ಎಟಿಎಂ ಕಾರ್ಡ್ (ATM) ಇದ್ದರೂ ಹಣ ಡ್ರಾ ಮಾಡಲು ಬಾರದೆ ಸಾಕಷ್ಟು ಜನ ಇಂದಿಗೂ ಎಟಿಎಂ ಗಳ ಬಳಿ ಪರದಾಟ ನಡೆಸುವುದು ಸಹಜ. ಹೀಗಾಗೆ ಇಂತವರನ್ನೆ ಟಾರ್ಗೆಟ್ ಮಾಡಿಕೊಂಡು ಎಟಿಎಂ ಕಾರ್ಡಗಳನ್ನೆ ಬದಲಿಸಿ ಸಾವಿರಾರು ರೂಪಾಯಿ ಹಣ (money) ಎಗರಿಸುತ್ತಿದ್ದ ಖದೀಮನೊಬ್ಬ ನಿನ್ನೆ ಸೋಮವಾರ ಖಾಕಿ ಬಲೆಗೆ ಬಿದ್ದಿದ್ದು ಅಮಾಯಕ ರೈತನ ಸಾವಿರಾರು ರೂಪಾಯಿ ಹಣ ಹಾಗೂ ಚಿನ್ನದೊಂದಿಗೆ ತಗಲಾಕ್ಕೊಂಡಿದ್ದಾನೆ. ಅದು ಎಲ್ಲಿ, ಹೇಗೆ ಅನ್ನೂ ಸ್ಟೋರಿ ಇಲ್ಲಿದೆ. ಈ ದೃಶ್ಯಗಳನ್ನೊಮ್ಮೆ ಸರಿಯಾಗಿ ನೋಡಿ ಹಾಡಹಗಲೆ ರಾಜಾರೋಷವಾಗಿ ಚಿನ್ನದಂಗಡಿಗೆ ಬಂದ ಖದೀಮ ಅವರಪ್ಪನ ದುಡ್ಡು ಎಂಬಂತೆ ಕಾರ್ಡ್ ಸ್ವೈಪ್ ಮಾಡಿ ಭರ್ಜರಿ ಶಾಪಿಂಗ್ ಮಾಡ್ತಿದ್ದಾನೆ. ಆ ಉಂಗುರ ತೋರಿಸಿ, ಈ ಉಂಗುರ ತೋರಿಸಿ ಅಂತ ಬೇಕಾದ್ದನ್ನ ಪಡೆದುಕೊಂಡು ಹೋಗಿದ್ದ. ಆದರೆ ಇದೀಗ ಇದೇ ಆರೋಪಿ ಶ್ರೀ ಕೃಷ್ಣನ ಜನ್ಮಸ್ಥಾನ ಸೇರಲು ಮುಂದಾಗಿದ್ದಾನೆ (Vijayapura police).
ಹೌದು ಅಂದಹಾಗೆ ಈ ರೀತಿ ಪೊಲೀಸರ ಕೈಗೆ ತಗಲಾಕ್ಕೊಂಡು ಶ್ರೀ ಕೃಷ್ಣನ ಜನ್ಮಸ್ಥಾನ ಸೇರಲು ಮುಂದಾಗಿರುವ ಇವನ ಹೆಸರು ಗುರುಮೂರ್ತಿ. ಈತ ಮೂಲತಃ ಚಿಂತಾಮಣಿ ನಿವಾಸಿ. ಇವನು ಕಳೆದು ತಿಂಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣಕ್ಕೆ ಬಂದಿದ್ದು ಎಟಿಎಂ ಬಳಿ ಹಣ ಡ್ರಾ ಮಾಡುವ ವಿಧಾನವನ್ನು ತಿಳಿಯದವರು ಯಾರಾದರೂ ಬರುತ್ತಾರಾ ಅಂತ ಹೊಂಚು ಹಾಕುತ್ತಾ ಕುಳಿತಿದ್ದ.
ಇದೇ ವೇಳೆ ರಾಜಣ್ಣ ಅನ್ನೂ ರೇಷ್ಮೆ ಬೆಳೆಯುವ ಈ ರೈತ ಗೂಡು ಮಾರಿದ ಹಣ ಡ್ರಾ ಮಾಡೋಕ್ಕೆ ಅಂತ ಎಟಿಎಂ ಗೆ ಬಂದು ಹಣ ಡ್ರಾ ಮಾಡಲಾಗದೆ ಪರದಾಡಿದ್ದಾನೆ. ಹೀಗಾಗಿ ರಾಜಣ್ಣನ ಸಹಾಯಕ್ಕೆ ಬರುವಂತೆ ಬಂದ ಭೂಪ ಮೊದಲಿಗೆ ರೈತನಿಗೆ ಹಣ ಡ್ರಾ ಮಾಡಿಕೊಟ್ಟಿದ್ದು ನಂತರ ರೈತನ ಕಾರ್ಡ್ ಪಡೆದು ಬೇರೋಂದು ಕಾರ್ಡ್ ನೀಡಿ ಎಸ್ಕೇಪ್ ಆಗಿದ್ದ. ಜೊತೆಗೆ ವಿಜಯಪುರ ಪಟ್ಟಣದ ಚಿನ್ನದಂಗಡಿ ಒಂದಕ್ಕೆ ಹೋಗಿದ್ದ ಭೂಪ ಅಲ್ಲಿ ಇದೇ ರೈತನ ಕಾರ್ಡ್ ಬಳಸಿ ಚಿನ್ನದ ಉಂಗುರ ಖರೀದಿಸಿ ಎಸ್ಕೇಪ್ ಆಗಿದ್ದ.
ಚಿನ್ನದಂಗಡಿಯಲ್ಲಿ ಉಂಗುರ ಖರೀದಿಸಿದ್ದಕ್ಕೆ ಹಣ ಪಾವತಿ ಮಾಡಿದ ಸಂದೇಶ ರೈತನ ಮೊಬೈಲ್ ಗೆ ಬಂದ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್ ಠಾಣೆಯಲ್ಲಿ ರೈತ ರಾಜಣ್ಣ ದೂರು ನೀಡಿದ್ದ. ಹೀಗಾಗಿ ದೂರು ಪಡೆದು ತನಿಖೆ ನಡೆಸಿದ ಪೊಲೀಸರು ಚಿಂತಾಮಣಿ ಮೂಲದ ಗುರುಮೂರ್ತಿ ಅನ್ನೋ ಈ ವಂಚಕನನ್ನ ಬಂದಿಸಿದ್ದಾರೆ. ಜೊತೆಗೆ ಈತ ಇದೇ ರೀತಿ ಚಿಂತಾಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲು ಕಾರ್ಡ್ ಬದಲಿಸಿ ಕೆಲವರಿಗೆ ವಂಚನೆ ಮಾಡಿದ್ದು ಜೈಲುವಾಸ ಸಹ ಅನುಭವಿಸಿ ಕಳೆದ ಜನವರಿಯಲ್ಲಿ ಜೈಲಿಂದ ಬಿಡುಗಡೆಯಾಗಿ ಬಂದಿದ್ನಂತೆ. ಆದ್ರೆ ಜೈಲಿಂದ ಬಂದ್ರು ಬುದ್ದಿ ಕಲಿಯದ ಭೂಪ ಮತ್ತದೆ ಕೆಲಸ ಮಾಡಲು ಹೋಗಿ ಇದೀಗ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಇನ್ನೂ ಪೊಲೀಸರು ಆರೋಪಿಯಿಂದ ಎರಡು ಚಿನ್ನದ ಉಂಗುರ ಎಟಿಎಂ ಕಾರ್ಡ್ಗಳನ್ನ ವಶಕ್ಕೆ ಪಡೆದು ಬಡ ರೈತನಿಗೆ ವಾಪಸ್ ನೀಡಿದ್ದಾರೆ.
ಒಟ್ಟಾರೆ ಮೋಸ ಹೋಗುವವರು ಎಲ್ಲಿವರೆಗೂ ಇರ್ತಾರೋ ಅಲ್ಲಿ ವರೆಗೂ ವಂಚಕರು ಇರ್ತಾರೆ ಅನ್ನೂ ಹಾಗೆ ಬಡ ರೈತರನ್ನೆ ಟಾರ್ಗೆಟ್ ಮಾಡಿ ಮಜಾ ಮಾಡ್ತಿದ್ದ ಭೂಪ ಮತ್ತೆ ಮುದ್ದೆ ಮುರಿಯಲು ಜೈಲು ಸೇರಿದ್ದಾನೆ. ಇನ್ನಾದ್ರು ಎಟಿಎಂ ಬಳಿ ಹಣ ಡ್ರಾ ಮಾಡಲು ಹೋಗುವ ರೈತರು ಸ್ವಲ್ಪ ಎಚ್ಚರದಿಂದ ಇದ್ರೆ ಒಳ್ಳೆಯದು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:45 am, Tue, 27 February 24