ಬಗೆದಷ್ಟು ಬಯಲಾಗ್ತಿದೆ ಮುಡಾ ರಹಸ್ಯ: 22 ಕೋಟಿ ರೂ. ಲಂಚ ಪಡೆದಿದ್ದ ಮಾಜಿ ಆಯುಕ್ತ, ಇಡಿ ತನಿಖೆಯಲ್ಲಿ ಬಟಾಬಯಲು
ಮುಡಾ ಹಗರಣ ಸಂಬಧ ಜಾರಿ ನಿರ್ದೇಶನಾಲಯ ತನಿಖೆ ತೀವ್ರಗೊಂಡಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ಬರೋಬ್ಬರಿ 22.47 ಕೋಟಿ ರೂ. ಲಂಚ ಪಡೆದಿದ್ದರು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲು ಅವರು ಈ ಲಂಚ ಪಡೆದಿದ್ದರು ಎನ್ನಲಾಗಿದೆ.

ಬೆಂಗಳೂರು, ಡಿಸೆಂಬರ್ 12: ಮುಡಾ ಹಗರಣ ಸಂಬಂಧ ನಡೆಯುತ್ತಿರುವ ಜಾರಿ ನಿರ್ದೇಶನಾಲಯದ (ED) ತನಿಖೆ ಒಂದೊಂದೇ ರಹಸ್ಯಗಳನ್ನು ಬಯಲಿಗೆಳೆಯುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು. ಅದಕ್ಕಾಗಿ 22.47 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ಇಡಿ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ.
ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್‌ಎ) ಅಡಿಯಲ್ಲಿ ನಡೆಸಲಾದ ತನಿಖೆ ವೇಳೆ, ಸುಮಾರು 700 ಕೋಟಿ ರೂ. ಮೌಲ್ಯದ 1,095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿರುವುದು ಎಂದು ಮೂಲಗಳು ತಿಳಿಸಿವೆ. ಈ 1,095 ನಿವೇಶನಗಳ ಪಟ್ಟಿಯನ್ನು ಹಾಲಿ ಮುಡಾ ಆಯುಕ್ತರು ತನಿಖೆ ವೇಳೆ ಇಡಿಗೆ ಸಲ್ಲಿಸಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಹಗರಣದ ಸೂತ್ರಧಾರಿ
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಇಡೀ ಹಗರಣದ ಸೂತ್ರಧಾರಿ ಎಂಬುದು ಇಡಿ ತನಿಖೆಯಿಂಗ ಗೊತ್ತಾಗಿದೆ. ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲು ಅವರು ನಗದು, ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆದಿದ್ದಾರೆ ಎಂಬುದೂ ಬಹಿರಂಗವಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿದೆ.
ಯಾವೆಲ್ಲ ರೂಪದಲ್ಲಿ ಲಂಚ ಪಡೆದಿದ್ದಾರೆ ನೋಡಿ ಮುಡಾ ಮಾಜಿ ಆಯುಕ್ತ!
ದಿನೇಶ್ ಕುಮಾರ್ ಪಡೆದ 22.47 ಕೋಟಿ ರೂ. ಲಂಚದ ಪೈಕಿ, 34.65 ಲಕ್ಷ ರೂ. ನಗದು ಆಗಿದೆ. ಹೈ ಸೆಕ್ಯೂರಿಟಿ ಬಾಂಡ್ ಪೇಪರ್ಗಳನ್ನು ದುರುಪಯೋಗಪಡಿಸಿಕೊಂಡು 8.28 ಕೋಟಿ ರೂ. ಪಡೆದಿದ್ದಾರೆ. ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಸದಸ್ಯರ ಮೂಲಕ 5.86 ಕೋಟಿ ರೂ., ಅಬ್ದುಲ್ ವಹೀದ್ ಅವರಿಂದ 3.62 ಕೋಟಿ ರೂ., ಕ್ಯಾಥೆಡ್ರಲ್ ಪ್ಯಾರಿಷ್ ಸೊಸೈಟಿಯಿಂದ 1.70 ಕೋಟಿ ರೂ., ನಿಂಗಮ್ಮ ಅವರಿಂದ 1.13 ಕೋಟಿ ರೂ., ಜೆಎಸ್‌ಎಸ್ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 1.02 ಕೋಟಿ ರೂ. ಮತ್ತು ನಿಂಗಮ್ಮ ಅವರಿಂದ 49 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪರಿಹಾರ ನಿವೇಶನಗಳನ್ನು ಅಕ್ರಮವಾಗಿ ಹಂಚಿದ್ದಕ್ಕೆ ಪ್ರತಿಯಾಗಿ ಪಡೆದಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್,ವರದಿಯಲ್ಲೇನಿದೆ?
ಅಕ್ರಮ ನಿವೇಶನ ಹಂಚಿಕೆ ಮತ್ತು ಮಾರಾಟದ ಮೂಲಕ ಅಕ್ರಮವಾಗಿ ಹಣ ಗಳಿಸಿದವರಲ್ಲಿ ಹಲವಾರು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳು ಶಾಮೀಲಾಗಿರುವುದು ಕಂಡುಬಂದಿದೆ. ಸದ್ಯ ಪ್ರಕರಣ ಸಂಬಂಧ ಇಡಿ ತನಿಖೆ ಇನ್ನಷ್ಟು ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ.




