ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ: ಜನರನ್ನು ಕರೆತರುವಂತೆ ಶಾಸಕರಿಗೆ ಸಿಎಂ ಟಾಸ್ಕ್
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜುಲೈ 19ರಂದು ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಆ ಮೂಲಕ ತವರು ಜಿಲ್ಲೆಯಲ್ಲೇ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪ್ರತಿ ಕ್ಷೇತ್ರದಿಂದ 6ರಿಂದ 8 ಸಾವಿರ ಜನರನ್ನ ಕರೆತರುವಂತೆ ಕಾಂಗ್ರೆಸ್ ಶಾಸಕರಿಗೆ ಸಿಎಂ ಟಾಸ್ಕ್ ನೀಡಿದ್ದಾರೆ.

ಮೈಸೂರು, ಜುಲೈ 16: ಐದು ವರ್ಷ ನಾನೇ ಸಿಎಂ ಅಂತಾ ದೆಹಲಿಯಲ್ಲಿ ನಿಂತು ಹೊಸ ದಾಳ ಉರುಳಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದು ಕೂಡ ಅವರ ತವರು ಜಿಲ್ಲೆ ಮೈಸೂರಿನಲ್ಲಿ (mysuru). ಜು.19ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಪ್ರತಿ ಕ್ಷೇತ್ರದಿಂದ 6ರಿಂದ 8 ಸಾವಿರ ಜನರನ್ನ ಕರೆತರುವಂತೆ ಶಾಸಕರಿಗೆ ಸಿದ್ದರಾಮಯ್ಯ ಟಾಸ್ಕ್ ನೀಡಿದ್ದಾರೆ.
ಮೈಸೂರಿನ ಸಾಧನಾ ಸಮಾವೇಶದಲ್ಲಿ 2,600 ಕೋಟಿ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶ ಮೂಲಕ ಹಳೇ ಮೈಸೂರು ಭಾಗದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶದ ಜವಾಬ್ದಾರಿಯನ್ನ ಸಿಎಂ ಸಿದ್ದರಾಮಯ್ಯ ಆಪ್ತರೂ ಆಗಿರುವ ಸಚಿವ ಡಾ.ಮಹದೇವಪ್ಪ ಹೆಗಲಿಗೆ ವಹಿಸಲಾಗಿದೆ.
ಇದನ್ನೂ ಓದಿ: ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ: ಸಿಎಂ ಸಿದ್ದರಾಮಯ್ಯಗೆ ಖರ್ಗೆ ಪತ್ರ, ಖಡಕ್ ಸೂಚನೆ
ಈಗಾಗಲೇ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದ್ದು, ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಪ್ಲ್ಯಾನ್ ರೂಪಿಸಲಾಗಿದೆ. ಅಲ್ಲದೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇತ್ತ ಸಿಎಂ ಟಾಸ್ಕ್ ಹಿನ್ನೆಲೆ ಕೈ ಶಾಸಕರು ಪೂರ್ವ ಭಾವಿ ಸಭೆ ಮಾಡಿದ್ದಾರೆ. ಜನರನ್ನು ಕರೆತರಲು ಪ್ರತಿ ಕ್ಷೇತ್ರಕ್ಕೆ ಅಗತ್ಯಕ್ಕೆ ತಕ್ಕಂತೆ ಬಸ್ ಪೂರೈಕೆ, ನಗರ ಕ್ಷೇತ್ರಗಳಿಗೆ ಬಸ್ ಬದಲು ಮಿನಿ ಬಸ್, ಕ್ಯಾಂಟರ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ.
ಸಿದ್ದರಾಮಯ್ಯಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡಲು ಪ್ರಸ್ತಾಪ
ಇನ್ನು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡಲು ತಯಾರಿ ನಡೆಸಲಾಗುತ್ತಿದ್ದು, ಈ ಬಗ್ಗೆ ಮಂಗಳವಾರ ನಡೆದ ಚಾಮರಾಜ ಕ್ಷೇತ್ರದ ಕೈ ಮುಖಂಡರ ಸಭೆಯಲ್ಲಿ ಪ್ರಶಸ್ತಿ ನೀಡುವ ಕುರಿತಾಗಿ ಸಂವಿಧಾನ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಭಾಸ್ಕರ್ ಪ್ರಸ್ತಾಪಿಸಿದ್ದರು. ಸಿದ್ದರಾಮಯ್ಯ ಅಂಬೇಡ್ಕರ್ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಹೀಗಾಗಿ ಮೈಸೂರು ಸಾಧನ ಸಮಾವೇಶದಲ್ಲಿ ಅವರಿಗೆ ಸಂವಿಧಾನ ರಕ್ಷಕ ಪ್ರಶಸ್ತಿ ನೀಡೋಣ ಎಂದಿದ್ದಾರೆ.
ಸಮಾವೇಶದ ಮೂರು ದಿನ ಮೊದಲೇ ಮೈಸೂರಿಗೆ ಸಿದ್ದರಾಮಯ್ಯ!
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕೆ ಪ್ಲ್ಯಾನ್ ಮಾಡಲಾಗಿದೆ. ಸಮಾವೇಶ ಇರುವುದು ಜುಲೈ 19ರಂದು. ಆದರೆ ಮೂರು ದಿನ ಮೊದಲೇ ಅಂದರೆ ಜುಲೈ 17ರಂದೇ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಅಲ್ಲೇ ಠಿಕಾಣಿ ಹೂಡಲಿದ್ದಾರೆ. ಸಾಧನ ಸಮಾವೇಶದ ನೆಪದಲ್ಲಿ ತಮ್ಮ ಪರ ಇರುವ ಬೆಂಬಲವನ್ನು ಹೈಕಮಾಂಡ್ ಹಾಗೂ ವಿರೋಧಿ ಪಾಳಯದವರಿಗೆ ತಲುಪಿಸುವುದು ಸಿದ್ದರಾಮಯ್ಯ ಉದ್ದೇಶ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



