ಬೆಂಗಳೂರು: ನಗರದ ಮಾಗಡಿ ರಸ್ತೆ ಟೋಲ್ಗೇಟ್ ಬಳಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣ (Magadi Road Hit And Run Case) ಸಂಬಂಧ ಬೈಕ್ ಸವಾರ ಸುಹೇಲ್ ಅಲಿಯಾಸ್ ಸಾಹಿಲ್ ಸಯ್ಯದ್ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ವಾಹನಕ್ಕೆ ಡಿಕ್ಕಿ ಹೊಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ನನ್ನ ತಪ್ಪಿಲ್ಲ, ನಾನು ರಾಂಗ್ ರೂಟ್ನಲ್ಲಿ ಬಂದಿಲ್ಲ, ಜನರು ಥಳಿಸುತ್ತಾರೆ ಎಂಬ ಭಯದಿಂದ ಬೈಕ್ ವೇಗವಾಗಿ ಓಡಿಸಿದ್ದೇನೆ ಎಂದು ಹೇಳಿದ್ದಾನೆ. ಘಟನೆ ಬಗ್ಗೆ ಮಾತನಾಡಿದ ಗಾಯಾಳು ಕಾರು ಚಾಲಕ ಮುತ್ತಪ್ಪ ಶಿವಯೋಗಿ ಕಂಠಪ್ಪ (71), ಚಂದ್ರಾಲೇಔಟ್ನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಬೊಲೆರೊಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಕ್ಷೆಮೆಯೂ ಕೇಳದೆ ಪರಾರಿಯಾಗಲು ಯತ್ನಿಸಿದ ಹಿನ್ನಲೆ ಆತನನ್ನು ಹಿಡಿಯಲು ಮುಂದಾದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದರಾಜನಗರ ಪೊಲೀಸರು, ಸುಹೇಲ್ನನ್ನು ವಿಚಾರಣೆ ನಡೆಸುತ್ತಿದ್ದು, ವಾಹನಕ್ಕೆ ಡಿಕ್ಕಿ ಹೊಡೆದಿದ್ದು ನಿಜ, ನನ್ನ ಬೈಕ್ಗೂ ಡ್ಯಾಮೇಜ್ ಆಗಿದೆ. ನಾನು ಯಾವುದೇ ರಾಂಗ್ ರೂಟ್ನಲ್ಲಿ ಬರಲಿಲ್ಲ ಎಂದಿದ್ದಾನೆ. ಅಲ್ಲದೆ, ಜನರು ಥಳಿಸುತ್ತಾರೆಂಬ ಭಯದಿಂದ ಬೈಕ್ ತೆಗೆದುಕೊಂಡು ಹೋದೆ. ನಾನು ಬೈಕ್ ಓಡಿಸುವಾಗ ಅವರು ಬಿಟ್ಟುಬಿಡ್ತಾರೆ ಅನ್ಕೊಂಡೆ. ಆದರೆ ಅವರು ಬಿಡಲಿಲ್ಲ. ವೇಗವಾಗಿ ಹೋದರೂ ಗಾಡಿಯನ್ನು ಹಿಡಿದುಕೊಂಡು ಬಂದುಬಿಟ್ಟರು. ನಾನು ಭಯದಿಂದ ಆ ರೀತಿ ಮಾಡಿದ್ದೇನೆ ಎಂದಿದ್ದಾನೆ. ನನ್ನನ್ನು ತಡೆದ ಜನರು ಹಲ್ಲೆ ಮಾಡಲು ಮುಂದಾದರು. ಮಾಗಡಿ ರಸ್ತೆಯಿಂದ ನಾಯಂಡಹಳ್ಳಿಯಲ್ಲಿರುವ ನನ್ನ ನಿವಾಸಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರ ಮುಂದೆ ಸುಹೇಲ್ ಹೇಳಿಕೊಂಡಿದ್ದಾನೆ.
ನಾನು ಮೂಲತಃ ವಿಜಯಪುರ ಜಿಲ್ಲೆಯವನು. 54 ವರ್ಷಗಳಿಂದ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನೆಲೆಸಿದ್ದೇನೆ. ಚಂದ್ರಾಲೇಔಟ್ನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಿಂದಿನಿಂದ ಬಂದು ಬೊಲೆರೊಗೆ ಡಿಕ್ಕಿ ಹೊಡೆಸಿದ್ದಾನೆ. ಸ್ಥಳದಲ್ಲೇ ವಾಹನ ನಿಲ್ಲಿಸಿ ಕ್ಷಮೆಯಾಚಿಸಿದ್ದರೆ ಬಿಟ್ಟುಬಿಡುತ್ತಿದ್ದೆ. ಆದರೆ ಆತ ಯಾವುದೇ ಮಾತನಾಡದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದರು.
ಇದನ್ನೂ ಓದಿ: ಬೆಂಗಳೂರು: ಕಾರು ಚಾಲಕನನ್ನು ದರದರನೆ 1ಕಿ.ಮೀ ಎಳೆದೊಯ್ದ ಬೈಕ್ ಸವಾರ: ಇಲ್ಲಿದೆ ಭಯಾನಕ ವಿಡಿಯೋ
ಕ್ಷಮೆ ಕೇಳದೆ ಪರಾರಿಯಾಗಲು ಯತ್ನಿಸಿದ ಹಿನ್ನಲೆ ಏನಾದರೂ ಸರಿ ಆತನನ್ನು ಬಿಡಬಾರದು ಎಂದು ನಿರ್ಧರಿಸಿ ದ್ವಿಚಕ್ರ ವಾಹನವನ್ನು ಹಿಡಿದುಕೊಂಡು ಜೋತುಬಿದ್ದೆ. ನನ್ನನ್ನು ಬೀಳಿಸಲು ಬಹಳಷ್ಟು ಯತ್ನಿಸಿದ. ಈ ವೇಳೆ ಜನರು ಬೆನ್ನತ್ತುತ್ತಿದ್ದಂತೆ ಸ್ಪೀಡ್ ಹೆಚ್ಚಿಸಿದ್ದಾನೆ. ಆದರೂ ಸಾರ್ವಜನಿಕರು ಇವನನ್ನು ಅಡ್ಡಗಟ್ಟಿ ಹಿಡಿದು ನನ್ನನ್ನು ರಕ್ಷಿಸಿದರು. ಸಾರ್ವಜನಿಕರೇ ನನ್ನನ್ನು ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಯಾವುದೇ ಕಾರಣಕ್ಕೂ ಪ್ರಕರಣವನ್ನು ಇಷ್ಟಕ್ಕೆ ಬಿಡುವ ಪ್ರಶ್ನೆಯೇ ಇಲ್ಲ. ದುರಹಂಕಾರಿ ದ್ವಿಚಕ್ರ ವಾಹನ ಸವಾರನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮುತ್ತಪ್ಪ ಟಿವಿ9ಗೆ ಮಾಹಿತಿ ನೀಡಿದರು.
ಹಿಟ್ ಆಂಡ್ ರನ್ ಪ್ರಕರಣ ಸಂಬಂಧ ಗೋವಿಂದರಾಜನಗರ ಸಂಚಾರಿ ಪೊಲೀಸರು ಗಾಯಾಳು ಚಾಲಕ ಮುತ್ತಪ್ಪ ಮತ್ತು ಅವರ ಪುತ್ರನಿಂದ ಹೇಳಿಕೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಾಗಡಿ ರಸ್ತೆ ಠಾಣಾ ಪೊಲೀಸರು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೊಂದೆಡೆ ವಿಜಯನಗರ ಉಪವಿಭಾಗದ ಎಸಿಪಿ ರವಿ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಹೊಸಹಳ್ಳಿ ರಸ್ತೆಯಿಂದ ಮಾಗಡಿ ಟೋಲ್‌ಗೇಟ್‌ವರೆಗೆ ಸ್ಥಳ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಅಮಾನವೀಯ ಕೃತ್ಯ ಹಿನ್ನಲೆ ಕರೆಕ್ಷನ್ ಮಾಗಡಿ ರೋಡ್ ಸಂಚಾರಿ ಠಾಣೆ ಹಾಗೂ ಅಪಘಾತಕ್ಕೆ ಸಂಬಂಧಿಸಿದಂತೆ ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾತನಾಡಿದ ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಬೊಲೇರೋ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ನಂತರ ಇಬ್ಬರ ಮಧ್ಯೆ ಜಗಳವಾಗಿದೆ. ಆ ನಂತರ ಅವರು ಹಿಂದೆಯಿಂದ ಗಾಡಿಯನ್ನು ಹಿಡಿದುಕೊಂಡಿದ್ದಾರೆ. ಆದರೂ ಆ ಯುವಕ ಹಾಗೆಯೇ ಗಾಡಿ ಚಲಾಯಿಸಿಕೊಂಡು ಬಂದಿದ್ದಾನೆ. ಈ ರೀತಿಯಾಗಿ ಘಟನೆ ನಡೆಯಬಾರದಿತ್ತು. ಘಟನೆ ಸಂಬಂಧ ತನಿಖೆ ಮಾಡುತ್ತೇವೆ. ಆನಂತರ ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಅಂತ ನೋಡುತ್ತೇವೆ ಎಂದರು.
ನಿಂತಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಚಾಲಕ ಕಾರಿನಿಂದ ಇಳಿದು ಪ್ರಶ್ನಿಸುತ್ತಿದ್ದಾಗಲೇ ಬೈಕ್ ಸವಾರ ತಪ್ಪಿಸಲು ಯತ್ನಿಸಿದ್ದು, ಕಾರು ಚಾಲಕ ಬೈಕ್ ಹಿಂಬದಿ ಹಿಡಿದ್ದಿದ್ದಾರೆ. ನಾವು ಆತನನ್ನು ಹಿಡಿಯಲು ಮುಂದಾದೆವು. 70-80 ಕಿ.ಮೀ ವೇಗದಲ್ಲಿ ಸವಾರ ದ್ವಿಚಕ್ರ ವಾಹನವನ್ನು ಓಡಿಸಿದ್ದಾನೆ. ನಾವು ವೇಗವಾಗಿ ಚಲಾಯಿಸಿ ದ್ವಿಚಕ್ರ ವಾಹನವನ್ನು ಅಡ್ಡ ಹಾಕಿದೆವು. ನಾವು ಹಿಡಿಯಲು ಮುಂದಾದ ನಮಗೆ ಒದೆಯುವ ಯತ್ನ ಮಾಡಿದ್ದಾನೆ. ಈ ವೇಳೆ ಆಟೋ ಬಂದು ದ್ವಿಚಕ್ರ ವಾಹನಕ್ಕೆ ಅಡ್ಡ ನಿಂತಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ಬಲಿ: ಟಿಪ್ಪರ್ ಚಾಲಕ ಪರಾರಿ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಪ್ಪ ಅವರ ಆರೋಗ್ಯ ವಿಚಾರಿಸಲು ಸಚಿವ ಸೋಮಣ್ಣ ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ಆರೋಪಿ ದ್ವಿಚಕ್ರ ವಾಹನದ ಸವಾರನ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಲಿದೆ. ಗಾಯಾಳು ಮುತ್ತಪ್ಪಗೆ ವೈದ್ಯರು ಎಕ್ಸ್‌ರೇ ತೆಗೆದಿದ್ದಾರೆ ಎಂದರು. ಅಲ್ಲದೆ, ಆರೋಪಿ ಚಾಲಕ ಉದ್ಧಟತನ ಮೆರೆದಿದ್ದಾನೆ. ವೃದ್ಧನನ್ನು ಎಳೆದೊಯ್ದಿದ್ದು ತಪ್ಪು. ಮುತ್ತಪ್ಪರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಕೊಡಿಸುವೆ ಎಂದರು.
ಮುತ್ತಪ್ಪಗೆ ಚಿಕಿತ್ಸೆ ನೀಡುತ್ತಿರುವ ವಿಜಯನಗರದ ಖಾಸಗಿ ಆಸ್ಪತ್ರೆಯ ವೈದ್ಯೆ ಹೇಳಿಕೆ ನೀಡಿದ್ದು, ಆಸ್ಪತ್ರೆಗೆ ಗಾಯಾಳು ಮುತ್ತಪ್ಪ ಅವರ ಎಕ್ಸ್‌ರೇ ಕೂಡ ಮಾಡಿದ್ದೇವೆ. ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Tue, 17 January 23