
ಬೆಂಗಳೂರು, (ಸಪ್ಟೆಂಬರ್ 18): ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗುಂಡಿಗಳ (Bengaluru Road potholes) ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದು, ಪುಟ್ಟ ಪುಟ್ಟ ಮಕ್ಕಳು ಸಹ ಬೆಂಗಳೂರಿನ ರಸ್ತೆಗಳು ಮಾತನಾಡುವ ಸ್ಥಿತಿ ಬಂದಿದೆ. ಈ ಪರಿ ಬೆಂಗಳೂರಿನ ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಈ ಸಂಬಂಧ ಐಟಿ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೇ ಬೆಂಗಳೂರು ತೊರೆಯುವುದಾಗಿ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಕಂಪನಿ (Startup company) ಬ್ಲ್ಯಾಕ್‌ಬಕ್ ಬಹಿರಂಗವಾಗಿಯೇ ಹೇಳಿದೆ. ಇದಕ್ಕೆ ಬೆಂಗಳೂರು ಉಸ್ತುವಾರಿ ಸಚಿವ , ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ಸರ್ಕಾರಕ್ಕೆ ಬೆದರಿಸಲು, ಬ್ಯಾಕ್‌ಮೇಲ್ ಹಾಕುವುದು ಪ್ರಯೋಜನೆವಿಲ್ಲ. ಇದನ್ನೂ ನಾವು ಸಹ ಕೇರ್ ಮಾಡಲ್ಲ. ಈ ಮೂಲಕ ಬೆಂಗಳೂರು ತೊರೆಯುತ್ತೇವೆ ಎಂಬ ಕಂಪನಿಗಳ ನಡೆಗೆ ಸಿಡಿಮಿಡಿಗೊಂಡಿದ್ದಾರೆ.
ಬೆಂಗಳೂರು ಬಿಡಲು ಮುಂದಾದ ಕಂಪನಿಗಳ ನಡೆಯ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್ , ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನೀಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನ ತಡೆಯಲ್ಲ. ಕಂಪನಿಗಳು ತಮ್ಮ ಸ್ಥಳವನ್ನು ಬದಲಾಯಿಸುವ ನಿರ್ಧಾರವು ವ್ಯಾಪಾರ ಸಮಸ್ಯೆಗಳ ಕಾರಣದಿಂದಾಗಿರಬಹುದು ಎಂದು ಖಾರವಾಗಿ ಹೇಳಿದ್ದಾರೆ.
ಬೆಂಗಳೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ 112 ಕಿ.ಮೀ. ಫ್ಲೈಓವರ್‌ಗಳು ಮತ್ತು 44 ಕಿ.ಮೀ.ಗಿಂತ ಹೆಚ್ಚು ಎತ್ತರದ ಡಬಲ್ ಡೆಕ್ಕರ್ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಕೆಲಸ ಶೀಘ್ರದಲ್ಲಿಯೇ ಮುಕ್ತಾಯವಾಗಲಿವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ ಮತ್ತು ಪ್ರತಿದಿನ ನೂರಾರು ಕಂಪನಿಗಳು ಇಲ್ಲಿಗೆ ಬರುತ್ತಿವೆ ಎಂದು ತಿಳಿಸಿದರು.
ಬದ್ಧತೆಯಿಂದ ಕೆಲಸ ಮಾಡಿ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಹಣ ಬಿಡುಗಡೆಯಾಗಿದ್ದು, ಗುತ್ತಿಗೆದಾರರು ಕೆಲಸ ಕೈಗೊಂಡಿದ್ದಾರೆ. ಬೆಂಗಳೂರಿನ ಸ್ವಚ್ಛತೆ ಮತ್ತು ಗುಂಡಿಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ನಗರದ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಗುಂಡಿ ಸಮಸ್ಯೆ, ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರಿನಿಂದ ಹೊರ ಹೋಗುತ್ತೇವೆ ಎಂದು ಬ್ಲಾಕ್‌ಬಕ್ ಕಂಪನಿ ಸಿಇಒ ರಾಜೇಶ್ ಯಬಾಜಿ ಟ್ವೀಟ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಲವು ಉದ್ಯಮಿಗಳು ನಗರದ ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡಬೇಕು ಎಂದು ಸರ್ಕಾರ, ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 pm, Thu, 18 September 25