ದೊಡ್ಡಬಳ್ಳಾಪುರ ಹೊರ ವಲಯದ ಭೂಗರ್ಭದಲ್ಲಿ ಅಡಗಿದೆ ಬೌದ್ಧ ಧರ್ಮದ 2500 ವರ್ಷಗಳ ಹಿಂದಿನ ರಹಸ್ಯ!
ಅದು ದೊಡ್ಡಬಳ್ಳಾಪುರ ಹೊರವಲಯದ, ನೂರಾರು ವರ್ಷಗಳಿಂದ ರೈತರು ಕೃಷಿ ಮಾಡಿಕೊಂಡು ಬಂದಿರುವ ಸಾಮಾನ್ಯ ಕೃಷಿ ಭೂಮಿ. ಅಲ್ಲಿ ಹಿಂದೆಲ್ಲ ಅನೇಕ ಬಾರಿ ಬೂದಿ ಮಡಿಕೆ ಚೂರುಗಳು ಮತ್ತು ಇಟ್ಟಿಗೆ ಗೋಡೆಗಳು ಸಿಕ್ಕಿದ್ದವು. ಆಗ ಜನರು ಅಷ್ಟಾಗಿ ತಲೆ ಕೆಡಸಿಕೊಂಡಿರಲಿಲ್ಲ. ಆದರೆ, ಇದೀಗ ಅದೇ ಭೂಮಿಯಲ್ಲಿ ರಹಸ್ಯವೊಂದರ ಸುಳಿವು ಸಿಕ್ಕಿದ್ದು, ಅದನ್ನು ಬೇಧಿಸಲು ಸರ್ಕಾರ ಮತ್ತು ಸಂಶೋಧನಾಕಾರರು ಮುಂದಾಗಿದ್ದಾರೆ.

ದೇವನಹಳ್ಳಿ, ಜುಲೈ 17: ಭೂಮಿಯನ್ನೆಲ್ಲ ನೇಗಿಲಿನಿಂದ ಉಳುಮೆ ಮಾಡಿ ಹದ ಮಾಡಿದ್ದು, ಮುಂಗಾರಿಗೆ ಭರ್ಜರಿ ಬೆಳೆ ಬೆಳೆಯೋಣ ಎಂದು ರೈತ ಮುಂದಾಗಿರುವಾಗಲೇ ತಂಡ ತಂಡಗವಾಗಿ ಬಂದ ಬೌದ್ಧ ಧರ್ಮದ ಅನುಯಾಯಿಗಳು ತೋಟದ ತುಂಬೆಲ್ಲ ಓಡಾಡಲು ಶುರುಮಾಡಿದ್ದಾರೆ. ಸಂಶೋಧಕರು, ಸ್ಥಳೀಯವಾಗಿ ಸಿಕ್ಕ ಕಲ್ಲುಗಳ ನೂರಾರು ವರ್ಷಗಳ ಹಿಂದಿನ ಇಟ್ಟಿಗೆಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಜನ ಕುತೂಹಲದಿಂದ ಇವುಗಳನ್ನೆಲ್ಲ ಗಮನಿಸುತ್ತಿದ್ದರೆ, ಖುದ್ದು ಸಚಿವರೇ ಸ್ಥಳಕ್ಕೆ ಬಂದು ಭೂಗರ್ಭದ ಸಂಶೋಧನೆಗೆ ಚಾಲನೆ ನೀಡಿದ್ದಾರೆ. ಅಂದಹಾಗೆ, ಇದೆಲ್ಲ ನಡೆದಿರುವುದು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಬೂದಿಗುಡ್ಡದಲ್ಲಿ. ಮೆಲ್ನೋಟಕ್ಕೆ ಸಾಮಾನ್ಯ ಕೃಷಿ ಭೂಮಿಯಂತಿದ್ದರೂ ಒಡಲಿನಲ್ಲಿ ಸಾವಿರಾರು ರೋಚಕ ಕಥೆಗಳು, ಬೌದ್ಧ ಧರ್ಮದ ಪ್ರಾಚೀನ ಸಂಸ್ಕೃತಿಯ ಕುರುಹುಗಳನ್ನು ಈ ಭೂಮಿ ಒಳಗೊಂಡಿದೆ ಎನ್ನಲಾಗಿದೆ.
ರಾಜಘಟ್ಟ ಗ್ರಾಮದ ಹೊರವಲಯದಲ್ಲಿರುವ ಇದೇ ಬೂದಿ ಗುಡ್ಡದಲ್ಲಿ ಈ ಹಿಂದೆ ಕ್ರಿಶ 4 ಮತ್ತು 5 ನೆ ಶತಮಾನದಲ್ಲಿ, ಅಂದರೆ ಸುಮಾರು 2500 ವರ್ಷಗಳ ಹಿಂದೆ ಬೌದ್ಧ ಧರ್ಮದ ಗುರುಗಳು ಮತ್ತು ಅನುಯಾಯಿಗಳು ಜೀವನ ನಡೆಸಿದ್ದರು ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಇದೇ ಗ್ರಾಮದ ಜಮೀನಿನಲ್ಲಿ ಹಲವು ಕಟ್ಟಡದ ಅವಶೇಷಗಳು, ಗೋಡೆಗಳು, ಇಟ್ಟಿಗೆಗಳು ಮತ್ತು ಮಡಿಕೆಗಳು ಸಿಕ್ಕಿದ್ದವು. ಅಲ್ಲದೆ ಅವುಗಳನ್ನೆಲ್ಲ 2004 ರಲ್ಲೇ ಇತಿಹಾಸಕಾರರು ಭೂಮಿಯನ್ನು ಅಗದೆ ಸಂಶೋಧನೆಗೆ ಒಳಪಡಿಸಿದ್ದರು. ಆಗ, ಅದು 2500 ವರ್ಷಗಳಷ್ಟು ಹಳೆಯ ವಸ್ತುಗಳು ಎಂಬುದು ಗೊತ್ತಾಗಿತ್ತು. ಮತ್ತಷ್ಟು ಸಂಶೋಧನೆ ಮಾಡಲು ಸಾಧ್ಯವಾಗದೆ ಅಗೆದಿದ್ದ ಭುಮಿಯನ್ನು ಮುಚ್ಚಿ ಹಾಕಿದ್ದರು.
ಉತ್ಖನನಕ್ಕೆ ಸಚಿವ ಹೆಚ್ಕೆ ಪಾಟೀಲ್ ಚಾಲನೆ
ಇದೀಗ ಮತ್ತೆ ಬೌದ್ಧ ಧರ್ಮದ ಆ ಇತಿಹಾಸ ಮತ್ತು ಗತವೈಭವವದ ಬಗ್ಗೆ ತಿಳಿಯಲು ಸರ್ಕಾರ ಮತ್ತು ಪ್ರಾಚೀನ ಪಾರಂಪರಿಕ ಇಲಾಖೆ ಮುಂದಾಗಿದೆ. ಪ್ರವಾಸೋಸ್ಯಮ ಇಲಾಖೆ ಸಚಿವ ಹೆಚ್ಕೆ ಪಾಟೀಲ್ ಬೌದ್ಧ ಧರ್ಮ ಸಂಬಂಧಿತ ಅಧ್ಯಯನದ ಉತ್ಖನನಕ್ಕೆ ಚಾಲನೆ ನೀಡಿದ್ದಾರೆ.
ಬೂದಿಗುಡ್ಡದಲ್ಲಿ ಸಿಕ್ಕಿದ್ದವು ಇಟ್ಟಿಗೆ ಗೋಡೆಯ ಕುರುಹು, ಮಡಿಕೆಗಳು!
ರಾಜಘಟ್ಟ ಗ್ರಾಮದ ಬೂದಿಗುಡ್ಡದಲ್ಲಿ ಈ ಹಿಂದೆ ಹೆಚ್ಚು ಪ್ರಮಾಣದ ಬೂದಿ ಇತ್ತು. ಕೃಷಿಯ ಕಾರಣ ಅದನ್ನೆಲ್ಲ ಗ್ರಾಮಸ್ಥರು ಬೇರೆಡೆ ಸಾಗಿಸಿ ಜಮೀನಿನಲ್ಲಿ ಉಳುಮೆ ಮಾಡಿದ್ದರು. ಅಲ್ಲದೆ ಗ್ರಾಮಸ್ಥರು ಕೃಷಿ ಮಾಡಲು ಉಳುಮೆ ಮಾಡಿದಾಗಲೆಲ್ಲ ಇಟ್ಟಿಗೆಯ ಗೋಡೆಗಳು, ಮಡಿಕೆಗಳು ಸಿಕ್ಕಿದ್ದವು. ಅವುಗಳೆಲ್ಲ ಈ ಹಿಂದೆ ಬೌದ್ಧ ಧರ್ಮದ ಜನರು ಹರಕೆ ತೀರಿಸಲು ಭೂಮಿಯಲ್ಲಿ ಹೂತಿಟ್ಟಿದ್ದ ಮಡಿಕೆಗಳು ಎನ್ನಲಾಗುತ್ತಿದೆ. ಅಲ್ಲದೆ, ಬೌದ್ಧರು ಇಲ್ಲೇ ವಾಸಿಸಿದ್ದರು. ಅವರು ಅಂದು ಬೌದ್ಧ ವಿಹಾರಗಳು, ಮನೆಗಳು ಮತ್ತು ಹಲವು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದು ಅದಕ್ಕೆ ಪುರಾವೆಗಳಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಆನೇಕಲ್ನಲ್ಲಿ ರೈತನ ಗ್ರೀನ್ ಹೌಸ್ ಧ್ವಂಸಗೊಳಿಸಿದ ಕಿಡಿಗೇಡಿಗಳು
ಸರ್ಕಾರವು ಬೌದ್ಧ ನೆಲೆಗಳ ಸಂಶೋಧನೆಗೆ ಚಾಲನೆ ನೀಡಿದ್ದನ್ನು ಬೌದ್ಧ ಧರ್ಮದ ಗುರುಗಳು, ಅನುಯಾಯಿಗಳು ಸ್ವಾಗತಿಸಿದ್ದಾರೆ. ಕುರುಹುಗಳು ಸಿಕ್ಕ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಇಷ್ಟುದಿನ ಇತಿಹಾಸ ಪುಸ್ತಕಗಳಲ್ಲಿ ಓದುತ್ತಿದ್ದ ಗತಕಾಲದ ವೈಭವದ ಕಥೆಗಳ ಕುರುಹುಗಳನ್ನು ಭೂಮಿಯಿಂದ ಹೊರ ತೆಗೆದು ಬೌದ್ಧ ಧರ್ಮದ ಪ್ರಾಚೀನ ಸಂಸ್ಕ್ರತಿ ತಿಳಿಯಲು ಮುಂದಾಗಿರುವುದು ಬೌದ್ದ ಧರ್ಮದ ಅನುಯಾಯಿಗಳು, ಇತಿಹಾಸಕಾರರು ಮತ್ತು ಜನರಲ್ಲಿ ಕುತೂಹಲ ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







