ಪ್ರತ್ಯೇಕ ಘಟನೆ: ಸಾವಿನಲ್ಲೂ ಒಂದಾದ ತಾಯಿ-ಮಗ; ಅತ್ತ ಕೊಪ್ಪಳ, ದಾವಣಗೆರೆಯಲ್ಲಿ ಹೃದಯಾಘಾತ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ತಾಯಿ-ಮಗ ಸಾವಿನಲ್ಲೂ ಒಂದಾಗಿದ್ದಾರೆ. ತಾಯಿಯ ಮರಣದ ಕೆಲ ಗಂಟೆಗಳ ನಂತರ ಮಗನೂ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಶೋಕ ಮನೆ ಮಾಡಿದೆ. ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ, ಕೊಪ್ಪಳದಲ್ಲಿ ಓರ್ವ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಯಾದಗಿರಿ, ಜುಲೈ 16: ಯಾದಗಿರಿ (Yadgiri) ಜಿಲ್ಲೆಯ ಶಹಾಪುರ (Shapur) ತಾಲೂಕಿನ ಗೋಗಿ ಗ್ರಾಮದ ತಾಯಿ ಮತ್ತು ಮಗ ಸಾವಿನಲ್ಲೂ ಒಂದಾಗಿದ್ದಾರೆ. ಗೋಗಿ ಗ್ರಾಮದ ವೃದ್ಧೆ ಸರಸ್ವತಿ (80 ವರ್ಷ) ಮಂಗಳವಾರ (ಜು.15) ವಯೋಸಹಜ ಮೃತಪಟ್ಟರು. ತಾಯಿ ಸರಸ್ವತಿ ಮೃತಪಟ್ಟ ಕೆಲ ಗಂಟೆಯಲ್ಲೇ ಪುತ್ರ ಶೇಖಪ್ಪ ದಿಗ್ಗಿ (58) ಕೂಡ ಮೃತಪಟ್ಟಿದ್ದಾರೆ. ಇದರೊಂದಿಗೆ ತಾಯಿ ಮತ್ತು ಮಗ ಒಂದಾದ ಘಟನೆ ನಡೆದಿದೆ.
ಮೃತ ಶೇಖಪ್ಪ ದಿಗ್ಗಿ ಅವರು ಅನಾರೋಗ್ಯದಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಮೃತಪಟ್ಟ ವಿಚಾರವನ್ನು ಶೇಖಪ್ಪ ದಿಗ್ಗಿ ಅವರಿಗೆ ತಿಳಿಸಿರಲಿಲ್ಲ. ಆದರೆ, ಮಂಗಳವಾರ ರಾತ್ರಿಯೇ 9 ಗಂಟೆ ಸುಮಾರಿಗೆ ಶೇಖಪ್ಪ ದಿಗ್ಗಿ ಮೃತಪಟ್ಟಿದ್ದಾರೆ. ತಾಯಿ, ಮಗನ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇವರಿಬ್ಬರ ಸಾವಿನಿಂದ ಇಡೀ ಗ್ರಾಮದ ಜನರು ಶೋಕಸಾಗರದಲ್ಲಿ ಮುಳುಗಿದ್ದರು. ತಾಯಿ ಮತ್ತು ಮಗನ ಶವಗಳಿಗೆ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.
ಇದನ್ನೂ ಓದಿ: ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ: ಮೂರೇ ತಿಂಗಳಲ್ಲಿ ಮುರಿದು ಬಿತ್ತು ದಾಂಪತ್ಯ
ಹೃದಯಾಘಾತದಿಂದ ಯುವತಿ ಸಾವು
ಕೊಪ್ಪಳ: ಕೊಪ್ಪಳದ ಶಿವಗಂಗಾ ಲೇಔಟ್ ನಿವಾಸಿ ಯುವತಿ ಮಂಜುಳಾ (26) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಜುಳಾ ಹೂಗಾರ ಮಂಗಳವಾರ (ಜು.16) ಲೋ ಬಿಪಿಯಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮಂಜುಳಾ ಕೊನೆಯುಸಿರು ಎಳೆದಿದ್ದಾರೆ. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಮಂಜುಳಾ ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿನ ಕೆಲಸ ತೊರೆದು ಕೊಪ್ಪಳಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಮಂಜುಳಾ ಪೋಷಕರು ಹೂವಿನ ವ್ಯಾಪಾರ ಮಾಡುತ್ತಾರೆ.
ದೈಹಿಕ ಶಿಕ್ಷಕ ಸಾವು
ದಾವಣಗೆರೆ: ಹೃದಯಾಘಾತದಿಂದ ಕುಸಿದುಬಿದ್ದು ದೈಹಿಕ ಶಿಕ್ಷಕ ಮೃತಪಟ್ಟಿರುವ ಘಟನೆ ಹೊನ್ನಾಳಿ ಪಟ್ಟಣದ ಬಿವಿಎಸ್ ಶಾಲೆಯಲ್ಲಿ ನಡೆದಿದೆ. ದೈಹಿಕ ಶಿಕ್ಷಕ ರವಿಕುಮಾರ(28) ಮೃತದುರ್ದೈವಿ. ಮಕ್ಕಳಿಗೆ ಕಬಡ್ಡಿ ಆಟ ಹೇಳಿಕೊಡುತ್ತಿದ್ದ ವೇಳೆ ದೈಹಿಕ ಶಿಕ್ಷಕ ರವಿಕುಮಾರ ಅವರಿಗೆ ಹೃದಯಾಘಾತವಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Wed, 16 July 25



