ್ದರೂ, ಅದನ್ನಿನ್ನೂ ಹಲವು ಮಸೀದಿಗಳು ಕಾರ್ಯಗತಗೊಳಿಸದೆ ಇರುವುದರಿಂದ  ಕಳೆದ ಎರಡು ತಿಂಗಳಿಂದ 300ಕ್ಕೂ ಹೆಚ್ಚು ಮಸೀದಿಗಳಿಗೆ ನೋಟಿಸ್​ ಕೊಟ್ಟಿದ್ದಾರೆ.

ಫೆಬ್ರವರಿಯಲ್ಲಿ ಬೆಂಗಳೂರು ಪೊಲೀಸರು ಬೆಂಗಳೂರಿನ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ ಸೇರಿ ಪ್ರಮುಖ ದೇಗುಲಗಳಿಗೆ ನೋಟಿಸ್ ನೀಡಿ, ಜೋರಾಗಿ ಗಂಟೆ ಬಾರಿಸುವಂತಿಲ್ಲ, ಉತ್ಸವ, ಮಹಾಮಂಗಳಾರತಿ ಹೊತ್ತಲ್ಲಿ ಢಮರುಗ ಬಾರಿಸುವಾಗ ಅತ್ಯಂತ ದೊಡ್ಡ ಶಬ್ದ ಬರಬಾರದು ಎಂದು ಹೇಳಿದ್ದರು. ನಿಗದಿತ ಡೆಸಿಬಲ್​​ಗಿಂತ ದೊಡ್ಡ ಶಬ್ದ ಬಂದರೆ ಕೇಸ್​ ಹಾಕುವ ಎಚ್ಚರಿಕೆಯನ್ನೂ ನೀಡಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಪತ್ರದ ಅನ್ವಯ ಈ ನೋಟಿಸ್ ಹೊರಡಿಸಿದ್ದಾಗಿಯೂ ನೋಟಿಸ್​​ನಲ್ಲಿ ಉಲ್ಲೇಖವಾಗಿತ್ತು.

ಆದರೆ ಪೊಲೀಸರು ದೇಗುಲಗಳಿಗೆ ನೀಡಿದ ಈ ನೋಟಿಸ್​ನಿಂದ ವಿವಾದ ಸೃಷ್ಟಿಯಾಗಿತ್ತು. ಸರ್ಕಾರ, ಪೊಲೀಸರ ನಡೆಯನ್ನು ಹಿಂದು ಸಂಘಟನೆಗಳು ಟೀಕಿಸಿದ್ದವು. ಮಸೀದಿಗಳಲ್ಲಿ ಅಷ್ಟು ದೊಡ್ಡದಾಗಿ ಆಜಾನ್ ಕೂಗಿದರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಹಿಂದುಗಳ ಪೂಜನೀಯ ಸ್ಥಳದಲ್ಲಿ ಇಂಥ ಆದೇಶ ಹೇರಿಕೆ ಮಾಡುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದರು. ಸುದ್ದಿಗೋಷ್ಠಿ ನಡೆಸಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​,  ಪೊಲೀಸರು ಹೀಗೆ ದೇವಸ್ಥಾನಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ನೋಟಿಸ್​ ನೀಡುವುದನ್ನು ಮುಂದುವರಿಸಿದರೆ ನಾವು ಉಗ್ರ ಹೋರಾಟ ನಡೆಸುತ್ತೇವೆ. ಮೊದಲು ಮಸೀದಿಗಳಿಗೆ ಹೋಗಲಿ. ಆಜಾನ್​ ಕೂಗುವಾಗ ಶಬ್ದ ನಿಯಂತ್ರಣ ಮಾಡಲು ಮೇ 1ರೊಳಗೆ ಕ್ರಮ ಕೈಗೊಳ್ಳಬೇಕು. ಅದಿಲ್ಲದರೆ ಇದ್ದರೆ ಮೇ 9ರಿಂದ ಎಲ್ಲ ಮಠ, ದೇಗುಲಗಳಲ್ಲಿ ಭಜನೆ, ಸುಪ್ರಭಾತ, ಮಂತ್ರಗಳನ್ನು ಉಚ್ಛಸ್ವರದಲ್ಲಿ ಹಾಕಲಾಗುವುದು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಸೋನು ಸೂದ್​ಗಾಗಿ ಸ್ಕ್ರಿಪ್ಟ್​ ಬದಲಾಯಿಸುತ್ತಿದ್ದಾರೆ ನಿರ್ದೇಶಕರು; ಅಚ್ಚರಿಯ ವಿಚಾರ ಬಿಚ್ಚಿಟ್ಟ ಸೋನು ಸೂದ್