ಮುಡಾ ಕೇಸ್ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು?
ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಲೋಕಾಯುಕ್ತ ಬಿ-ವರದಿಗೆ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. ತನಿಖೆ ಅಂತಿಮ ಹಂತದಲ್ಲಿದೆ ಎಂದು ಲೋಕಾಯುಕ್ತ ತಿಳಿಸಿದ್ದು, ದೂರುದಾರರು ತನಿಖೆ ವಿಳಂಬದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಬಿ ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದಮಂಡನೆಯಿದ್ದರೆ ಸಲ್ಲಿಸಿ ಎಂದು ಇಡಿ, ದೂರುದಾರಿಗೆ ಸೂಚಿಸಿದೆ.

ಬೆಂಗಳೂರು, ಡಿಸೆಂಬರ್ 18: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಕೇಸ್ ವಿಚಾರಣೆ ಮುಂದೂಡಿಕೆಯಾಗಿದೆ. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಆಕ್ಷೇಪ ಸಂಬಂಧ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಡಿ. 23ಕ್ಕೆ ಮುಂದೂಡಿದೆ. ತನಿಖೆಯ ಸ್ಥಿತಿಗತಿ ಬಗ್ಗೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ಲೋಕಾಯುಕ್ತ ಎಸ್‌ಪಿಪಿ ವೆಂಕಟೇಶ ಅರಬಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆರೋಪಪಟ್ಟಿ ಸಲ್ಲಿಕೆಗೂ ಮುನ್ನ ಸರ್ಕಾರದ ಪೂರ್ವಾನುಮತಿ ಬೇಕು. ಅದಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅಂತಿಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ ಎಂದು ಕೋರ್ಟ್ಗೆ ಲೋಕಾಯುಕ್ತ ಎಸ್‌ಪಿಪಿ ತಿಳಿಸಿದ್ದಾರೆ. ಈಗಾಗಲೇ ನಿಮಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಕೇಸ್ ಡೈರಿ ಸಿದ್ಧವಿದೆಯೇ ಎಂದು ಕೋರ್ಟ್ ಪ್ರಶ್ನಿಸಿದ್ದು, ಅದನ್ನು ನಾಳೆ ಸಲ್ಲಿಸುವುದಾಗಿ ಎಸ್‌ಪಿಪಿ ಹೇಳಿದ್ದಾರೆ.
ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ಮುಡಾ ರಹಸ್ಯ; 22 ಕೋಟಿ ರೂ. ಲಂಚ ಪಡೆದಿದ್ದ ಮಾಜಿ ಆಯುಕ್ತ, ಇಡಿ ತನಿಖೆಯಲ್ಲಿ ಬಟಾಬಯಲು
ಕೋರ್ಟ್ ಆದೇಶಿಸಿದ ಮೇಲೆ ಸಿಎಂ ಸಿದ್ದರಾಮಯ್ಯ ಸೇರಿ 4 ಆರೋಪಿಗಳ ವಿರುದ್ಧ ತನಿಖೆ ಮಾಡಿಲ್ಲ. ಇವರು ಕಾನೂನಿಗೆ ಬೆಲೆ ಕೊಡುತ್ತಿಲ್ಲವೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಹೀಗಾಗಿ ನ್ಯಾಯಾಲಯ ನಮ್ಮ ಅರ್ಜಿಯ ಮೇಲೆ ಆದೇಶ ನೀಡಬೇಕೆಂದು ವಾದಿಸಿದ್ದಾರೆ. ಆದರೆ, ಮೂರು ಜಿಲ್ಲೆಗಳ ಸಿಬ್ಬಂದಿಯೊಂದಿಗೆ ಲೋಕಾಯುಕ್ತ ಪೊಲೀಸರು ಕೆಲಸ ಮಾಡಿದ್ದಾರೆ . ಕೇಸ್ ಡೈರಿ ತಾವು ಪರಿಶೀಲಿಸಿದರೆ ತನಿಖೆ ನಡೆಸಿರುವುದು ತಿಳಿಯುತ್ತದೆ. ತನಿಖಾ ಸ್ಥಿತಿಗತಿ ವರದಿಯನ್ನು ದೂರುದಾರರಿಗೆ ನೀಡುತ್ತೇವೆ. ಅವರು ಅದನ್ನು ಬಹಿರಂಗಪಡಿಸದಂತೆ ನ್ಯಾಯಾಲಯ ನಿರ್ಬಂಧಿಸಬೇಕೆಂದು ಈ ವೇಳೆ ಎಸ್‌ಪಿಪಿ ಆಗ್ರಹಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಬಿ ರಿಪೋರ್ಟ್ ಸಂಬಂಧಿಸಿದಂತೆ ಹೆಚ್ಚುವರಿ ವಾದಮಂಡನೆಯಿದ್ದರೆ ಸಲ್ಲಿಸಿ ಎಂದು ಇಡಿ, ದೂರುದಾರ ಸ್ನೇಹಮಯಿ ಕೃಷ್ಣಗೆ ಸೂಚನೆ ನೀಡಿದೆ. ಬಳಿಕ ವಿಚಾರಣೆ ಡಿ.23ಕ್ಕೆ ಮುಂದೂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:30 pm, Thu, 18 December 25



