ಬೆಂಗಳೂರು ಸುರಂಗ ಮಾರ್ಗ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಜತೆ ಬಹಿರಂಗ ಚರ್ಚೆಗೆ ಸಿದ್ಧ: ತೇಜಸ್ವಿ ಸೂರ್ಯ ಸವಾಲು
ಬೆಂಗಳೂರಿನ ಸುರಂಗ ಮಾರ್ಗ ಯೋಜನೆ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ತೀವ್ರಗೊಂಡಿದೆ. ಯೋಜನೆ ಭ್ರಷ್ಟಾಚಾರದಿಂದ ಕೂಡಿದ್ದು, ಬೆಂಗಳೂರಿಗೆ ಅದರ ಅಗತ್ಯವೇ ಇಲ್ಲ ಎಂದು ಸೂರ್ಯ ಪ್ರತಿಪಾದಿಸಿದರೆ, ಕಾಂಗ್ರೆಸ್ ಯೋಜನೆಯ ಪ್ರಯೋಜನಗಳನ್ನು ಪ್ರತಿಪಾದಿಸುತ್ತಿದೆ. ಈ ಮಧ್ಯೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಸೂರ್ಯ ಸವಾಲು ಹಾಕಿದ್ದಾರೆ.

ಬೆಂಗಳೂರು, ಜುಲೈ 17: ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ ಮಾರ್ಗ ರಸ್ತೆ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಮತ್ತು ಆಡಳಿತರೂಢ ಕಾಂಗ್ರೆಸ್ (Congress govt) ನಡುವಣ ವಾಕ್ಸಮರ ತೀವ್ರಗೊಂಡಿದೆ. ಯೋಜನೆಯಿಂದ ಬೆಂಗಳೂರಿಗೆ ಏನೂ ಉಪಯೋಗವಿಲ್ಲ, ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕೂಡಿದೆ ಎಂದು ತೇಜಸ್ವಿ ಸೂರ್ಯ ಎರಡು ದಿನಗಳ ಹಿಂದೆ ಆರೋಪಿಸಿದ್ದರು. ಅಲ್ಲದೆ, ಯೋಜನೆ ಹೇಗೆ ಸಾಧಕವಲ್ಲ ಎಂಬುದನ್ನು ವಿವರವಾಗಿ ಪತ್ರಿಕಾಗೋಷ್ಠಿ ಮೂಲಕ ಬಹಿರಂಗಪಡಿಸಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಯೋಜನೆ ಸಂಬಂಧಿತ ಪ್ರಮುಖ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ. ಆದರೆ, ಬ್ರಾಂಡ್ ಬೆಂಗಳೂರಿನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸರಣಿ ಸಂದೇಶ ಪ್ರಕಟಿಸುವ ಮೂಲಕ ತಿರುಗೇಟು ನೀಡಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಸುರಂಗ ರಸ್ತೆ ಯೋಜನೆಯ ನೇತೃತ್ವ ವಹಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ ಎಂದಿದ್ದಾರೆ.
ಸುರಂಗ ರಸ್ತೆಗೆ ಸಂಬಂಧಿಸಿದ ತಾಂತ್ರಿಕ ಸಲಹೆ ಮತ್ತು ಸಾರ್ವಜನಿಕ ಚರ್ಚೆಗೆ ನೀವು (ಕಾಂಗ್ರೆಸ್ ಸರ್ಕಾರ) ನಿಜಕ್ಕೂ ಮುಕ್ತರಾಗಿದ್ದರೆ, ಡಿಕೆ ಶಿವಕುಮಾರ್ ಜೊತೆ ಬಹಿರಂಗ ಚರ್ಚೆಗೆ ಪ್ರಸ್ತಾಪಿಸುತ್ತಿದ್ದೇನೆ. ಸಮಯ ಮತ್ತು ಸ್ಥಳವನ್ನು ನೀವೇ ನಿಗದಿ ಮಾಡಿ. ಒಳಿತು ಕೆಡುಕುಗಳನ್ನು ಆರೋಗ್ಯಕರ ರೀತಿಯಲ್ಲಿ ಚರ್ಚಿಸುವುದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ನಿಮ್ಮಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಎಕ್ಸ್ ಸಂದೇಶ
Good Morning.
If you truly welcome technical scrutiny and public debate on this tunnel road project,
I propose an open discussion with Hon. DCM Sri @DKShivakumar who is spearheading this project. Let the time and place be of your choosing.
It will definitely be beneficial… https://t.co/1cm82pRdmi
— Tejasvi Surya (@Tejasvi_Surya) July 16, 2025
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದ ತೇಜಸ್ವಿ ಸೂರ್ಯ, ಬೆಂಗಳೂರು ಸುರಂಗ ರಸ್ತೆ ಯೋಜನೆಯಿಂದ ಏನೂ ಉಪಯೋಗವಿಲ್ಲ. ಕೇವಲ ಶ್ರೀಮಂತರಿಗಾಗಿ ಮಾಡುವ ಆ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಒಂದಷ್ಟು ಅಂಕಿಅಂಶಗಳು ಹಾಗೂ ದಾಖಲೆಗಳನ್ನೂ ಪ್ರಸ್ತುತ ಪಡಿಸಿದ್ದರು. ಇದರಿಂದ ಕೆರಳಿದ್ದ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಸೂರ್ಯಗೆ ತಿರುಗೇಟು ನೀಡಿತ್ತು.
ಇದು ರಾಜಕೀಯ ಮನ್ನಣೆಯ ವಿಚಾರವಲ್ಲ. ಇದು ಬ್ರಾಂಡ್ ಬೆಂಗಳೂರಿಗೆ ಸಂಬಂಧಿಸಿದ್ದು, ರಾಜ್ಯ ಮತ್ತು ಕೇಂದ್ರ ಒಟ್ಟಾಗಿ ಕೆಲಸ ಮಾಡುವಂಥದ್ದಾಗಿದೆ. ಸಾರ್ವಜನಿಕ ಲೆಕ್ಕಪರಿಶೋಧನೆ, ತಾಂತ್ರಿಕ ಪರಿಶೀಲನೆ ಮತ್ತು ಮುಕ್ತ ಚರ್ಚೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರತಿಯೊಂದು ಯೋಜನೆಯನ್ನು ವ್ಯರ್ಥ ಎಂದು ಹಣೆಪಟ್ಟಿ ಕಟ್ಟುವ ಮೂಲಕ ಪ್ರಗತಿಯನ್ನು ತಡೆಯಬೇಡಿ. ನಾಗರಿಕರಿಗೆ ಯೋಜನೆಯ ಅನುಷ್ಠಾನ ಬೇಕಿದೆಯೇ ವಿನಃ ಚರ್ಚೆಯಲ್ಲ. ಮೆಟ್ರೋ, ಉಪನಗರ ರೈಲು, ಬಸ್ಸುಗಳು ಮತ್ತು ಸುರಂಗ ರಸ್ತೆಗಳ ಕಾಮಗಾರಿಯನ್ನು ಒಟ್ಟಾಗಿ ಮಾಡುವ ಬೆಂಗಳೂರನ್ನು ನಿರ್ಮಿಸೋಣ. ಪ್ರಯಾಣವನ್ನು ಕಡಿತಗೊಳಿಸುವುದು, ಹೊಗೆ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಆರ್ಥಿಕತೆಯ ವೃದ್ಧಿಯ ದೂರದೃಷ್ಟಿ ಈ ಯೋಜನೆಯ ಹಿಂದಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.
ಇದನ್ನೂ ಓದಿ: ಬೆಂಗಳೂರು ಸುರಂಗ ರಸ್ತೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಹೇಗೆಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಇದೀಗ ಕಾಂಗ್ರೆಸ್ ಪ್ರತಿಪಾದನೆಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ಸಾಧಕ-ಬಾಧಕಗಳ ಬಗ್ಗೆ ಡಿಕೆ ಶಿವಕುಮಾರ್ ಜತೆ ಮುಕ್ತ ಚರ್ಚೆಗೆ ಸಿದ್ಧ ಎಂದು ಸವಾಲೆಸೆದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ