ಪುಷ್ಪ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಿಸುತ್ತಿದ್ದ ನಾಲ್ವರ ಬಂಧನ: 527 ಕೆಜಿ ತೂಕದ 80 ಲಕ್ಷಕ್ಕೂ ಅಧಿಕ ಮೌಲ್ಯದ ರಕ್ತಚಂದನ ವಶಕ್ಕೆ
ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿತರಿಂದ 527 ಕೆಜಿ ತೂಕದ 80 ಲಕ್ಷಕ್ಕೂ ಅಧಿಕ ಮೌಲ್ಯದ ರಕ್ತ ಚಂದನ, 2 ಲಾಂಗು, ಪೇಪರ್ ಸ್ಪ್ರೇ ವಶಕ್ಕೆ ಪಡೆದಿದ್ದಾರೆ.
ನೆಲಮಂಗಲ: ಪುಷ್ಪ ಸಿನಿಮಾ ಶೈಲಿಯಲ್ಲಿ ರಕ್ತಚಂದನ (red sandalwood) ಸಾಗಿಸುತ್ತಿದ್ದ ನಾಲ್ವರನ್ನು ಬೆಂಗಳೂರಿನ ಜಾಲಹಳ್ಳಿ ಪಶ್ಚಿಮ ವಿಭಾಗ ಜಾರಕಬಂಡೆ ಉಪ ಅರಣ್ಯ ಸಂಚಾರಿ ದಳ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಅರೆಸ್ಟ್ ಮಾಡಿದ್ದಾರೆ. ನಜೀಬ್ ಕಾಶಿಫ್ ಪಾಷ್(30), ನಜೀಬ್ ಖಾನ್(26), ನವೀನ್ ಕುಮಾರ್ ಕೆ(30) ಚೇತನ್ ಎಂ.ಎಸ್(20) ಬಂಧಿತರು. ಬಂಧಿತರಿಂದ 527 ಕೆಜಿ ತೂಕದ 80 ಲಕ್ಷಕ್ಕೂ ಅಧಿಕ ಮೌಲ್ಯದ ರಕ್ತ ಚಂದನ, 2 ಲಾಂಗು, ಪೇಪರ್ ಸ್ಪ್ರೇ ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೀರಿನ ಹಳ್ಳದಲ್ಲಿ ಹಸು ತೊಳೆಯಲು ಹೋಗಿ ರೈತ ನೀರು ಪಾಲಾಗಿರುವಂತಹ ಘಟನೆ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ (34) ನೀರು ಪಾಲಾದ ರೈತ. ಹರಿಯುವ ನೀರಿನಲ್ಲಿ ಹಸು ತೊಳೆಯಲು ರೈತ ನೀರಿಗಿಳಿದಿದ್ದ ವೇಳೆ ಈ ಅವಘಡ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಜೋಡೆತ್ತು
ಕಲಬುರಗಿ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಎರಡು ಎತ್ತುಗಳು ಕೊಚ್ಚಿಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ನಡೆದಿದೆ. ಹಳ್ಳಕ್ಕೆ ನೀರು ಕುಡಿಯಲು ಹೋಗಿದ್ದಾಗ ಘಟನೆ ನಡೆದಿದೆ. ಮೌಲಾನಾ ಅನ್ನೋರಿಗೆ ಎತ್ತುಗಳು ಸೇರಿದ್ದು, ಕೆಲ ತಿಂಗಳ ಹಿಂದಷ್ಟೇ ಒಂದು ಲಕ್ಷ ಮೂವತ್ತು ಸಾವಿರ ನೀಡಿ ರೈತ ಖರೀದಿಸಿದ್ದ. ಸದ್ಯ ಎತ್ತುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ.
ಮೆಕ್ಕಾ ಯಾತ್ರೆಗೆ ಹೋಗಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ
ಧಾರವಾಡ: ಮೆಕ್ಕಾ ಉಮ್ರಾ ಯಾತ್ರೆಗೆ ಹೋಗಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ ಹೊಂದಿರುವಂತಹ ಘಟನೆ ಧಾರವಾಡದಲ್ಲಿ ನಡೆದಿದೆ. ಸೈಯದ್ ದಾದಾಪೀರ ಪೀರಜಾದೆ (70) ಮೃತ ವ್ಯಕ್ತಿ. ಧಾರವಾಡದಿಂದ ಅಕ್ಟೋಬರ್ 9 ರಂದು ಉಮ್ರಾಗಾಗಿ ಹೋಗಿದ್ದರು. ಸೈಯದ್ ಗ್ರಾಮದ ಶರೀಫ್ ಸಜ್ಜಾದ್ ದರ್ಗಾದ ಗುರುಗಳಾಗಿದ್ದರು. ಮೆಕ್ಕಾದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.
ಸೋಯಾ ಬಣವೆಗೆ ಕಿಡಿಗೇಡಿಗಳಿಂದ ಬೆಂಕಿ
ಬೀದರ್: ರಾಶಿ ಮಾಡಲು ಹಾಕಿದ್ದ ಸೋಯಾ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶಗೊಳಿಸಿದ ಘಟನೆ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ. ಸಂಜು ಕುಮಾರ್ ಎಂಬ ರೈತ ತನ್ನ 12 ಎಕರೆ ಜಮೀನಿನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಸೋಯಾ ಬೆಳೆದಿದ್ದರು. ಕಿಡಿಗೇಡಿಗಳ ಕಣ್ಣು ಇದರ ಮೇಲೆ ವಕ್ರದೃಷ್ಟಿ ಬಿದ್ದು ರಾಶಿ ಮಾಡಲು ಕೂಡಿ ಹಾಕಿದ್ದ ಬಣವೆಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ನೊಂದ ರೈತ ಸಂಜು ಆರೋಪಿಗಳನ್ನು ಬಂಧಿಸುವಂತೆ ಮೂಡಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೀರಿನ ಟ್ಯಾಂಕರ್ ಲಾರಿ ಪಲ್ಟಿ
ಬೆಂಗಳೂರು: ನಗರದ ಡೈರಿ ಸರ್ಕಲ್ ಮೇಲ್ಸೇತುವೆ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದು ಬಿಎಂಆರ್ಸಿಎಲ್ ಕಾಮಗಾರಿಗೆ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿಯಾಗಿದೆ. ಶುಕ್ರವಾರ ರಾತ್ರಿ ಅತಿವೇಗದಿಂದ ಲಾರಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಮೇಲ್ಸೇತುವೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ವಾಹನಗಳ ಸಂಚಾರವಿರಲಿಲ್ಲ. ರಸ್ತೆಗೆ ಅಡ್ಡಲಾಗಿ ಬಿದ್ದ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸದ್ಯ ಜಯನಗರ ಸಂಚಾರಿ ಪೊಲೀಸರು ಲಾರಿ ತೆರವು ಕಾರ್ಯ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:22 pm, Sat, 15 October 22