ಹೆಂಡ್ತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪ: ಮೂರೇ ತಿಂಗಳಲ್ಲಿ ಮುರಿದು ಬಿತ್ತು ದಾಂಪತ್ಯ
ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಹೆಂಡತಿಯೇ ಗಂಡನ ನದಿಗೆ ತಳ್ಳಿದ ಆರೋಪ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಪತಿ ತಾತಪ್ಪ ನದಿಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪತ್ನಿಯೇ ತನನ್ನು ಕೊಲ್ಲಲು ನದಿಗೆ ನೂಕಿದ್ದಾಳೆಂದು ಪತಿ ಆರೋಪ ಮಾಡಿದ್ದಾನೆ. ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಇಬ್ಬರ ಸಂಬಂಧ ಮುರಿದುಬಿದ್ದಿದೆ.

ಯಾದಗಿರಿ, (ಜುಲೈ 15): ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಹೆಂಡತಿಯೇ ಗಂಡನ ನದಿಗೆ ತಳ್ಳಿದ ಆರೋಪಕ್ಕೆ ಬಿಗ್ ಟ್ವಿಸ್ಡ್ ಸಿಕ್ಕಿದೆ. ನದಿಗೆ ತಳ್ಳಿ ಸಾಯಿಸಲು ಯತ್ನಿಸಿದ್ದಾಳೆಂದು ಪತಿ ತಾತಪ್ಪ, ಪತ್ನಿ ಗದ್ದೆಮ್ಮನ ಮೇಲೆ ಆರೋಪ ಮಾಡಿದ್ದು, ಇದೀಗ ಇಬ್ಬರ ಮೂರು ತಿಂಗಳ ವೈವಾಹಿಕ ಸಂಬಂಧ ಅಂತ್ಯವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ನಡೆಸಿ ಪತಿ ತಾತಪ್ಪ, ಗದ್ದೆಮ್ಮನಿಂದ ವಿಚ್ಚೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ. ಹೀಗಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದ ಗದ್ದೆಮ್ಮ ಹಾಗೂ ಆಕೆ ಕುಟುಂಬಸ್ಥರು ಮರ್ಯಾದೆ ಅಂಜಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.
ಇನ್ನು ಈ ಬಗ್ಗೆ ಗದ್ದೆಮ್ಮ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಲ್ಲಾ ಮುಗಿದು ಹೋಗಿದೆ.ನಿನ್ನೆ ನ್ಯಾಯ ಪಂಚಾಯತಿ ಮಾಡಿ ತಾಳಿ ಹಾಗೂ ಕಾಲುಂಗುರು ತೆಗೆದುಕೊಂಡು ಹೋಗಿದ್ದಾರೆ. ಊರಿನ ಹಿರಿಯರ ಸಮ್ಮುಖದಲ್ಲಿ ಕುಳಿತು ನ್ಯಾಯ ಪಂಚಾಯತಿ ಮಾಡಿದ್ದಾರೆ. ನನಗೆ ಇಷ್ಟ ಇದೆ ಅಂತಾನೆ ಮದುವೆ ಆಗಿದ್ದೆ. ಆದ್ರೆ ನಾನೇ ನದಿಗೆ ತಳ್ಳಿದ್ದೇನೆಂದು ಹೇಳಿದ್ದಾರೆ. ನಾನ್ಯಾಕೆ ಹಂಗೆ ಮಾಡಲಿ. ಇವತ್ತಿನಿಂದ ನಮಗೆ ನೀವು ಬೇಡ. ನಿಮಗೆ ನಾವು ಬೇಡ ಎಂದು ನ್ಯಾಯ ಆಗಿದೆ. ಗಂಡ ನಿನ್ನೆ ನಾನು ಬೇಡ ಅಂತ ಹೇಳಿ ನ್ಯಾಯ ಮುಗಿಸಿದ್ದಾರೆ. ಮದುವೆಗಿಂತ ಮುಂಚೆ ಹೇಗಿದ್ವಿ ಹಾಗೆ ಇರಬೇಕು ಎಂದು ಹೇಳಿದ್ದೆವೆ ಎಂದಿದ್ದಾಳೆ.
ಇದನ್ನೂ ಓದಿ: ರಾಯಚೂರು: ಫೋಟೊಶೂಟ್ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಈ ಬಗ್ಗೆ ಮಾತನಾಡಿರುವ ತಾತಪ್ಪನ ಸಹೋದರ ಅಶೋಕ್, ನದಿಗೆ ತಳ್ಳಿದ ಬಳಿಕ ಆಕೆಯ ಕೈಯಲ್ಲಿ ಚಪ್ಪಲಿ ಹಿಡಿದಿದ್ದಳು. ಘಟನೆ ಬಳಿಕ ತಾತಪ್ಪ ಸಾಕಷ್ಟು ನೊಂದಿದ್ದು, ಮನೆಯಿಂದ ಆಚೆ ಬರುತ್ತಿಲ್ಲ. ಹಾಗಾಗಿ ನಾವು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದೇವೆ. ಗದ್ದೆಮ್ಮ ಕಡು ಬಡವರಾಗಿದ್ರೂ ನಾವು ನಮ್ಮ ಹುಡುಗನಿಗೆ ಮದುವೆ ಮಾಡಿದೆವು. ನಮ್ಮ ಬಂಗಾರದ ಸೂಜಿ ನಮ್ಮ ಕಣ್ಣಿಗೆ ಚುಚ್ಚಿದೆ. ಗಂಡ ನದಿಗೆ ಬಿದ್ದ ತಕ್ಷಣ ಪತ್ನಿ ಅವನಿಗೆ ಚಪ್ಪಲಿ ತೋರಿಸಿದ್ದಾಳೆ. ಅವಳಿಗೆ ಅವನು ಇಷ್ಟವಿಲ್ಲದ ಕಾರಣ ಚಪ್ಪಲಿ ತೋರಿಸಿದ್ದಾಳೆ. ನದಿಗೆ ಬಿದ್ದ ತಕ್ಷಣ ಅವಳ ಚಿಕ್ಕಮ್ಮಳಿಗೆ ಕರೆ ಮಾಡಿದ್ದಾಳೆ. ಗಂಡ ನದಿಗೆ ಬಿದ್ದಾಗ ಸಹಾಯ ಮಾಡಿ ಎಂದು ಜನರ ಕರೆಯಬೇಕು. ಆದ್ರೆ ಆಕೆ ಕೈಯಲ್ಲಿ ಚಪ್ಪಲಿ ಹಿಡಿದಿದ್ರಿಂದ ತಾತಪ್ಪಗೆ ಸಿಟ್ಟು ಬಂದಿದೆ. ಹಾಗಾಗಿ ಅವಳಿಗೆ ವಿಚ್ಛೇದನ ನೀಡಲು ಎರಡು ಕುಟುಂಬದವರಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಫೋಟೋ ತೆಗೆಯುವ ನೆಪದಲ್ಲಿ ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪನನ್ನೇ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಗೆ ತಳ್ಳಿ ಕೊಲೆಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಸ್ವತಃ ನದಿಗೆ ಬಿದ್ದು ಪಾರಾಗಿ ಬಂದಿದ್ದ ಪತಿ ತಾತಪ್ಪನೇ ಆರೋಪ ಮಾಡಿದ್ದ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದ್ರೆ, ಈ ಆರೋಪವನ್ನು ಪತ್ನಿ ಗದ್ದೆಮ್ಮ ತಳ್ಳಿಹಾಕಿದ್ದು, ತಾನೇ ಕಾಲು ಜಾರಿ ಬಿದ್ದಿದ್ದಾನೆ ಎಂದಿದ್ದಾಳೆ.



