AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NWKRTCಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ: ಸಂಕಷ್ಟದಲ್ಲಿ ನಿಗಮ

ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದ NWKRTC ಆರ್ಥಿಕ ಸಂಕಷ್ಟದಲ್ಲಿದೆ. ಸರ್ಕಾರವು ನಿಗಮಕ್ಕೆ ನೀಡಬೇಕಿದ್ದ ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡ ಪರಿಣಾಮ, ಸಿಬ್ಬಂದಿ ಪಿಎಫ್ ಮತ್ತು ಗ್ರಾಚ್ಯುಟಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಅಭಿವೃದ್ಧಿ ಕೆಲಸಗಳಿಗೂ ಹಣವಿಲ್ಲದೆ ನಿಗಮ ಪರದಾಡುತ್ತಿದೆ.

NWKRTCಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ: ಸಂಕಷ್ಟದಲ್ಲಿ ನಿಗಮ
NWKRTC ಬಸ್​​ಗಳು
ಸಂಜಯ್ಯಾ ಚಿಕ್ಕಮಠ
| Updated By: ಪ್ರಸನ್ನ ಹೆಗಡೆ|

Updated on:Dec 09, 2025 | 5:49 PM

Share

ಹುಬ್ಬಳ್ಳಿ, ಡಿಸೆಂಬರ್​ 09: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆ ಕೂಡ ಒಂದು. ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾಮಾನ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಈ ಯೋಜನೆಯ ಪ್ರಯೋಜನವನ್ನು ಲಕ್ಷಾಂತರ ಜನ ಪ್ರತಿನಿತ್ಯ ಪಡೆಯುತ್ತಿದ್ದಾರೆ. ಕಚೇರಿ ಕೆಲಸಗಳಿಗೆ ಹೋಗುವ ಮಹಿಳೆಯರ ಜೊತೆಗೆ ದೇಗುಲ, ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿರುವ ಮಹಿಳೆಯರ ಸಂಖ್ಯೆಯೂ ಈ ಯೋಜನೆ ಜಾರಿ ಬಳಿಕ ಹೆಚ್ಚಿದೆ. ಆದ್ರೆ ಇದೇ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ತೊಂದರೆ ಅನುಭವಿಸುತ್ತಿವೆ.

ಈ ಯೋಜನೆಯಡಿ ತಮ್ಮ ಬಸ್​​ಗಳಲ್ಲಿ ಓಡಾಡಿರುವ ಮಹಿಳೆಯರ ಟಿಕೆಟ್​​ ಹಣದ ಮಾಹಿತಿಯನ್ನು ಪ್ರತಿ ತಿಂಗಳು ನಿಗಮಗಳು ಸರ್ಕಾರಕ್ಕೆ ಕಳುಹಿಸಬೇಕಿದ್ದು, ಅದರ ಆಧಾರದಲ್ಲಿ ಸರ್ಕಾರವೂ ಹಣ ಮರುಪಾವತಿ ಮಾಡಬೇಕಿರೋದು ಕ್ರಮ. ಆದರೆ ಸರ್ಕಾರ ಮಾತ್ರ ಆ ಕೆಲಸವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಹೀಗಾಗಿ ನಿಗಮಗಳು ಅರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೊಂದಕ್ಕೇ (NWKRTC) ಸರ್ಕಾರ ಬರೋಬ್ಬರಿ 940 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿರೋದು ಇದಕ್ಕೆ ಜ್ವಲಂತ ನಿದರ್ಶನ.

ಇದನ್ನೂ ಓದಿ: ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಗೊಂಡ ರಾಜ್ಯ ಸರ್ಕಾರದ ಶಕ್ತಿ ಯೋಜನೆ

ಪ್ರತಿ ತಿಂಗಳು 130 ಕೋಟಿ ರೂಪಾತಿಗಳಿಗೂ ಹೆಚ್ಚು ಟಿಕೆಟ್ ಹಣದ ಮರುಪಾವತಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸರ್ಕಾರದ ಮೊರೆ ಹೋಗುತ್ತಿದೆ. ಆದ್ರೆ, ಆ ಪೈಕಿ ಸರ್ಕಾರದಿಂದ ಮರುಪಾವತಿ ಆಗ್ತಿರೋದು 100-110 ಕೋಟಿ ರೂಪಾಯಿಗಳು ಮಾತ್ರ. ಅಂದರೆ ಸುಮಾರು ಶೇಕಡಾ 85ರಷ್ಟು ಹಣವನ್ನು ಮಾತ್ರ ಸರ್ಕಾರ ನಿಗಮಕ್ಕೆ ಮರುಪಾವತಿ ಮಾಡುತ್ತಿದೆ. ಹೀಗಾಗಿ ಬಾಕಿ ಉಳಿದ ಹಣ ಹಂತ ಹಂತವಾಗಿ ಏರಿಕೆ ಕಂಡು ಈಗ ಅದರ ಮೊತ್ತ 940 ಕೋಟಿ ರೂ.ಗೆ ತಲುಪಿದೆ.

ಸಿಬ್ಬಂದಿ ಪಿಎಫ್​​ ಹಣ ಕಟ್ಟಲೂ ಪರದಾಟ

ತನ್ನ ಸಿಬ್ಬಂದಿಯ ಪಿಎಫ್​​ ಹಣ ಕಟ್ಟಲೂ ಪರದಾಡಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, 646 ಕೋಟಿ ರೂ. ಹಣವನ್ನು ಸಾಲಮಾಡಿ ತುಂಬಿದೆ. ಇನ್ನು ಆರ್ಥಿಕ ಸಮಸ್ಯೆಯ ಕಾರಣಕ್ಕೆ ನಿವೃತ್ತ ಸಿಬ್ಬಂದಿಯ ಸುಮಾರು 45 ಕೋಟಿ ರೂ. ಗ್ರಾಚ್ಯುಟಿ ಹಣವನ್ನೂ ಬಾಕಿ ಉಳಿಸಿಕೊಂಡಿದೆ. ಸದ್ಯ ಸರ್ಕಾರ ಮರುಪಾವತಿ ಮಾಡುತ್ತಿರುವ ಹಣ ಸಿಬ್ಬಂದಿ ವೇತನಕ್ಕೆ ಸರಿಯಾಗ್ತಿದ್ದು, ಉಳಿದ ಅಭಿವೃದ್ಧಿ ಕೆಲಸಗಳಿಗೆ ನಿಗಮದ ಬಳಿ ಹಣ ಇಲ್ಲ ಎನ್ನುವ ಸ್ಥಿತಿ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:46 pm, Tue, 9 December 25