ಶಾಸಕರು, ಸಚಿವರ ಜತೆ ಸುರ್ಜೇವಾಲ ಸಭೆಗೆ ಕಾಂಗ್ರೆಸ್ನಲ್ಲೇ ಆಕ್ಷೇಪ!
ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸಚಿವರು ಮತ್ತು ಶಾಸಕರೊಂದಿಗೆ ನಡೆಸುತ್ತಿರುವ ಸಭೆಗಳಿಗೆ ಸ್ವಪಕ್ಷದಲ್ಲೇ ಆಕ್ಷೇಪಗಳು ವ್ಯಕ್ತವಾಗಿವೆ. ವಿರೋಧ ಪಕ್ಷಗಳು ಸಹ ಈ ಸಭೆಗಳನ್ನು ಟೀಕಿಸಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಸಿಎಂ ಮತ್ತು ಡಿಸಿಎಂ ಜೊತೆಗೂ ಸುರ್ಜೇವಾಲ ಸಭೆ ನಡೆಸಿದ್ದಾರೆ. ವಿವರಗಳು ಇಲ್ಲಿವೆ.

ಬೆಂಗಳೂರು, ಜುಲೈ 17: ಕಾಂಗ್ರೆಸ್ (Congress) ಪಾಳಯದಲ್ಲಿ ಉಸ್ತುವಾರಿ ರಣದೀಪ್ ಸಿಂಗ್ (Randeep Surjewala) ನಡೆಸುತ್ತಿರುವ ಪಕ್ಷದ ದುರಸ್ತಿ ಕಾರ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅರ್ಥಾತ್, ಶಾಸಕರ ಜೊತೆ ಸಭೆ ನಡೆಸಿ ಅವರಿಂದ ದೂರು ದುಮ್ಮಾನಗಳನ್ನು ಸಂಗ್ರಹಿಸಿದ್ದ ಸುರ್ಜೇವಾಲ, ಇತ್ತ ಸಚಿವರಿಗೂ ಬುಲಾವ್ ಕೊಟ್ಟು ಮೂರು ದಿನ ಸಭೆ ನಡೆಸಿದ್ದಾರೆ. ಆದರೆ, ಸುರ್ಜೇವಾಲರ ಈ ಸಭೆಗೆ ಆಕ್ಷೇಪ ವ್ಯಕ್ತವಾಗಿದೆ. ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಅವರಿಂದಲೇ ಆಕ್ಷೇಪ ವ್ಯಕ್ತವಾಗಿದೆ.
ಸುರ್ಜೇವಾಲ ಸಭೆಗೆ ಜುಲೈ 11ರಂದೇ ಆಕ್ಷೇಪ ಎತ್ತಿದ್ದ ರಾಜಣ್ಣ, ಶಾಸಕರ ಅಹವಾಲು ಸ್ವೀಕರಿಸುವುದು ಉಸ್ತುವಾರಿ ಕೆಲಸವಲ್ಲ. ಸಚಿವರ ಕಿವಿ ಹಿಂಡುವ ಅವಶ್ಯಕತೆ ಇಲ್ಲ ಎಂದಿದ್ದರು. ಇದೇ ಕಾರಣಕ್ಕೋ ಏನು ಇತ್ತ ಸುರ್ಜೇವಾಲ ಸಭೆ ನಡೆಸುತ್ತಿದ್ದರೆ, ಅತ್ತ ರಾಜಣ್ಣ ವಿದೇಶಕ್ಕೆ ಹಾರಿದ್ದರು. ಸುರ್ಜೇವಾಲ ಸಭೆಗೆ ಗೈರಾಗಿದ್ದರು.
ರಾಜಣ್ಣ ಪುತ್ರ, ಎಂಎಲ್‌ಸಿ ರಾಜೇಂದ್ರ ಕೂಡಾ ತಂದೆಯ ರೀತಿಯಲ್ಲೇ ಸುರ್ಜೇವಾಲ ಸಭೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರ್ಜೇವಾಲ ಏನು ಅನುದಾನ ಕೊಡುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಹಾಗೆಯೇ ರಾಜಣ್ಣ ವಿದೇಶ ಪ್ರವಾಸ ಪೂರ್ವನಿಗದಿ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೆಂದು ಸುರ್ಜೆವಾಲ ಸಭೆ ಎಲ್ಲರಿಗೂ ಅಸಮಾಧಾನ ಉಂಟುಮಾಡಿಲ್ಲ. ಪಕ್ಷದ ಚುನಾವಣೆಗೆ ಟಿಕೆಟ್ ಬೇಕಾದಾಗ ಉಸ್ತುವಾರಿಗಳ ಮುಂದೆ ಹೋಗುವ ನಾವು, ಈಗಲೂ ಸಭೆಗೆ ಹಾಜರಾದರೆ ತಪ್ಪೇನಿದೆ ಎಂದು ಕೆಲ ಹಿರಿಯ ಸಚಿವರು ಸುರ್ಜೇವಾಲ ಪರ ಬ್ಯಾಟ್ ಬೀಸಿದ್ದಾರೆ.
ಸಿಎಂ, ಡಿಸಿಎಂ ಜೊತೆ ಸುರ್ಜೇವಾಲ ಸಭೆ: ಹೆಚ್ಚಿದ ಕುತೂಹಲ
ಆಕ್ಷೇಪ, ಅಸಮಾಧಾನಗಳ ನಡುವೆ ಸಚಿವರ ಜೊತೆ ಸಭೆ ಮುಗಿಸಿದ ಸುರ್ಜೇವಾಲ ಸಂಜೆ ಸಿಎಂ, ಡಿಸಿಎಂ ಜೊತೆ ಸಭೆ ನಡೆಸಿದ್ದಾರೆ. ನಿಗಮ ಮಂಡಳಿ ಸದಸ್ಯರು, ನಿರ್ದೇಶಕರ ಪಟ್ಟಿ ಅಂತಿಮಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ.
ಸುರ್ಜೇವಾಲ ಸಭೆ: ‘ಸೂಪರ್ ಸಿಎಂ’ ಎಂದು ಕಾಲೆಳೆದ ವಿಪಕ್ಷ
ಸುರ್ಜೇವಾಲ ಸಭೆಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ರಣದೀಪ್ ಆಡಳಿತ ಜಾರಿಯಾಗಿದೆಯೇ ಎಂದು ಟ್ವೀಟ್ ಮಾಡಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ. ಸುರ್ಜೇವಾಲ ಸಭೆ ಉದ್ದೇಶವೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಹಫ್ತಾ ವಸೂಲಿಗೆ ಸುರ್ಜೇವಾಲ ಬಂದಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ತಿರುಗೇಟು ಕೊಟ್ಟಿದ್ದಾರೆ.
ಇಬಿಜೆಪಿ ಟೀಕೆಗೆ ಜೆಡಿಎಸ್ ಕೂಡ ಕೈಜೋಡಿಸಿದೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಸುರ್ಜೇವಾಲ ಅವರನ್ನು ಸೂಪರ್ ಸಿಎಂ ಎಂದು ಕರೆದಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಸವಿ ಮಹದೇವಪ್ಪ, ಇಲ್ಯಾವ ಸೂಪರ್ ಸಿಎಂಗಳು ಇಲ್ಲ. ಅಸಂವಿಧಾನಕ ಹುದ್ದೆಗಳಿಗೆ ಅವಕಾಶ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ: ಜನರನ್ನು ಕರೆತರುವಂತೆ ಶಾಸಕರಿಗೆ ಸಿಎಂ ಟಾಸ್ಕ್
ಸದ್ಯ ಒಟ್ಟು 22 ಮಂದಿ ಸಚಿವರು ಸುರ್ಜೆವಾಲಾ ಮುಂದೆ ಹಾಜರಾಗಿದ್ದಾರೆ. ಸಚಿವರ ಪಾಲಿಗೆ ಇದೊಂದು ಸತ್ವ ಪರೀಕ್ಷೆಯಾ ಅಥವಾ ಸಚಿವರ ಭವಿಷ್ಯಕ್ಕೆ ಮೌಲ್ಯಮಾಪನವಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 am, Thu, 17 July 25








