ಬೆಂಗಳೂರು: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ (KSRTC Bus) ಡಿಕ್ಕಿಯಾಗಿ ದಂಪತಿ ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು (Hoskote) ಮೈಲಾಪುರ ಗೇಟ್ ಬಳಿ ಭಾನುವಾರ ಮಧ್ಯರಾತ್ರಿ ನಡೆದಿದೆ. ಕಲ್ಲು ತುಂಬಿದ್ದ ಲಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆಂಧ್ರ ಮೂಲದ ಗಂಡ-ಹೆಂಡತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂವರು ಮಕ್ಕಳೂ ಸೇರಿದಂತೆ ಒಟ್ಟು 18 ಮಂದಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಗಂಭೀರವಾಗಿವೆ. ಗಾಯಾಳುಗಳನ್ನು ಹೊಸಕೋಟೆಯ ಖಾಸಗಿ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಂಧ್ರ ಪ್ರದೇಶದ ಬಲಿಜಖಂಡ್ರಿಗದಿಂದ ಬಸ್ಸು ಬೆಂಗಳೂರಿಗೆ ಬರುತ್ತಿತ್ತು.
ಪೊಲೀಸರ ಬಲೆಗೆ ಬಿದ್ದ ಹೆದ್ದಾರಿ ಕಳ್ಳರು
ಬೆಂಗಳೂರು: ಜಾಲಿ ಟ್ರಿಪ್ ನೆಪದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಸಾಲುಸಾಲು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಹೆದ್ದಾರಿ ಕಳ್ಳರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರದ ಮೋಹನ್, ಸಂಪತ್ ಹಾಗೂ ಅಶೋಕ್ ಬಂಧಿತರು. ಜೈಲಿನಲ್ಲಿ ಪರಿಚಯವಾಗಿದ್ದ ಕದಿರಿ ಮೂಲದ ಇತರರೊಂದಿಗೆ ಸೇರಿಕೊಂಡು ಕಳ್ಳತನವನ್ನು ಆರಂಭಿಸಿದ್ದರು. ಕೆ.ಆರ್.ಪುರಂನಲ್ಲಿ ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಟಿಂಗ್ ಶಾಪ್ ಹಾಗೂ ಬಂಡೆ ಒಡೆಯುವ ಕೆಲಸ ಮಾಡುತ್ತಿದ್ದ ಆರೋಪಿಗಳು ಆಗಾಗ ಒಟ್ಟಿಗೆ ಸೇರಿ ಜಾಲಿ ರೈಡ್ ಎಂದು ದೇಶ ಸಂಚಾರ ಆರಂಭಿಸುತ್ತಿದ್ದರು. ರಸ್ತೆ ಬದಿಯ ಅಂಗಡಿಗಳ ಶಟರ್ ಮುರಿದು ಕಳ್ಳತನ ಮಾಡುತಿದ್ದರು. ಕಳ್ಳತನದ ವೇಳೆ ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಕಾರಿನಲ್ಲಿ ಬಂದು ಯಾವುದೇ ಸುಳಿವು ಉಳಿಸದೇ ಕಳ್ಳತನ ಮುಗಿಸಿ ಹೋಗುತ್ತಿದ್ದರು.
ಕೆ.ಆರ್.ಪುರಂನಲ್ಲಿ ನಡೆದಿದ್ದ ಅಂಗಡಿಯೊಂದರ ಕಳ್ಳತನದ ತನಿಖೆ ಆರಂಭಿಸಿದಾಗ ಆರೋಪಿಗಳನ್ನು ಪತ್ತೆ ಮಾಡಲಾಯಿತು. ಅರೋಪಿಗಳಿಂದ ಮೊಬೈಲ್ಗಳು ಹಾಗೂ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳು ಬಳಸಿದ ಕಾರನ್ನು ಪತ್ತೆ ಮಾಡಲಾಗಿದೆ. ಈ ವೇಳೆ ಆರೋಪಿಗಳ ಮತ್ತೊಂದು ಮಾದರಿಯ ಕಳ್ಳತನದ ಕೃತ್ಯವೂ ಬಯಲಾಗಿತ್ತು.
ಎಟಿಎಂಗಳಿಗೆ ಸಭ್ಯರಂತೆ ಪ್ರವೇಶಿಸುತ್ತಿದ್ದ ಆರೋಪಿಗಳು, ಹಣ ವಿತ್ಡ್ರಾ ಮಾಡಿಕೊಡುವ ನೆಪದಲ್ಲಿ ಕಾರ್ಡ್ ಅಪಹರಿಸುತ್ತಿದ್ದರು. ಬೆಂಗಳೂರಿನ ಜೊತೆಗೆ ಇತರ ನಾಲ್ಕು ರಾಜ್ಯಗಳಲ್ಲಿಯೂ ಇಂಥದ್ದೇ ಅಪರಾಧ ಎಸಗಿದ್ದರು. ಈ ಗುಂಪಿನ ನಾಯಕ ಕೃಷ್ಣಮೂರ್ತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಇದೀಗ ಆತನ ಇತರ ಸಹಚರರು ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿಗಳಿಂದ ನಕಲಿ ಡೆಬಿಟ್ ಕಾರ್ಡ್ಗಳು, ಕೃತ್ಯಕ್ಕೆ ಬಳಸಿದ್ದ ಕಾರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ಇತರ ರಾಜ್ಯಗಳ ಪೊಲೀಸರು ಕೆ.ಆರ್.ಪುರಂ ಪೊಲೀಸರ ವಶದಲ್ಲಿರುವವರನ್ನು ವಿಚಾರಣೆಗಾಗಿ ಕೋರುತ್ತಿದ್ದಾರೆ.
Published On - 7:06 am, Mon, 3 October 22