ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮದುವೆಯಾದ ಎರಡನೆ ವರ್ಷವೇ ಗಂಡನ ಕಿರುಕುಳ ತಾಳಲಾರದೆ ವಿವಾಹಿತ ಮಹಿಳೆಯೊಬ್ಬರು ತವರು ಮನೆಗೆ ವಾಪಸಾಗಿದ್ದಾರೆ. ಹೀಗೆ ಮಾವನ ಮನೆಯಿಂದ ಬಂದ ಅಕ್ಕನ ಬಗ್ಗೆ ಕನಿಕರಗೊಂಡ ಆಕೆಯ ತಮ್ಮ ಅಕ್ಕನ ಜೀವನ ಸರಿಯಾಗಲಿ ಅಂತಾ ಭಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಭಾವನ ಕಡೆಯ ಮಹಿಳೆಯರು ತಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಕ್ಲೆ ಮಲ್ಲೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಶಶಿಕಲಾ ಎಂಬುವವರನ್ನ ದೇವನಹಳ್ಳಿಯ ಗೋಪಾಲ್ ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಗೋಪಾಲ್ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಇದರಿಂದ ಶಶಿಕಲಾ ಮನನೊಂದು ತವರಿಗೆ ವಾಪಸ್ ಆಗಿದ್ದರು. ಇದರಿಂದಾಗಿ ಬೇಸತ್ತ ಶಶಿಕಲಾ ತಮ್ಮ ದೇವರಾಜ್ ತನ್ನ ಅಕ್ಕನಿಗೆ ನ್ಯಾಯ ಸಿಗಲಿ ಅಂತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ, ನಮ್ಮ ಮೇಲೆಯೇ ದೂರು ಕೊಡ್ತಿರಾ ಅಂತಾ ಭಾವನ ಕಡೆಯವರಿಂದ ಬಂದಿದ್ದ ಮಹಿಳೆಯರು ಶಶಿಕಲಾ ತಮ್ಮ ದೇವರಾಜ್ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಮತ್ತು ಮಂಗಳಮುಖಿಯರು, ಶಶಿಕಲಾ ತವರು ಮನೆ ಬಳಿ ರಾತ್ರಿ ವೇಳೆ ಬಂದು ಗಲಾಟೆ ಮಾಡಿದ್ದಾರೆ. ಏರ್ಪೊಟ್ನಲ್ಲಿ ಕೆಲಸ ಮಾಡೋ ಹುಡುಗಿಯನ್ನ ರೇಗಿಸ್ತಿಯಾ ಅಂತಾ ದೇವರಾಜ್ ಮೇಲೆ ಕ್ಯಾತೇ ತೆಗೆದು ಗಲಾಟೆ ಶುರುವಚ್ಚಿಕೊಂಡಿದ್ದಾರೆ.
ಶಶಿಕಲಾ ತಮ್ಮ ದೇವರಾಜ್ ಮೇಲೆ 15 ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಂಗಳಮುಖಿಯರು ಮುಗಿಬಿದ್ದಿದ್ದಾರೆ. ಮಹಿಳೆಯರು ಹಲ್ಲೆ ನಡೆಸುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿ ಪರಾರಿಯಾಗ್ತಿದ್ದ ಮಹಿಳೆಯರು ಹಾಗೂ ಮಂಗಳಮುಖಿಯರನ್ನ ಗ್ರಾಮಸ್ಥರು ಠಾಣೆಗೆ ಹಿಡಿದುಕೊಟ್ಟಿದ್ದಾರೆ. ಕೆಂಪೇಗೌಡ ಏರ್ಪೊಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 5:27 pm, Mon, 26 September 22