ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಮತ್ತೆ ಕೊಕ್: ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ; ಸಿಡಿದೆದ್ದ ಕರವೇ
ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ ಆರೋಪ ಮತ್ತೆ ಮುನ್ನಲೆಗೆ ಬಂದಿದೆ. ಈ ಕುರಿತಾಗಿ ಕರ್ನಾಟಕ ರಕ್ಷಣಾ ವೇದಿಕೆ ಸಿಡಿದೆದ್ದಿದೆ. ಕೂಡಲೇ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ಪ್ರಾದೇಶಿಕ ಭಾಷೆಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.

ಬೆಂಗಳೂರು, ಡಿಸೆಂಬರ್ 18: ನೈರುತ್ಯ ರೈಲ್ವೆ ವಲಯದಲ್ಲಿ ಕಳೆದ ವರ್ಷ ಸಹಾಯಕ ಲೋಕೋಪೈಲೆಟ್ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ (exam) ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಆ ಮೂಲಕ ಕನ್ನಡಿಗರಿಗೆ ಅನ್ಯಾಯವೆಸಗಲಾಗಿತ್ತು. ಆಗ ಸಚಿವ ವಿ. ಸೋಮಣ್ಣ (V Somanna) ಕನ್ನಡದಲ್ಲೇ ಪರೀಕ್ಷೆಗೆ ಆದೇಶಿಸಿದ್ದರು. ಆದರೆ ಇಲಾಖೆ ಕೆಲ ಪರೀಕ್ಷೆಗಳಿಗೆ ಮಾತ್ರ ಕನ್ನಡಕ್ಕೆ ಅವಕಾಶ ನೀಡಿ ಬಳಿಕ ತೆಗೆದುಹಾಕಿದೆ. ಆ ಮೂಲಕ ಸಚಿವರ ಆದೇಶಕ್ಕೂ ಬೆಲೆಯಿಲ್ಲದಂತಾಗಿದೆ. ಸದ್ಯ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ
ಈ ಕುರಿತಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮಾತನಾಡಿದ್ದು, ರೈಲ್ವೆ ಬಡ್ತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಹುಬ್ಬಳ್ಳಿ, ಮೈಸೂರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಮೂರು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಬೆಂಗಳೂರಲ್ಲಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ತಾರತಮ್ಯ ಕನ್ನಡದ ಕಡೆಗಣನೆ ತುಂಬಾ ನೋವಿನ ಸಂಗತಿ. ಈ ಕೂಡಲೇ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ಪ್ರಾದೇಶಿಕ ಭಾಷೆಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಕರವೇ ಮತ್ತೆ ಪರೀಕ್ಷಾ ಸ್ಥಳಕ್ಕೆ ನುಗ್ಗಿ ಪರೀಕ್ಷೆ ನಡೆಸದಂತೆ ತಡೆಯುವ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: ಪೊಲೀಸ್ ಇಲಾಖೆಯಿಂದಲೇ ವಿಶೇಷ ತರಬೇತಿ ಕಾರ್ಯಾಗಾರ
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜುಲೈ 2009ನೇ ಇಸವಿಯಲ್ಲಿ ಬೆಂಗಳೂರಿನ ಕಮಲ ಬಾಯಿ ಶಾಲೆಯಲ್ಲಿ ಡಿ ಗ್ರೂಪ್ ಹುದ್ದೆಗಾಗಿ ನಡೆಯುತ್ತಿದ್ದ ಪರೀಕ್ಷಾ ಕೊಠಡಿಗೆ ನುಗ್ಗಿ ಪ್ರಶ್ನೆ ಪ್ರತ್ರಿಕೆಯನ್ನು ಹರಿದು ಹಾಕಿದ್ದರು. ಈ ಹಿನ್ನಲೆ ಲಾಟಿ ಏಟು ಹಾಗೂ ಸೆರೆವಾಸ ಅನುಭವಿಸಿದ್ದ ಫಲವಾಗಿ ನಮ್ಮ ಹೋರಾಟಕ್ಕೆ ಮಣಿದು ಆ ಸಂದರ್ಭದಲ್ಲಿ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದ್ದರು ಎಂದರು.
ಇದನ್ನೂ ಓದಿ: ಧಾರವಾಡ ಸರ್ಕಾರಿ ಹುದ್ದೆಗಳ ಭರ್ತಿ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿಗೆ ಅವಕಾಶ ನೀಡಿ ಹೈಕೋರ್ಟ್ ಆದೇಶ
ಈಗ ನಮ್ಮ ರಾಜ್ಯದವರೇ ಆದ ವಿ.ಸೋಮಣ್ಣ ಮಂತ್ರಿಗಳಾಗಿದ್ದರು ಕೂಡ ಈ ತಾರತಮ್ಯ ಕನ್ನಡದ ಕಡೆಗಣನೆ ತುಂಬಾ ನೋವಿನ ಸಂಗತಿ. ಈ ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತು ತಮ್ಮ ನಿಲುವನ್ನು ಹಿಂತೆಗೆದುಕೊಂಡು ಈ ಕೂಡಲೇ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ಪ್ರಾದೇಶಿಕ ಭಾಷೆಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Thu, 18 December 25



