ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣ ಹೋಬಳಿಯಲ್ಲಿ ಬೆಳೆ ಬೆಳೆಯುವ ಹೊಲದಲ್ಲಿ ಸರ್ವೆ ಮಾಡಲು ಬಂದ ಅಧಿಕಾರಿಗಳ ವಿರುದ್ದ ರೈತರು ರೊಚ್ಚಿಗೆದ್ದು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈಗಾಗಲೇ ಮೊದಲನೆ ಹಂತದಲ್ಲಿ ಒಂದು ಸಾವಿರಕ್ಕೂ ಅಧಿಕ ಎಕರೆ ರೈತರ ಭೂಮಿಯನ್ನ KIADB(KARNATAKA INDUSTRIAL AREA DEVELOPMENT BOARD)ಗೆ ಸ್ವಾಧೀನಪಡಿಸಿಕೊಂಡಿದ್ದು, ಕೈಗಾರಿಕಾ ಪ್ರದೇಶವನ್ನಾಗಿ ಮಾಡ್ತಿದ್ದಾರೆ. ಈ ನಡುವೆ ಎರಡನೇ ಹಂತದಲ್ಲಿ 1777 ಎಕರೆ ರೈತರ ಕೃಷಿ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಕಳೆದ 293 ದಿನದಿಂದ ನಿರಂತರ ಧರಣಿ ನಡೆಸುತ್ತಿದ್ದರೂ ಸಹ ಇಂದು(ಜ.21) ಮಧ್ಯಾಹ್ನ ಕೆಐಎಡಿಬಿ ಅಧಿಕಾರಿಗಳು ರೈತರ ಕಣ್ತಪ್ಪಿಸಿ ಕೃಷಿ ಭೂಮಿ ಸರ್ವೆ ಮಾಡಿಸಲು ಸರ್ವೆಯರ್ಗಳನ್ನ ಕಳಿಸಿದ್ದಾರೆ. ಜೊತೆಗೆ ಸರ್ವೆ ಬಗ್ಗೆ ಸರ್ವೆಯರ್ಗಳನ್ನ ಕೇಳಲು ಹೋದ ರೈತರ ಮೇಲು ದಬ್ಬಾಳಿಕೆ ಮಾಡಿ ಸರ್ವೆ ಮಾಡಿ ವರದಿ ನೀಡಲು ಸಿಬ್ಬಂದಿ ಮುಂದಾಗಿದ್ದರಂತೆ. ಹೀಗಾಗಿ ರೈತರ ಕೃಷಿ ಭೂಮಿ ಸರ್ವೆ ವಿರುದ್ದ ಹೋರಾಟಗಾರರು ರೊಚಿಗೆದ್ದಿದ್ದು ಸರ್ವೆ ನಡೆಸಲು ಬಂದ ಸರ್ವೆಯರ್ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ರೈತರ ಭೂಮಿಯನ್ನ ಸರ್ವೆ ಮಾಡಿಸಲು ಕಳಿಸಿದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಇಲ್ಲಿಂದ ಸಿಬ್ಬಂದಿಯನ್ನ ಬಿಡುವುದಿಲ್ಲ ಎಂದು ಜೊತೆಯಲ್ಲಿ ಕೂರಿಸಿಕೊಂಡು ಆಕ್ರೋಶ ಹೊರ ಹಾಕಿದರು.
ಚೆನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ ವಿರೋಧದ ನಡುವೆ ಸರ್ಕಾರ ಭೂಸ್ವಾಧೀನ ಮಾಡುತ್ತಿರುವುದನ್ನ ವಿರೋಧಿಸಿ ಕಳೆದ 293 ದಿನಗಳಿಂದ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ರೈತರ ಭೂಮಿ ಸರ್ವೆ ಮಾಡಲು ಬಂದಿರುವುದು ಹೋರಾಟಗಾರರನ್ನ ಕೆರಳಿಸಿದೆ. ಹೀಗಾಗಿ ರೈತರು ಸರ್ವೆ ಮಾಡಲು ಬಂದ ತೋಟದ ಬಳಿಯೇ ಟೆಂಟ್ ಅನ್ನ ಹಾಕಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಸ್ಥಳದಲ್ಲೆ ಅಡುಗೆ ಮಾಡುವ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಜೊತೆಗೆ ಸ್ಥಳಕ್ಕೆ ಬಂದ ಚೆನ್ನರಾಯಪಟ್ಟಣ ಪೊಲೀಸರಿಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಸರ್ವೆ ಮಾಡಲು ಬಂದವರನ್ನ ಇಲ್ಲಿಂದ ಕಳಿಸಲ್ಲ ಎಂದು ಪಟ್ಟು ಹಿಡಿದ್ದಾರೆ.
ಒಟ್ಟಾರೆ ರೈತರು ಕಳೆದ 293 ದಿನಗಳಿಂದ ಕೃಷಿ ಭೂಮಿ ಸ್ವಾಧೀನ ಕೈಬಿಡುವಂತೆ ಹೋರಾಟ ನಡೆಸುತ್ತಿದ್ರು ಅಧಿಕಾರಿಗಳು ಮತ್ತೆ ಮತ್ತೆ ಸ್ವಾಧೀನ ಪ್ರಕ್ರಿಯೆಗಳನ್ನ ಮುಂದುವರೆಸುತ್ತಿರುವುದು ಸ್ಥಳಿಯ ಹೋರಾಟಗಾರರನ್ನ ಕೆರಳಿಸಿದೆ. ಇನ್ನು ಇಷ್ಟು ದಿನ ನಾಡ ಕಛೇರಿ ಮುಂದೆ ಧರಣಿ ಮಾಡ್ತಿದ್ದ ರೈತರು ಇದೀಗ ಹೊಲದಲ್ಲೆ ಧರಣಿ ಮಾಡಲು ಮುಂದಾಗಿದ್ದು ಸರ್ಕಾರ ಮತ್ತು ಕೆಐಎಡಿಬಿ ರೈತರ ಹೋರಾಟಕ್ಕೆ ಮಣಿಯುತ್ತಾ ಅನ್ನೂದನ್ನ ಕಾದು ನೋಡಬೇಕಾಗಿದೆ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ