
ದೇವನಹಳ್ಳಿ, ಡಿಸೆಂಬರ್ 19: ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಗಾದೆ ಮಾತು ಒಂದಿದೆ. ಈ ಗಾದೆ ಮಾತು ಇದೀಗ ನಗರದ ಹೊರವಲಯದ ಗ್ರಾಮಸ್ಥರಿಗೆ ಅನ್ವಯವಾಗುತ್ತಿದೆ. ದಶಕಗಳ ಕನಸು ನನಸಾಯಿತು ಅಂತ ಖುಷಿ ಪಡುವಷ್ಟರಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು (Revenue Department officials) ಮಾಡಿರುವ ಅದೊಂದು ಎಡವಟ್ಟಿನಿಂದ ಇದೀಗ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಸರ್ಕಾರದಿಂದ ನಿವೇಶನ ಪಡೆಯಲು ಕಾದು ಕುಳಿತಿದ್ದರು. ಜೊತೆಗೆ ಜನರ ಮನವಿಗೆ ಸ್ಪಂದಿಸಿದ ಸ್ಥಳಿಯ ಶಾಸಕ ಹಾಗೂ ಸಚಿವ ಕೆಹೆಚ್ ಮುನಿಯಪ್ಪ ಪಂಚಾಯತಿಗಳಲ್ಲಿ ಭುಮಿ ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸೂಚಿಸಿದ್ದರು. ಅದರಂತೆ ನಿವೇಶನಗಳಿಗೆ ಸೂಕ್ತವಾದ ಜಾಗ ನೀಡಬೇಕಾದ ಕಂದಾಯ ಅಧಿಕಾರಿಗಳು ಇದೀಗ ಪಕ್ಕದಲ್ಲೇ ಸಮತಟ್ಟಾದ ಭೂಮಿ ಇದ್ದರು ಕಲ್ಲು ಕ್ವಾರಿಯ ಜಮೀನನ್ನ ಮಂಜೂರು ಮಾಡಿದ್ದಾರಂತೆ.
ಇದನ್ನೂ ಓದಿ: ಅಕ್ರಮ BPL ಕಾರ್ಡ್ದಾರರಿಗೆ ಭರ್ಜರಿ ಶಾಕ್ ಕೊಟ್ಟ ಸರ್ಕಾರ: 3 ತಿಂಗಳಲ್ಲಿ ರದ್ದಾದ ಪಡಿತರ ಚೀಟಿಗಳೆಷ್ಟು?
ಹೀಗಾಗೆ ಕಲ್ಲು ಕ್ವಾರಿಯ ಜಮೀನಿನಲ್ಲಿ ಯಾವ ರೀತಿ ಮನೆ ಕಟ್ಟಲು ಸದ್ಯವಾಗುತ್ತೆ ಅಂತ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ರೊಚಿಗೆದ್ದಿದ್ದು, ಕಲ್ಲು ಕ್ವಾರಿ ಜಮೀನು ಮಂಜೂರು ಮಾಡಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಗೆ ಅನುಕೂಲ ಮಾಡಲು ಈ ರೀತಿ ಉತ್ತಮ ಜಾಗ ಬಿಟ್ಟು ಕಲ್ಲುಗಳಿರುವ ಜಾಗ ನೀಡಿದ್ದಾರೆ ಅಂತ ಪಿಡಿಒ ಸೇರಿದಂತೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರಾದ ಗೋವಿಂದರಾಜು ಎನ್ನುವವರು ಆಕ್ರೋಶ ಹೊರಹಾಕಿದ್ದಾರೆ.
ಆಶ್ರಯ ಯೋಜನೆಯಡಿಯಲ್ಲಿ ಬಡ ಜನರಿಗೆ ನಿವೇಶನ ನೀಡಲು ಕಲ್ಲು ಕ್ವಾರಿ ಜಾಗ ಗುರುತಿಸಿರುವುದು ಯಾವ ಮಾನದಂಡದ ಮೇಲೆ ಅಂತ ಇಓ ಮತ್ತು ತಹಶೀಲ್ದಾರ್ಗೆ ಗ್ರಾಮಸ್ಥರು ದೂರು ನೀಡಿದ್ದು, ಕಲ್ಲು ಬಂಡೆ ಜಮೀನು ಹಿಂಪಡೆದು ಸಮತಟ್ಟಾದ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಮಾತನಾಡಿದ್ದು, ಕಂದಾಯ ಇಲಾಖೆ ನಮ್ಮ ಆಶ್ರಯ ಯೋಜನೆಗೆ ಜಮೀನು ಮಂಜೂರು ಮಾಡಿದ್ದು, ನಾವು ಆ ಜಮೀನು ಕೊಡುವಂತೆ ಕೇಳಿಲ್ಲ. ಇದೀಗ ಅದು ನಿವೇಶನಗಳಿಗೆ ಯೋಗ್ಯವಾಗದ ಕಾರಣ ಆ ಜಮೀನನ್ನ ವಾಪಸ್ ಪಡೆಯುವಂತೆ ಡಿಸಿ ಅವರಿಗೆ ಪತ್ರ ಬರೆದಿದ್ದು, ಬದಲಿಯಾಗಿ ಯೋಗ್ಯವಾದ ಜಮೀನು ನಿವೇಶನಗಳಿಗೆ ನೀಡುವಂತೆ ಕೇಳಿದ್ದೇವೆ ಎಂದರು.
ಇದನ್ನೂ ಓದಿ: ಮುಡಾ ಕೇಸ್ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು?
ಒಟ್ಟಿನಲ್ಲಿ ಏರ್ಪೋಟ್ ಬಳಿ ಭೂಮಿ ಬೆಲೆ ಗಗನಕ್ಕೇರುತ್ತಿದ್ದು ಒಂದಿಚ್ಚು ಭೂಮಿ ಬಂಗಾರದ ಬೆಲೆಬಾಳುತ್ತಿದೆ. ಈ ನಡುವೆ ಸರ್ಕಾರದಿಂದ ನಿವೇಶನ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಅಧಿಕಾರಿಗಳ ಎಡವಟ್ಟಿನಿಂದ ಆತಂಕ ಶುರುವಾಗಿದೆ. ಸದ್ಯ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಆಶ್ರಯ ಯೋಜನೆಗೆ ಸೂಕ್ತ ಭೂಮಿ ನೀಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.