ರಾಜ್ಯದ 1,800 ಹಳ್ಳಿಗಿಲ್ಲ ಬಸ್ ಸಂಪರ್ಕ: ಸಾರಿಗೆ ಸಚಿವರೇ ಕೊಟ್ರು ಶಾಕಿಂಗ್ ಮಾಹಿತಿ
ರಾಜ್ಯದ 1800ಕ್ಕೂ ಹೆಚ್ಚು ಗ್ರಾಮಗಳಿಗೆ ಬಸ್ ಸಂಪರ್ಕವಿಲ್ಲ, ಇದರಿಂದ ಜನರು, ವಿಶೇಷವಾಗಿ ಮಹಿಳೆಯರು, ಬಸ್ಗಳಿಗಾಗಿ 2 ಕಿ.ಮೀ. ನಡೆಯಬೇಕಿದೆ. ರಸ್ತೆಗಳ ದುಸ್ಥಿತಿ ಇದಕ್ಕೆ ಪ್ರಮುಖ ಕಾರಣ. ಸಾರಿಗೆ ಸಚಿವರು ಈ ಮಾಹಿತಿ ಬಹಿರಂಗಪಡಿಸಿದ್ದು, KSRTC ವ್ಯಾಪ್ತಿಯಲ್ಲಿರುವ ಈ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಸೇವೆ ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ. ಶಕ್ತಿ ಯೋಜನೆಯ ಲಾಭ ಪಡೆಯಲು ಸಹ ಇದು ಅಡ್ಡಿಯಾಗಿದೆ.

ಬೆಂಗಳೂರು, ಡಿಸೆಂಬರ್ 18: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನಗಳಲ್ಲೊಂದಾದ ಮಹಿಳೆಯರಿಗೆ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯ ಪ್ರಯೋಜನವನ್ನು ಪ್ರತಿನಿತ್ಯ ಲಕ್ಷಾಂತರ ಮಂದಿ ಪಡೆಯುತ್ತಿದ್ದಾರೆ. ಈ ನಡುವೆಯೂ ಸುಮಾರು 1,800 ಗ್ರಾಮಗಳಲ್ಲಿ ಮಹಿಳೆಯರು ಬಸ್ ಏರಲು ಕನಿಷ್ಠ 2 ಕಿಲೋಮೀಟರ್ ನಡೆದು ಹೋಗುವ ಪರಿಸ್ಥಿತಿ ಇದೆ ಎಂಬ ಮಾಹಿತಿ ಬಹಿರಂಗೊಂಡಿದೆ.
ಬಹುತೇಕ ಪ್ರದೇಶಗಳಲ್ಲಿ ಬಸ್‌ಗಳ ಲಾಸ್ಟ್ ಸ್ಟಾಪ್ ಕನೆಕ್ಟಿವಿಟಿ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಕಿಲೋಮೀಟರ್ಗಟ್ಟಲೆ ದೂರವನ್ನು ನಡೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಂಚಾರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ರಸ್ತೆ ದುಃಸ್ಥಿತಿಯ ಕಾರಣ KSRTC, NERTC ಮತ್ತು NWRTC ಅಧಿಕಾರಿಗಳು ಈ ಪ್ರದೇಶಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ತುಮಕೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಚಿಕ್ಕಬಳ್ಳಾಪುರ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಾಮರಾಜನಗರ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಸಾರ್ವಕನಿಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ
ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಉತ್ತರಿಸಿದ್ದು, KSRTC 17 ಜಿಲ್ಲೆಗಳಲ್ಲಿ ಬಸ್ ಸೇವೆ ನೀಡುತ್ತಿದೆ. ಒಟ್ಟು 21,748 ಗ್ರಾಮಗಳ ಪೈಕಿ 20,090 ಗ್ರಾಮಗಳಿಗೆ KSRTC ಬಸ್ ಸೇವೆ ಒದಗಿಸುತ್ತಿದೆ. ಉಳಿದ 1,658 ಗ್ರಾಮಗಳಲ್ಲಿ ಬಸ್ಗಾಗಿ ಜನರು 2 ಕಿಲೋಮೀಟರ್ ನಡೆದೇ ಹೋಗಬೇಕಿದೆ. ಅದೇ ರೀತಿ, NWRTC ವ್ಯಾಪ್ತಿಯಲ್ಲಿ ಇರುವ 4,610 ಗ್ರಾಮಗಳಲ್ಲಿ 4,565 ಗ್ರಾಮಗಳಿಗೆ ನೇರ ಬಸ್ ಸೇವೆ ಲಭ್ಯವಿದೆ. NERTC ವ್ಯಾಪ್ತಿಯ 5,283 ಗ್ರಾಮಗಳಲ್ಲಿ 5,237 ಗ್ರಾಮಗಳಿಗೆ ಬಸ್ಗಳು ಸಂಪರ್ಕ ಕಲ್ಪಿಸುತ್ತಿವೆ. ಜನರ ಬೇಡಿಕೆಯನ್ನು ಆಧಾರದಲ್ಲಿ ಸಮೀಕ್ಷೆ ನಡೆಸಿ, ಬಸ್ ಸೇವೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:18 pm, Thu, 18 December 25




