Birthday Party: ಯುವಕರ ತಂಡ ಬರ್ತಡೆ ಪಾರ್ಟಿ ಮುಗಿಸಿಕೊಂಡು ಮೂರು ಕಾರುಗಳಲ್ಲಿ ಬರುವಾಗ ಅಪಘಾತ: ಒಬ್ಬ ಸಾವು, ಮತ್ತಿಬ್ಬರು ಗಂಭೀರ

| Updated By: ಸಾಧು ಶ್ರೀನಾಥ್​

Updated on: Feb 02, 2023 | 12:00 PM

ಮೃತ ರೋಹಿತ್ ಸೇರಿದಂತೆ ಗಾಯಾಳುಗಳು ಸ್ನೇಹಿತರಾಗಿದ್ದು, ತಾವರೆಕೆರೆ ಬಳಿ ಬರ್ತಡೆ ಪಾರ್ಟಿಯೊಂದಕ್ಕೆ ತೆರಳಿದ್ದರು. ಮೂರು ಕಾರಿನಲ್ಲಿ ತೆರಳುತ್ತಿದ್ದ ಸ್ನೇಹಿತರ ತಂಡದ ಅತೀ ವೇಗದ ಚಾಲನೆಯಿಂದ ಮೃತ ರೋಹಿತ್ ಚಲಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ.

Birthday Party: ಯುವಕರ ತಂಡ ಬರ್ತಡೆ ಪಾರ್ಟಿ ಮುಗಿಸಿಕೊಂಡು ಮೂರು ಕಾರುಗಳಲ್ಲಿ ಬರುವಾಗ ಅಪಘಾತ: ಒಬ್ಬ ಸಾವು, ಮತ್ತಿಬ್ಬರು ಗಂಭೀರ
ಬರ್ತಡೆ ಪಾರ್ಟಿ ಮುಗಿಸಿಕೊಂಡು ಮೂರು ಕಾರುಗಳಲ್ಲಿ ಬರುವಾಗ ಅಪಘಾತ: ಒಬ್ಬ ಸಾವು
Follow us on

ಆ ಯುವಕರ ತಂಡದವರು ಬರ್ತಡೆ ಪಾರ್ಟಿಗೆ (Birthday Party) ಹೋಗಿದ್ದರು. ಪಾರ್ಟಿ ಮುಗಿಸಿಕೊಂಡು ಮನೆ ಕಡೆಗೆ ಬರುತ್ತಿದ್ದ ಆ ತಂಡದ ಓರ್ವ ಯುವಕ (Youth) ನೇರ ಸ್ಮಶಾನ ಸೇರಿದರೆ, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮರಕ್ಕೆ ಗುದ್ದಿರುವ ಕಾರು, ಹಳ್ಳದಲ್ಲಿ ನಜ್ಜುಗುಜ್ಜಾಗಿ ಬಿದ್ದಿರುವ ಕಾರು, ಶವಾಗಾರದಲ್ಲಿ ಹದಿಹರೆಯದ ಯುವಕನ ಶವ, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಗನನ್ನ ಕಳೆದುಕೊಂಡು ಪೋಷಕರ ಗೋಳಾಟ… ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ (Nelamangala) ಹೊನ್ನಗಂಗಯ್ಯನ ಪಾಳ್ಯದಲ್ಲಿ ನಡೆದಿರುವ ಭೀಕರ ಅಪಘಾತ (Car Accident). ಅಪಘಾತದ ದೃಶ್ಯಗಳನ್ನ ನೋಡಿದ್ರೆ ಯಾರೂ ಬದುಕುಳಿದಿಲ್ಲ ಅನ್ಸುತ್ತೆ. ಅದರಂತೆ 26 ವರ್ಷದ ರೋಹಿತ್ ಅಪಘಾತದ ಸ್ಥಳದಲ್ಲೆ ಸಾವನ್ನಪ್ಪಿದ್ದರೆ ಕಾರು ಚಾಲಕ ಪ್ರದೀಪ್ ಮತ್ತೋರ್ವ ಅವಿನಾಶ್ ಗಂಭೀರ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ರೋಹಿತ್ ಸೇರಿದಂತೆ ಗಾಯಾಳುಗಳು ಸ್ನೇಹಿತರಾಗಿದ್ದು, ತಾವರೆಕೆರೆ ಬಳಿ ಬರ್ತಡೆ ಪಾರ್ಟಿಯೊಂದಕ್ಕೆ ತೆರಳಿದ್ದರು. ಮೂರು ಕಾರಿನಲ್ಲಿ ತೆರಳುತ್ತಿದ್ದ ಸ್ನೇಹಿತರ ತಂಡದ ಅತೀ ವೇಗದ ಚಾಲನೆಯಿಂದ ಮೃತ ರೋಹಿತ್ ಚಲಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ.

ಇನ್ನು ಮೃತ ರೋಹಿತ್ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಬೆಂಗಳೂರಿನ ಲಗ್ಗೆರೆಯಲ್ಲಿ ಸ್ನೇಹಿತರೊಂದಿಗೆ ವಾಸವಿದ್ದ. ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ತನ್ನ ಸ್ನೇಹಿತರೊಂದಿಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿ ದಾರುಣ ಅಂತ್ಯ ಕಂಡಿದ್ದಾನೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಘಟನೆಗೆ ನಿಖರ ಕಾರಣ ಏನು ಅಂದು ತನಿಖೆಯ ನಂತರ ತಿಳಿಯಬೇಕಿದೆ. ಒಟ್ಟಿನಲ್ಲಿ ಅಪಘಾತದಲ್ಲಿ ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ರೆ ಇತ್ತ ಮನೆಗೆ ಆಧಾರ ಸ್ತಂಭವಾಗಿದ್ದ ಒಬ್ಬನೆ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ