ಬೆಂಗಳೂರು: ಸಾಲ ಕೊಟ್ಟವರ ಮನೆಯಲ್ಲೇ ಕನ್ನ; ತಂಗಿ ಕೃತ್ಯಕ್ಕೆ ಅಣ್ಣ ಸಾಥ್, ಆರು ಜನರ ಬಂಧನ
ಬೆಂಗಳೂರಿನಲ್ಲಿ ಸಾಲ ತೀರಿಸಲು ಸಾಲ ಕೊಟ್ಟವರ ಮನೆಯಲ್ಲೇ ಕಳ್ಳತನ ಮಾಡಿದ ಆರು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಉದ್ಯಮಿಯ ಮನೆಯಲ್ಲಿ ಗ್ಯಾಂಗ್ ಕಳತನ ಮಾಡಿತ್ತು. ಸದ್ಯ ಪೊಲೀಸರು ಬಂಧಿತರಿಂದ 9.9 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನೆಲಮಂಗಲ, ಆಗಸ್ಟ್ 17: ಸಾಲ ತೀರಿಸಲು ಸಾಲ ಕೊಟ್ಟವರ ಮನೆಯಲ್ಲೇ ಕಳ್ಳತನ (Theft) ಮಾಡಿ ಗ್ಯಾಂಗ್ವೊಂದು ಸಿಕ್ಕಿಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸದ್ಯ ಬಾಗಲಗುಂಟೆ ಠಾಣೆಯ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದು (Arrest), 9.9 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಕುಖ್ಯಾತ ಕಳ್ಳ ಮೋರಿ ರಾಜ, ವೆಂಕಟೇಶ್, ಕವಿತಾ, ಹರೀಶ್, ನಾಗರಾಜ್ ಮತ್ತು ಪ್ರತಾಪ್ ಬಂಧಿತರು. ಘಟನೆ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ನೇಹ ಧಮ್ ಬಿರಿಯಾನಿ ಹೆಸರಿನ ಹೋಟೆಲ್ ನಡೆಸುತ್ತಿದ್ದ ಉದ್ಯಮಿ ಮಂಗಳಾ ಎಂಬುವವರ ಬಳಿ ಕವಿತಾ ಸಾಲ ಪಡೆದಿದ್ದಳು. ಕೊಟ್ಟ ಸಾಲಕ್ಕೆ ಮಂಗಳಾ ಅಂಗ್ರಿಮೆಂಟ್ ಮಾಡಿಕೊಂಡಿದ್ದರು. ಸಾಲ ವಾಪಸ್ ನೀಡಲಾಗದೆ ಮಂಗಳಾ ಮನೆಯಲ್ಲಿ ಅಣ್ಣ ವೆಂಕಟೇಶ್ ಜೊತೆ ಸೇರಿ ಕಳ್ಳತನಕ್ಕೆ ಕವಿತಾ ಪ್ಲ್ಯಾನ್ ಮಾಡಿದ್ದಳು.
ಇದನ್ನೂ ಓದಿ: ಫಾರ್ವರ್ಡ್ ಮೆಸೇಜ್ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ, ಪೊಲೀಸರೇ ಶಾಕ್!
ವೆಂಕಟೇಶ್ಗೆ ಕುಖ್ಯಾತ ಕಳ್ಳ ಮೋರಿ ರಾಜ ಪರಿಚಯ ಹಿನ್ನೆಲೆ ಸಹಚರರ ಜತೆ ಸೇರಿ ಮಂಗಳಾ ಮನೆಯಲ್ಲಿ ರಾಜ ಕಳ್ಳತನ ಮಾಡಿದ್ದ. ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ್ದರು. ಈ ಕುರಿತಾಗಿ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 6 ಆರೋಪಿಗಳನ್ನು ಬಂಧಿಸಿದ್ದಾರೆ. ಮೋರಿ ರಾಜನ ವಿರುದ್ಧ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ.
ಮೋಟಾರು ಪಂಪ್ ಕೇಬಲ್ ಕಳ್ಳತನ
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತರ ಜಮೀನಿನಲ್ಲಿ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೋರ್ವೆಲ್ನಲ್ಲಿನದ್ದ ಮೋಟಾರು ಪಂಪ್ ಕೇಬಲ್ ಕಳ್ಳತನ ಮಾಡಿದ್ದಾರೆ. ತೊರಗನದೊಡ್ಡಿ, ಹೊಸಹಳ್ಳಿ ಗ್ರಾಮದಲ್ಲಿ ರೈತರ ಹೊಲಗಳಲ್ಲಿ ಕಳ್ಳತನ ನಡೆದಿದೆ. ಸದ್ಯ ಸ್ಥಳಕ್ಕೆ ಬೂದಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮನೆಗೆ ನುಗ್ಗಿದ ಮುಸುಕುಧಾರಿಗಳು: ಚಿನ್ನದ ಸರ ಕದ್ದು ಪರಾರಿ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಮನೆಗೆ ನುಗ್ಗಿದ ಮುಸುಕುಧಾರಿಗಳು ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿ ಆಗಿರುವಂತಹ ಘಟನೆ ನಡೆದಿದೆ. ಚಿರಡೋಣಿಯ ಸಿಎಚ್ ಸತ್ಯನಾರಾಯಣ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಇದನ್ನೂ ಓದಿ: ಬಳ್ಳಾರಿ: ಮಧ್ಯರಾತ್ರಿ ಎಟಿಎಂ ಕಳವು ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್, ರೋಚಕ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ
ರಾತ್ರಿ ಹೊತ್ತಲ್ಲಿ ಇಬ್ಬರು ಮುಸುಕುಧಾರಿಗಳಿಂದ ಕೃತ್ಯವೆಸಲಾಗಿದ್ದು, ಮನೆಯಲ್ಲಿ ಸತ್ಯನಾರಾಯಣ ಅವರ ತಾಯಿ ವೀರಯ್ಯಮ್ಮ ಹಾಗೂ ಪತ್ನಿ ಸುಮಲತಾ ಇಬ್ಬರೇ ಇದ್ದಾಗ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ ವೀರಯ್ಯಮ್ಮ ಕೊರಳಲ್ಲಿದ್ದ 50 ಗ್ರಾಂ ಹಾಗೂ ಸುಮಲತಾರ 60 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








