OBC ವರ್ಗಗಳಿಗೆ ಶೈಕ್ಷಣಿಕ, ರಾಜಕೀಯದಲ್ಲಿ ಶೇ.50 ರಷ್ಟು ಮೀಸಲಾತಿ: ಎಐಸಿಸಿ ಒಬಿಸಿ ಮಂಡಳಿ ಸಭೆಯಲ್ಲಿ ನಿರ್ಣಯ
2029ರ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಹಿಂದುಳಿದ ವರ್ಗಗಳ ಮತಬ್ಯಾಂಕ್ ಅನ್ನು ಸೆಳೆಯಲು ಈಗಿನಿಂದಲೇ ಹೊಸ ರಣತಂತ್ರ ರೂಪಿಸಿದೆ. ಕರ್ನಾಟಕದಲ್ಲಿ ಅಹಿಂದ ರಾಮಯ್ಯ ಎಂದೇ ಕರೆಸಿಕೊಳ್ಳುವ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು (ಜುಲೈ 16) ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಎಐಸಿಸಿ ಒಬಿಸಿ ಮಂಡಳಿಯ ಮೊದಲ ಸಭೆ ನಡೆದಿದ್ದು, ಈ ಮೊದಲ ಸಭೆಯಲ್ಲಿ ಪ್ರಮುಖವಾಗಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಾಗಾದರೆ, ಸಭೆಯಲ್ಲಿ ಯಾವೆಲ್ಲ ನಿರ್ಣಯ ಕೈಗೊಳ್ಳಲಾಯಿತು ಎಂಬ ಸಂಪುರ್ಣ ವಿವರ ಇಲ್ಲಿದೆ

ಬೆಂಗಳೂರು, ಜುಲೈ 16: ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಸಮಿತಿ ಮಂಡಳಿ ಸಭೆಯಲ್ಲಿ (AICC OBC advisory council meeting) ಪ್ರಮುಖವಾಗಿ ಮೂರು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿ ಮತ್ತು ಹೊಟೇಲ್ ಶಾಂಗ್ರಿಲಾದಲ್ಲಿ ಎರಡು ದಿನಗಳ ಕಾಲ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಬಗ್ಗೆ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಜಾತಿಗಣತಿ ವಿಚಾರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಕೈಗೊಂಡ 3 ನಿರ್ಣಯಗಳು
- ರಾಷ್ಟ್ರದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಸ್ಥಿತಿ ಬಗ್ಗೆ ಸಂಪೂರ್ಣ ಗಣತಿ ಆಗಬೇಕು.
- ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಸೇವೆ ಹಾಗೂ ರಾಜಕೀಯ ವಲಯದಲ್ಲಿ ಶೇಕಡಾ 50 ರಷ್ಟು ಮೀಸಲಾತಿ ನೀಡಬೇಕು.
- ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಟಿಕಲ್ 15(5) ಪ್ರಕಾರ ಮೀಸಲಾತಿ ನೀಡಬೇಕು.
ಹಿಂದುಳಿದ ವರ್ಗಗದವರ ಅಭಿವೃದ್ಧಿ ನಮ್ಮ ಉದ್ದೇಶವಾಗಿದ್ದು, ಸಾಮಾಜಿಕ ನ್ಯಾಯ ಕೊಡುವುದು ಮುಖ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಡುತ್ತಿದ್ದೇವೆ. ಸಂವಿಧಾನ ಉದ್ದೇಶದಂತೆ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು. ನ್ಯಾಯ ಯೋಧ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆಯುತ್ತಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ಅಂಶದ ಮೇಲೆ ಜಾತಿಗಣತಿ ನಡೆಯಬೇಕು ಎಂದು ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಡೆಸುವಂತೆ 2015ರಲ್ಲಿ ನಮ್ಮ ಸರ್ಕಾರ ಹಿಂದುಳಿದ ಆಯೋಗಕ್ಕೆ ಆದೇಶ ನೀಡಿತ್ತು. 2018ರಲ್ಲಿ ಆಯೋಗ ಸಮೀಕ್ಷೆ ಪೂರ್ಣಗೊಳಿಸಿತು. ಆದರೆ, ಆಗ ನಮ್ಮ ಸರ್ಕಾರ ಇರಲಿಲ್ಲ. ಹೆಚ್ಡಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಈ ವೇಳೆ ಸಮೀಕ್ಷಾ ವರದಿ ಸಲ್ಲಿಸಲು ಕಾಂತರಾಜ್ ಅವರು ಹೆಚ್ಡಿ ಕುಮಾರಸ್ವಾಮಿ ಅವರಿಗೆ ಸಮಯ ಕೇಳಿದರು. ಆದರೆ ಹೆಚ್ಡಿ ಕುಮಾರಸ್ವಾಮಿ ಅವರು ಸಮಯ ನೀಡಲಿಲ್ಲ. ನಂತರ, ಬಿಜೆಪಿ ಸರ್ಕಾರ ಬಂತು, ಅವರೂ ವರದಿ ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ: ಇದು ಸೆಪ್ಟೆಂಬರ್ ಕ್ರಾಂತಿ ಮುನ್ನುಡಿ ನಾ?
ಇದೀಗ 10 ವರ್ಷದ ಹಳೇಯ ಸಮೀಕ್ಷಾ ವರದಿ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಮತ್ತೆ ಸಮೀಕ್ಷೆಗೆ ಸೂಚನೆ ನೀಡಿದ್ದೇವೆ. 3 ತಿಂಗಳ ಒಳಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ. ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳ ಹಿತಾಸಕ್ತಿ ಪರ ಇದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಮ್ಮ ಪಕ್ಷದ ಉದ್ದೇಶವಾಗಿದೆ. ಒಬಿಸಿಗಳಿಗೆ ಸಾಮಾಜಿಕ ನ್ಯಾಯ ಕೊಡುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Wed, 16 July 25



