AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಲಾಭದಲ್ಲಿವೆ ಎಂದು ಸಿಎಂ ಹಾಗೂ ಸಾರಿಗೆ ಸಚಿವರು ಹೇಳಿದ್ದರು. ಆದರೆ, ಶಕ್ತಿ ಯೋಜನೆ ಜಾರಿಯಿಂದ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕಿರುವುದನ್ನು ಅಂಕಿಅಂಶಗಳೇ ದೃಢಪಡಿಸಿವೆ. ರಾಜ್ಯ ಸರ್ಕಾರ 4,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿದ್ದು, ಸಾರಿಗೆ ನಿಗಮಗಳನ್ನು ಸಂಕಷ್ಟಕ್ಕೆ ಈಡುಮಾಡಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ
ಸಾಂದರ್ಭಿಕ ಚಿತ್ರ (ಸಂಗ್ರಹ)
ಪ್ರಸನ್ನ ಗಾಂವ್ಕರ್​
| Edited By: |

Updated on:Dec 18, 2025 | 10:57 AM

Share

ಬೆಂಗಳೂರು, ಡಿಸೆಂಬರ್ 18: ಕಾಂಗ್ರೆಸ್ (Congress) ಪಕ್ಷವು ಚುನಾವಣಾ ಸಮಯದಲ್ಲಿ ಆಶ್ವಾಸನೆ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Huarantee Schemes) ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ 2025ರ ನವೆಂಬರ್ 25 ರವರೆಗೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರವು 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಒಟ್ಟಾರೆ 4,006.47 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಇದರ ಪರಿಣಾಮವಾಗಿ ಸಾರಿಗೆ ಸಂಸ್ಥೆಗಳು ಗಂಭೀರ ನಷ್ಟದ ಹಾದಿಗೆ ತಳ್ಳಲ್ಪಟ್ಟಿವೆ.

ನಾಲ್ಕು ನಿಗಮಗಳಿಗೆ ಯಾವ ವರ್ಷ ಎಷ್ಟು ಹಣ ಪಾವತಿ ಬಾಕಿ?

  • 2023–24ನೇ ಸಾಲಿನಲ್ಲಿ 1,180.62 ಕೋಟಿ ರೂ.
  • 2024–25ನೇ ಸಾಲಿನಲ್ಲಿ 1,170.45 ಕೋಟಿ ರೂ.
  • 2025–26ನೇ ಸಾಲಿನ ನವೆಂಬರ್ 25 ರ ಅಂತ್ಯಕ್ಕೆ 1,655.40 ಕೋಟಿ ರೂ.
  • ಒಟ್ಟು 4,006.47 ಕೋಟಿ ರೂ.

ಸತ್ಯ ನುಡಿದ ಅಂಕಿಅಂಶಗಳು!

ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೆ ಸುಮಾರು 650 ಕೋಟಿ ಟಿಕೆಟ್ ವಿತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರ್ಜರಿ ಪ್ರಚಾರ ಮಾಡಿದ್ದರು. ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿಲ್ಲ, ಲಾಭದಲ್ಲಿವೆ ಎಂದು ಹೇಳಿದ್ದರು. ಆದರೆ, ವಾಸ್ತವದಲ್ಲಿ ಶಕ್ತಿ ಯೋಜನೆಯ ಬಾಕಿ ಹಣದಿಂದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸರ್ಕಾರ ನೀಡಿರುವ ಅಧಿಕೃತ ಅಂಕಿ-ಅಂಶಗಳೇ ಸ್ಪಷ್ಟ ಸಾಕ್ಷಿಯಾಗಿವೆ.

ಕರ್ನಾಟಕದ ಸಾರಿಗೆ ನಿಗಮಗಳು ಈಗಾಗಲೇ ಸತತವಾಗಿ ಭಾರೀ ನಷ್ಟವನ್ನು ಅನುಭವಿಸುತ್ತಿದ್ದು, ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಸರ್ಕಾರದಿಂದ ಹಣ ಪಾವತಿ ಸರಿಯಾಗಿ ಆಗದೇ ನಷ್ಟ ಇನ್ನಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ನಷ್ಟದ ಸುಳಿಯಿಂದ ಹೊರತರುವ ಬದಲು, ಅವುಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಅಂಕಿಅಂಶಗಳು ಆರೋಪಗಳಿಗೆ ಪುಷ್ಟಿ ನೀಡಿವೆ.

ಇದನ್ನೂ ಓದಿ: NWKRTCಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ: ಸಂಕಷ್ಟದಲ್ಲಿ ನಿಗಮ

ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ಸಂಪೂರ್ಣವಾಗಿ ನಷ್ಟದಿಂದ ಮೇಲಕ್ಕೆತ್ತಲು ವಿಫಲವಾಗಿದ್ದು, ಅವುಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿರುವುದು ಇದರಿಂದ ಸ್ಪಷ್ಟವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 am, Thu, 18 December 25