ತಾನೇ ಸಲಹೆ ಕೊಟ್ಟು ಒಡಹುಟ್ಟಿದ ಅಕ್ಕನಿಗೆ ಮೋಸ ಮಾಡಿದ ತಮ್ಮ
ಹಣಕ್ಕೆ ಸತ್ತ ಹೆಣವೂ ಬಾಯಿ ತೆರೆಯುತ್ತೆ ಎನ್ನುವ ಗಾದೆಯಂತೆ, ಸ್ವತಃ ತಮ್ಮನೇ ತನ್ನ ಒಡಹುಟ್ಟಿದ ಅಕ್ಕನಿಗೆ ಸಲಹೆ ಕೊಟ್ಟು ಆಕೆಯ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾನೆ. ಮಗಳ ವಿದ್ಯಾಭ್ಯಾಸಕ್ಕೆಂದು ಬಾಂಕ್ ನಲ್ಲಿ ಡಿಪಾಸಿಟ್ ಇಡುವ ಸಲಹೆ ನೀಡಿ ಬಳಿಕ ಹಣವನ್ನು ಎಗರಿಸಿದ್ದಾನೆ. ಈ ಸಂಬಂಧ ಇದೀಗ ಅಕ್ಕ, ತನ್ನ ತಮ್ಮನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬೆಂಗಳೂರು, (ಜುಲೈ 15): ಅಕ್ಕನಿಗೆ ಸಹೋರದನೇ ಸಲಹೆಕೊಟ್ಟು ಬಳಿಕ ಆಕೆಗೆ ಮೋಸ ಮಾಡಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಪಾಸಿಟ್ ಮಾಡುವಂತೆ ಅಕ್ಕ ಕೊಟ್ಟಿದ್ದ ಹಣವನ್ನು ಸಹೋದರ ಬಳಸಿಕೊಂಡು ಮೋಸ ಮಾಡಿದ್ದಾನೆ. ಹೌದು..ಶ್ರೀಧರ್ ಎನ್ನುವಾತ ಹಣ ಪಡೆದು ಬ್ಯಾಂಕ್ ನಲ್ಲಿ ಡಿಪಾಸಿಟ್ ಇಡದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದಾಗಿ ಅಕ್ಕ ಶೋಭಾ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನೆಲಮಂಗಲದ ನಿವಾಸಿಯಾಗಿರುವ ಶೋಭಾ,ತನ್ನ ಮಗಳ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಟ್ಟಿದ್ದಳು. ಈ ಹಣವನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವಂತೆ ಅಕ್ಕನಿಗೆ ಶ್ರೀಧರ್ ಸಲಹೆ ನೀಡಿದ್ದ. ಹಣ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡು ಮುಂದಿನ ದಿನಗಳಲ್ಲಿ ಬೇಕಾಗುತ್ತದೆ ಎಂದು ಹೇಳಿದ್ದ. ಇದನ್ನು ನಂಬಿದ್ದ ಅಕ್ಕ ಶೋಭಾ, ಹೇಗೋ ನೀನೇ ಬ್ಯಾಂಕ್ ಕ್ಯಾಷಿಯರ್ ಅಲ್ವಾ ಹೋಗಿ ಡಿಪಾಸಿಟ್ ಮಾಡಿಕೋ ಎಂದು 8 ಲಕ್ಷ ರೂ. ಹಣ ನೀಡಿದ್ದಾಳೆ. ಆದ್ರೆ, ಶ್ರೀಧರ್, ಹಣ ಡಿಪಾಸಿಟ್ ಮಾಡದೇ ಬಳಸಿಕೊಂಡಿದ್ದಾನೆ.
ಹೀಗೆ ಶೋಭಾ ಒಂದು ದಿನ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಸಹೋದರ ಹಣ ಡಿಪಾಸಿಟ್ ಮಾಡದೇ 8 ಲಕ್ಷ ರೂ ಹಣ ಬಳಸಿಕೊಂಡು ವಂಚನೆ ಮಾಡುವುದು ಬೆಳಕಿಗೆ ಬಂದಿದೆ. ಬಳಿಕ ಶೋಭಾ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾಳೆ. ಆದ್ರೆ ಶ್ರೀಧರ್ ಹಣ ಕೊಡದಿದ್ದರಿಂದ ಶೋಭಾ, ನೆಲಮಂಗಲ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.




