ಬೆಂಗಳೂರು ಗ್ರಾಮಾಂತರ: ಅಕ್ರಮವಾಗಿ ಒಳಉಡುಪಿನಲ್ಲಿ ಅಡಗಿಸಿಟ್ಟುಕೊಂಡು ಸಾಗಾಟ (smuggling) ಮಾಡುತ್ತಿದ್ದ 1.33 ಕೋಟಿ ಮೌಲ್ಯದ ಚಿನ್ನವನ್ನು ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ದುಬೈನಿಂದ ಇಕೆ 568 ವಿಮಾನದಲ್ಲಿ ಬಂದಿದ್ದ ಮೂವರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಕಲಿ ಭಾರತೀಯ ಪಾಸ್ಪೋರ್ಟ್ ಮಾಡಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿರುವುದಾಗಿ ಶನಿವಾರ ತಿಳಿಸಿದ್ದರು. ಲಿಯಾಕತ್ ಅಲಿ ಮತ್ತು ರಿಜಾವುಲ್ ಶೇಖ್ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಏಪ್ರಿಲ್ 7 ರ ಶುಕ್ರವಾರ ಸಿಂಗಾಪುರದಿಂದ ಇಂಡಿಗೊ ವಿಮಾನ 6 ಇ 1006 ನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ನ್ಯೂಸ್9ಗೆ ತಿಳಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಇಬ್ಬರ ಪಾಸ್ಪೋರ್ಟ್ಗಳನ್ನು ಪರಿಶೀಲಿಸಿದಾಗ ಬೇರೆಯವರ ಹೆಸರಿನಲ್ಲಿ ಮೋಸದಿಂದ ಭಾರತೀಯ ಪಾಸ್ಪೋರ್ಟ್ ಹೊಂದಿರುವುದು ಕಂಡುಬಂದಿದೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ ಆರೋಪಿಗಳನ್ನ 7 ದಿನ ಪೋಲಿಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಅನುಮತಿಯಿಲ್ಲದೆ ಫೋಟೋ ತೆಗೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶದ ಶ್ರೀಕಾಕುಳಂ ನಿವಾಸಿ ರವಡಾ ಲಕ್ಷ್ಮೀ ನಾರಾಯಣ ಎಂದು ಪೊಲೀಸರು ಗುರುತಿಸಿದ್ದಾರೆ. ಅಂದಹಾಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಡೆಹ್ರಾಡೂನ್ಗೆ ತೆರಳಲು ಮಹಿಳೆಯೊಬ್ಬರು ಆಗಮಿಸಿದ್ದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು; ಮಗಳದ್ದು ಕೊಲೆ ಎಂದ ಕುಟುಂಬಸ್ಥರು
ಟರ್ಮಿನಲ್ ಮುಂಬಾಗ ಕಾಫಿ ಕುಡಿಯಲು ಮಹಿಳೆ ನಿಂತಿದ್ದರು. ಈ ವೇಳೆ ಖದ್ದು ಮುಚ್ಚಿ ಪಕ್ಕದ ಟೇಬಲ್ನಲ್ಲಿ ಕುಳಿತುಕೊಂಡಿದ್ದ ಆಂಧ್ರ ಮೂಲದ ವ್ಯಕ್ತಿ ಮಹಿಳೆಯ ಫೋಟೋ ತೆಗೆದಿದ್ದಾನೆ. ಈ ವೇಳೆ ಅಲರ್ಟ್ ಆದ ಮಹಿಳೆ ಮೊಬೈಲ್ನಲ್ಲಿದ್ದ ಫೋಟೋ ಸಮೇತ ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾಳೆ. ಜೊತೆಗೆ ಮಹಿಳೆಯ ಅನುಮತಿಯಿಲ್ಲದೆ ಅಸಭ್ಯ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿದ ಕಾರಣಕ್ಕೆ ವ್ಯಕ್ತಿಯನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಮನೆ ಮುಂದಿನ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದ್ದು, ಪರಸ್ಪರ ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. ನಾರಾಯಣಸ್ವಾಮಿ ಮತ್ತು ಮುನಿಆಂಜಿನಪ್ಪ ಕುಟುಂಬಸ್ಥರ ನಡುವೆ ಜಗಳವಾಗಿದೆ. ಹೌದು ಮನೆ ಮುಂದಿನ 6 ಗುಂಟೆ ಜಮೀನು ವಿಚಾರಕ್ಕೆ ಕಳೆದ ಹಲವು ತಿಂಗಳುಗಳಿಂದ ಎರಡು ಕುಟುಂಬಗಳ ನಡುವೆ ವಿವಾದ ನಡೆಯುತ್ತಿದ್ದು. ಹೀಗಾಗಿ ನಿನ್ನೆ ಮನೆ ಮುಂದೆ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದ್ದ ನಾರಾಯಣಸ್ವಾಮಿ ಕುಟುಂಬಸ್ಥರು.
ಈ ವೇಳೆ ಸಿಸಿ ಕ್ಯಾಮರಾ ಅಳವಡಿಕೆ ವಿಚಾರಕ್ಕೆ ನಡೆದ ಜಗಳದಲ್ಲಿ ದೊಣ್ಣೆಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಇನ್ನು ಹಲ್ಲೆಯಿಂದ ನಾಲ್ಕು ಜನರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:10 pm, Sun, 9 April 23