
ಆನೇಕಲ್, ಜುಲೈ 16: ಗುತ್ತಿಗೆ ನೀಡಲಿಲ್ಲ ಅಂತ ರೈತರೊಬ್ಬರ (Farmer) ಗ್ರೀನ್ ಹೌಸ್ ಧ್ವಂಸಗೊಳಿಸಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಸಿಂಗಸಂದ್ರ ಗ್ರಾಮದಲ್ಲಿ ನಡೆದಿದೆ. ರೈತ ಕಾರ್ತಿಕ್ ರೆಡ್ಡಿ ಎಂಬುವರಿಗೆ ಸೇರಿದ ಒಂದು ಎಕರೆಯಲ್ಲಿದ್ದ ಗ್ರೀನ್ಹೌಸ್ ಅನ್ನು ಆರೋಪಿಗಳಾದ ಹಾರಗದ್ದೆ ಅಣ್ಣಯಪ್ಪ, ಶ್ರೀಧರ್ ಮತ್ತು ಮುರಳಿ ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ. ಕಾರ್ತಿಕ್ ರೆಡ್ಡಿ ಅವರು ಪ್ರಭಾವತಿ ಎಂಬುವರಿಂದ ಜಮೀನು ಖರೀದಿಸಿದ್ದರು. ಈ ಜಮೀನಿನಲ್ಲಿದ್ದ ಗ್ರೀನ್ ಹೌಸ್ ಅನ್ನು ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡುವಂತೆ ಆರೋಪಿಗಳು ಕಾರ್ತಿಕ್ ರೆಡ್ಡಿ ಅವರ ಬಳಿ ಅತಿ ಕಡಿಮೆ ಬೆಲೆಗೆ ಕೇಳಿದ್ದಾರೆ.
ಅದಕ್ಕೆ, ಕಾರ್ತಿಕ್ ರೆಡ್ಡಿ ಅವರು ಗುತ್ತಿಗೆ ಕೊಡಲ್ಲ ಎಂದಿದ್ದಾರೆ. ಆಗ ಆರೋಪಿಗಳು ಜಮೀನು ಮಾರಾಟ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲದೆ, ರೌಡಿಶೀಟರ್ಗಳನ್ನು ಕರೆಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ, ಆರೋಪಿಗಳು ಒಂದು ವಾರದ ಹಿಂದೆ ರೌಡಿಗಳನ್ನು ಕರೆಸಿ ಗ್ರೀನ್ ಹೌಸ್ ಧ್ವಂಸಗೊಳಿಸಿದ್ದಾರೆ. ಪ್ರಶ್ನಿಸಲು ಹೋದ ಕಾರ್ತಿಕ್ ರೆಡ್ಡಿ ಕುಟುಂಬದವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ.
ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ರಕ್ಷಣೆ ನೀಡುವಂತೆ ರೈತ ಕುಟುಂಬ ಒತ್ತಾಯಿಸಿದೆ.
ಇದನ್ನೂ ಓದಿ: ಸ್ನೇಹಿತನ ಮನೆಗೆ ಹೋಗಿದ್ದ ಮಹಿಳೆಗೆ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ
ನೆಲಮಂಗಲ: ಲೈನ್ ಮ್ಯಾಬ್ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಲೈನ್ ಮ್ಯಾನ್ ಮಧು ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಇಫಾಯತ್ ಖಾನ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ರಾಡ್ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನೆಲಮಂಗಲ ತಾಲೂಕಿನ ಇಸ್ಲಾಂಪುರ 7ನೇ ಕ್ರಾಸ್ ಡಬಲ್ ಟಿಸಿ ಬಳಿ ಘಟನೆ ನಡೆದಿದೆ. ಮುರಿದ ಕಂಬ ಸರಿ ಮಾಡಲು ಹೋಗಿದ್ದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಲೈನ್ ಮ್ಯಾನ್ ಮಧು ತಲೆ ಹಾಗೂ ಕಿವಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 5:15 pm, Wed, 16 July 25