ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ: ಇದು ಸೆಪ್ಟೆಂಬರ್ ಕ್ರಾಂತಿ ಮುನ್ನುಡಿ ನಾ?
ಒಂದೆಡೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ʻಸೆಪ್ಟೆಂಬರ್ ಕ್ರಾಂತಿʼಯ ಬಿರುಗಾಳಿ ಜೋರಾಗಿ ಬೀಸುತ್ತಿದೆ. ಇನ್ನೊಂದೆಡೆ ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಮೊನ್ನೇ ಅಷ್ಟೆ ಅಂತೆ-ಕಂತೆಗಳಿಗೆ ತೆರೆಬಿದ್ದಿದ್ದ ನಾಯಕತ್ವ ಬದಲಾವಣೆಗೆ ಮತ್ತೆ ಇದೀಗ ರೆಕ್ಕೆಪುಕ್ಕಗಳು ಬಂದಿವೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿರುವುದು. ಹೌದು..ಸಿದ್ದರಾಮಯ್ಯನವರನ್ನ ಏಕಾಏಕಿ ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು, (ಜುಲೈ 06): ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (Siddaramaiah) ಏಕಾಏಕಿ ಎಐಸಿಸಿ ಒಬಿಸಿ ಸಲಹಾ ಮಂಡಳಿ (AICC OBC Advisory Council) ಅಧ್ಯಕ್ಷರನ್ನಾಗಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ ಕ್ರಾಂತಿ ಹಾಗೂ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯವನರನ್ನು ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನಡೆ ತೀವ್ರ ಕುತೂಹಲ ಮೂಡಿಸಿದೆ. 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಸದ್ಯ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯರನ್ನ ನೇಮಕ ಮಾಡಲಾಗಿದೆ. ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದ್ದು, ಇದೇ ಜುಲೈ 15ರಂದು ಬೆಂಗಳೂರಿನಲ್ಲಿ ಮೊದಲ ಸಭೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ಕಚೇರಿ ಆವರಣದಲ್ಲಿನ ಭಾರತ್ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಪೈಕಿ ಐವರು ಮಾಜಿ ಸಿಎಂಗಳು, 10 ಮಂದಿ ಕೇಂದ್ರದ ಮಾಜಿ ಸಚಿವರೂ ಸಹ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಡಿಕೆಶಿ, ಸುರ್ಜೆವಾಲಾ ಖಡಕ್ ಸ್ಪಷ್ಟನೆ: ನಾಯಕತ್ವ ಬದಲಾವಣೆ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್
ಸಿದ್ದರಾಮಯ್ಯನವರಿಗೆ ಇದು ಗೊತ್ತೇ ಇಲ್ಲ
ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ ಎನ್ನುವುದು ಅಚ್ಚರಿಕೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ. ನೇಮಕದ ಬಗ್ಗೆ ನನಗೆ ಗೊತ್ತಿಲ್ಲ, ಎಐಸಿಸಿಯವರ ಜೊತೆ ಮಾತಾಡುತ್ತೇನೆ. ಜುಲೈ 15ರಂದು ಕರ್ನಾಟಕದಲ್ಲಿ ಒಂದು ಸಭೆ ಮಾಡಿ ಎಂದು ನನಗೆ ಹೇಳಿದ್ದರು. ಸಂಚಾಲಕರನ್ನಾಗಿ ಮಾಡಿದ್ದಾರೋ, ಚೇರ್ಮನ್ ಮಾಡಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ನಾನು ಕೇಳಿಲ್ಲ, ಅವರು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡುತ್ತೇನೆ. ರಾಷ್ಟ್ರ ರಾಜಕಾರಣ ಅಲ್ಲ, ಏನು ಅಂತಾ ಘೋಷಣೆ ಮಾಡಿದ್ದಾರೆ ಗೊತ್ತಿಲ್ಲ ಎಂದರು.
ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಸಿದ್ದರಾಮಯ್ಯ?
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಮಧ್ಯೆ 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆಯೇ ಎನ್ನುವ ಪ್ರಶ್ನೆಯೂ ಮೂಡಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಹಿಂದೂಳಿದ ವರ್ಷದ ಮಾಸ್ ಲೀಡರ್. ಅಹಿಂದ ನಾಯಕ ಎಂದೇ ಕರೆಸಿಕೊಳ್ಳುವವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದು, ಅಪಾರ ಅಭಿಮಾನಿಗಳನ್ನು, ಜನಪ್ರಿಯತೆ ಹೊಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ವರ್ಚಸ್ಸನ್ನು ಕರ್ನಾಟಕದಿಂದ ದೇಶದಾದ್ಯಂತ ವಿಸ್ತರಿಸಲು ಹೈಕಮಾಂಡ್ ಈ ಪ್ಲ್ಯಾನ್ ಮಾಡಿರುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಏನು?
ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಹಿಂದೆ ಬಹುದೊಡ್ಡ ತಂತ್ರಗಾರಿಕೆ ಇದೆ. ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಹಿಂದುಳಿದ ವರ್ಗದ ಬಹುದೊಡ್ಡ ಮತಬ್ಯಾಂಕ್ ಗಟ್ಟಿಮಾಡುವ ಎಐಸಿಸಿ, ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು ಪ್ಲ್ಯಾನ್ ಮಾಡಿದೆ. ಕಳೆದ ಹಲವಾರು ಸಭೆಗಳಲ್ಲಿ ಓಬಿಸಿ ವರ್ಗವನ್ನು ಭದ್ರಗೊಳಿಸುವ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದರು. ಕಳೆದ ಎರಡು CWC ಸಭೆಗಳಲ್ಲಿ ಓಬಿಸಿ ವರ್ಗದ ಬಗ್ಗೆ ರಾಹುಲ್ ಪ್ರತಿಪಾದಿಸಿಸುತ್ತಾ ಬಂದಿದ್ದರು. ದೇಶದ ಒಟ್ಟೂ ಜನಸಂಖ್ಯೆಯ ಅರ್ಧದಷ್ಟು ಭಾಗ ಹಿಂದುಳಿದ ವರ್ಗ ಸೇರಿದೆ. ಹೀಗಾಗಿ ಹಿಂದುಳಿದ ವರ್ಗಕ್ಕೆ ಹೆಚ್ಚಿನ ನಾಯಕತ್ವ ನೀಡುವ ಬಗ್ಗೆ ಆಲೋಚನೆ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಓಬಿಸಿ ಸಲಹಾ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.
ಓಬಿಸಿ ಸಲಹಾ ಮಂಡಳಿ ಮೂಲಕ ದೇಶದ ಅರ್ಧದಷ್ಟು ಸಂಖ್ಯೆಯ ವರ್ಗವನ್ನು ಕಾಂಗ್ರೆಸ್ ಹಿಡಿದಿಟ್ಟುಕೊಳ್ಳುವುದು ಕಾಂಗ್ರೆಸ್ ನ ತಂತ್ರವಾಗಿದ್ದು, ಇದಕ್ಕೆ ಕರ್ನಾಟಕ ಅಹಿಂದ ನಾಯಕ ಎಂದೇ ಜನಪ್ರಸಿದ್ಧಿ ಪಡೆದುಕೊಂಡಿರುವ ಸಿದ್ದರಾಮಯ್ಯನವರ ಅನುಭವವನ್ನು ಬಳಸಿಕೊಳ್ಳುವ ಚಿಂತನೆ ನಡೆಸಿದೆ. ಇದರಿಂದ ಸಿದ್ದರಾಮಯ್ಯನವರಿಗೆ ಓಬಿಸಿ ಸಲಹಾ ಮಂಡಳಿ ನೇತೃತ್ವ ವಹಿಸಿದ್ದು, ಕರ್ನಾಟಕದಿಂದಲೇ ಆರಂಭಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಆದ್ರೆ, ಇನ್ನೊಂದೆಡೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದ್ದರೆ, ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಓಬಿಸಿ ಸಲಹಾ ಸಮಿತಿ ಮೂಲಕ ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯುತ್ತಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗಿನ ನಡುವೆಯೇ ಸಿದ್ದರಾಮಯ್ಯನವರಿಗೆ ದೊಡ್ಡ ರಾಷ್ಟ್ರ ಮಟ್ಟದ ಹುದ್ದೆ ನೀಡಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದೇ ನೇಮಕ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
Published On - 1:09 pm, Sun, 6 July 25