ಇನ್ನೋವಾ ಕಾರಿನಲ್ಲಿ ಲಕ್ಷ ಲಕ್ಷ ಹಣ ಲೆಕ್ಕ ಹಾಕ್ತಿದ್ದ ಆಸಾಮಿಗಳು ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದರು, ಮುಂದೇನಾಯ್ತು?
ಹುಸ್ಕೂರು ಗ್ರಾಮದ ಹಿಂದಿನ ನಿರ್ಜನ ಪ್ರದೇಶದಲ್ಲಿ ಇನ್ನೋವಾ ಕಾರೊಂದು ಬಹಳ ಹೊತ್ತು ನಿಂತಿದನ್ನು ಗಮನಿಸಿದ ಇನ್ಸ್ಪೆಕ್ಟರ್ ಜಗದೀಶ್ ಅವರು ಕಾರಲ್ಲಿ ಏನ್ ನಡೀತಿದೆ ಅಂತ ವಿಚಾರಿಸಲು ಹೋದಾಗ ಇಬ್ಬರು ಅಸಾಮಿಗಳು ಅದರಲ್ಲಿ ಲಕ್ಷಾಂತರ ಹಣದ ಜತೆ ಕೂತಿದ್ದು ಕಂಡು ಬಂತು!
ಆನೇಕಲ್: ಆ ಪೊಲೀಸರು (Anekal police) ಎಂದಿನಂತೆ ಗಸ್ತು ತಿರುಗುತ್ತಿದ್ದರು. ಊರಲ್ಲಿ ಚುನಾವಣೆ ಬೇರೆ ಇತ್ತು. ಅದಕ್ಕೆ ಸ್ವಲ್ಪ ಹೆಚ್ಚು ಗತ್ತಿನಲ್ಲಿಯೇ ಗಸ್ತು ತಿರುಗುತ್ತಿದ್ದರು. ಸರಿಯಾಗಿ ಅದೇ ವೇಳೆ ನಿರ್ಜನ ಪ್ರದೇಶದಲ್ಲಿ ಕಾರೊಂದು (innova car) ಕಾಣಿಸಿತ್ತು. ಅಲ್ಲೇನು ನಡೀತಿದೆ ಅಂತ ವಿಚಾರಣೆಗೆ ಮುಂದಾದಾಗ ಅದರಲ್ಲಿದ್ದ ಇಬ್ಬರು ಅಸಾಮಿಗಳು ಕಂತೆ ಕಂತೆ ನೋಟು ಎಣಿಸುತ್ತಿರುವುದು ಕಣ್ಣಿಗೆ ಬಿದ್ದಿದೆ. ಈ ಹಣ (money) ಎಲ್ಲಿಂದ ಬಂತು? ಅಂತಾ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆದರೆ ಅವರು ತುಟಿ ಪಿಟಿಕ್ ಅನ್ನದೆ ಸುಮ್ಮನಾಗಿದ್ದಾರೆ. ಪೊಲೀಸರಿಗೆ ಆಗ ಅನುಮಾನ ಹೆಚ್ಚಾಗಿದೆ. ಆದರೆ ಮುಂದೆ ಆಗಿದ್ದೇ ಬೇರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರಿನಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ಇತ್ತು. ಈ ಹಿನ್ನೆಲೆ ಹೆಬ್ಬಗೋಡಿ ಉಪ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಯಾವುದೇ ಅಹಿತಕರ ಘಟನೆ ಆಗಬಾರದೆಂದು ಇಡೀ ಊರು ಸುತ್ತಾಮುತ್ತಾ ರೌಂಡ್ಸ್ ಹೊಡೀತಿದ್ರು..
ಈ ವೇಳೆ ಹುಸ್ಕೂರು ಗ್ರಾಮದ ಹಿಂದಿನ ನಿರ್ಜನ ಪ್ರದೇಶದಲ್ಲಿ ಇನ್ನೋವಾ ಕಾರೊಂದು ಬಹಳ ಹೊತ್ತು ನಿಂತಿದನ್ನು ಗಮನಿಸಿದ ಇನ್ಸ್ಪೆಕ್ಟರ್ ಜಗದೀಶ್ ಅವರು ಕಾರಲ್ಲಿ ಏನ್ ನಡೀತಿದೆ ಅಂತ ವಿಚಾರಿಸಲು ಹೋದಾಗ ಇಬ್ಬರು ಅಸಾಮಿಗಳು ಅದರಲ್ಲಿ ಲಕ್ಷಾಂತರ ಹಣದ ಜತೆ ಕೂತಿದ್ದು ಕಂಡು ಬಂತು! ಅವರ ನಡೆ ಪೊಲೀಸರಿಗೆ ಅನುಮಾನಸ್ಪಾದವಾಗಿ ಕಂಡಿದೆ. ಹಾಗಾಗಿ ಹಣದ ಬಗ್ಗೆ ದಾಖಲೆ ಕೇಳಿದಾಗ ಅಬ್ಬೆಬ್ಬೆಬ್ಬೆ ಎಂದು ತೊದಲಿದ್ದಾರೆ ಆ ವ್ಯಕ್ತಿಗಳು. ತಮ್ಮ ಬಳಿ ಇರುವ ಬರೊಬ್ಬರಿ ಹತ್ತು ಲಕ್ಷದ ಬಗ್ಗೆ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ ಎಂದು ಘಟನೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಕೆಎ 0603 ನಂಬರ್ ಪ್ಲೇಟಿನ ಇನ್ನೊವಾ ಕಾರಿನಲ್ಲಿದ್ದ ಆ ಇಬ್ಬರು ವ್ಯಕ್ತಿಗಳೆಂದ್ರೆ ಬೀರಗೊಂಡನಹಳ್ಳಿ ನಿವಾಸಿಯಾದ ಹುಸ್ಕೂರು ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ಮಲ್ಲೇಶ್ ಹಾಗೂ ನೆಲಮಂಗಲ ನಿವಾಸಿ ರಾಜೇಶ್. ಇವರಿಬ್ಬರೂ ಅಷ್ಟು ಹಣದ ಜತೆ ನಿರ್ಜನ ಪ್ರದೇಶದಲ್ಲಿ, ಅದೂ ರಾತ್ರಿ ವೇಳೆ ಏನು ಮಾಡ್ತಾ ಇದ್ರು? ಈ ಹಣ ಯಾರದ್ದು? ಅದ್ರಲ್ಲೂ ಅದೇ ದಿನ ಹುಸ್ಕೂರು ಗ್ರಾಮದಲ್ಲಿ ಅಧ್ಯಕ್ಷರ ಚುನಾವಣೆ ಬೇರೆ ಇತ್ತು! ಹಾಗಾಗಿ ಪೊಲೀಸರು ಇವರಿಬ್ಬರ ನಡುವಳಿಕೆ ಮೇಲೆ ಮತ್ತಷ್ಟು ಅನುಮಾನಗೊಂಡು ಸೂಕ್ತ ದಾಖಲೆ ತೋರಿಸಿ, ದುಡ್ಡು ತೆಗೆದುಕೊಂಡು ಹೋಗಿ ಎಂದು ಅಷ್ಟೂ ಹಣವನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹ್ಯಾಂಡೋವರ್ ಮಾಡಿದ್ದಾರೆ.
ಇನ್ನು ಈ ಹಣದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಹುಸ್ಕೂರು ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಮಲ್ಲೇಶ್, ಈ ಹಣ ತಮ್ಮ ತಮ್ಮನದ್ದಾಗಿದೆ. ಅದು ಅಕ್ಕನ ಮಗಳ ಮದುವೆಗಾಗಿ ವಿತ್ ಡ್ರಾ ಮಾಡಿ ಕೊಟ್ಟಿದ್ದ ಹಣ. ಅದನ್ನೇ ನಾನು ಅವರಿಗೆ ಕೊಡಬೇಕಿತ್ತು. ಅದನ್ನು ನಾನು ಇಟ್ಟುಕೊಂಡಿದ್ದೆ ಅಂತ ಹೇಳಿದ್ದಾರೆ. ಆದರೆ ಮದುವೆಗೆ ನೀಡಬೇಕಿದ್ದ ಹಣ ನೇರವಾಗಿ ಮನೆಗೆ ಕೊಡದೇ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಚರ್ಚೆ ಮಾಡಬೇಕಾದ ಅವಶ್ಯಕತೆ ಏನಿತ್ತು? ಎಂಬ ಪ್ರಶ್ನೆ ನಮ್ಮ ಪೊಲೀಸರನ್ನು ಇನ್ನೂ ಕಾಡುತ್ತಲೇ ಇದೆ!
ವರದಿ: ಸಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್