ಅಂಗನವಾಡಿ ಶಿಕ್ಷಕಿ ನೇಮಕ ವಿಚಾರಕ್ಕೆ ಗ್ರಾಮಸ್ಥರ ಕಿರಿಕ್; ದಲಿತ ಶಿಕ್ಷಕಿಯೆಂದು ಶಾಲೆ ಒಳಗಡೆ ಬಿಡದೆ ಆಕ್ರೋಶ ಆರೋಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 30, 2023 | 7:58 AM

ಅದು ಮುಗ್ದ ಮಕ್ಕಳು ಆಟವಾಡಿ ನಗು ನಗುತ್ತಾ ಕಾಲ ಕಳೆಯುವ ಜಾಗ, ಅಲ್ಲಿನ ಮಕ್ಕಳನ್ನ ನೋಡುತ್ತಾ ಸಮಯವನ್ನ ಕಳೆಯಬೇಕಿದ್ದ ಗ್ರಾಮಸ್ಥರು ಇದೀಗ ಅದೇ ಮಕ್ಕಳ ಶಿಕ್ಷಕಿ ವಿಚಾರಕ್ಕೆ ಬೀದಿಯಲ್ಲಿ ಜಗಳಕ್ಕೆ ನಿಂತಿದ್ದಾರೆ. ಹೌದು, ಅಂಗನವಾಡಿ ಶಿಕ್ಷಕಿಯ ನೇಮಕ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದ್ದು, ಜಾತಿಯ ಬಣ್ಣವನ್ನ ಸಹ ಪಡೆದುಕೊಂಡಿದೆ.

ಅಂಗನವಾಡಿ ಶಿಕ್ಷಕಿ ನೇಮಕ ವಿಚಾರಕ್ಕೆ ಗ್ರಾಮಸ್ಥರ ಕಿರಿಕ್; ದಲಿತ ಶಿಕ್ಷಕಿಯೆಂದು ಶಾಲೆ ಒಳಗಡೆ ಬಿಡದೆ ಆಕ್ರೋಶ ಆರೋಪ
ದೊಡ್ಡಬಳ್ಳಾಪುರ
Follow us on

ಬೆಂಗಳೂರು ಗ್ರಾಮಾಂತರ, ಜು.30: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapur) ತಾಲೂಕಿನ ದೊಡ್ಡರಾಯಪ್ಪನಹಳ್ಳಿಯವರಾದ ಆನಂದಮ್ಮ ಅವರನ್ನ ಪಕ್ಕದ ಮೆಳೆಕೋಟೆ ಎನ್ನುವ ಗ್ರಾಮದ ಅಂಗನವಾಡಿ ಟೀಚರ್(Teacher)​ ಆಗಿ ಸರ್ಕಾರ ನೇಮಕ ಮಾಡಿದೆ. ಹೀಗಾಗಿ ಸರ್ಕಾರದ ಆದೇಶದಂತೆ ಆನಂದಮ್ಮ ಸಹ ಅಂಗನವಾಡಿಗೆ ಶಿಕ್ಷಕಿಯಾಗಿ ಪಾಠ ಮಾಡಲು ಬಂದಿದ್ದರು. ಆದರೆ, ಈಕೆಗೆ ಗ್ರಾಮಸ್ಥರು ಅಂಗನವಾಡಿ ಒಳಗೆ ಹೋಗದಂತೆ ತಡೆದಿದ್ದಾರಂತೆ. ಅಲ್ಲದೆ ಶಿಕ್ಷಕಿ ಅಂಗನವಾಡಿಯಲ್ಲಿ ಪಾಠ ಮಾಡಲು ಹೋಗುತ್ತಿದ್ದರೆ, ನೀನು ದಲಿತಳು ಹೀಗಾಗಿ ನೀನು ನಮ್ಮ ಊರಿಗೆ ಬೇಡ ಅಂತಿದ್ದಾರಂತೆ. ಹೀಗಾಗಿ ಗ್ರಾಮದ ಅಂಗನವಾಡಿ ಶಾಲೆಯ ಮುಂದೆ ದೊಡ್ಡ ಹೈಡ್ರಾಮವೇ ನಡೆದಿದ್ದು, ಶಿಕ್ಷಕಿಯಾಗಿ ಬಂದಿರುವ ಆನಂದಮ್ಮ, ನನಗೆ ನ್ಯಾಯ ಕೊಡಿಸಿ ಎಂದು ಗ್ರಾಮಸ್ಥರ ವಿರುದ್ದ ಆರೋಪಿಸಿದ್ದಾಳೆ.

ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಶಿಕ್ಷಕಿಗೆ ಅಡ್ಡಿ ಉಂಟು ಮಾಡುತ್ತಿದ್ದಂತೆ ಪರ ವಿರೋಧದ ಚರ್ಚೆಗೆ ಕಾರಣವಾಗಿದ್ದು, ಬೆಂಗಳೂರು ಆಸು ಪಾಸಿನಲ್ಲೆ ಜಾತಿ ಎನ್ನುವುದು ಶಿಕ್ಷಣದಲ್ಲೂ ಮುಂದುವರೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಈ ಬಗ್ಗೆ ಅಡ್ಡಿಪಡಿಸಿದ ಗ್ರಾಮದ ಮಹಿಳೆಯರನ್ನ ಕೇಳಿದ್ರೆ, ನಮ್ಮ ಊರಿನ ಅಂಗನವಾಡಿ ಶಾಲೆಗೆ ನಮ್ಮ ಊರಿನ ಮಹಿಳೆಯರನ್ನೇ ಟೀಚರ್ ಆಗಿ ನೇಮಕ ಮಾಡಬೇಕು. ಬೇರೆ ಊರಿನವರನ್ನ ಹಾಕಿದ್ರೆ, ಅವರು ಸಮಯಕ್ಕೆ ಸರಿಯಾಗಿ ಕೈಗೆ ಸಿಗಲ್ಲ. ಹೀಗಾಗೆ ಈ ಟೀಚರ್ ನಮಗೆ ಬೇಡ ನಮ್ಮ ಊರಿನವರಿಗೆ ಟೀಚರ್ ಉದ್ಯೂಗ ಕೊಡಲಿ ಅಂತಿದ್ದಾರೆ. ಈ ಟೀಚರ್ ಇದ್ರೆ, ಈ ಅಂಗನವಾಡಿಗೆ ಮಕ್ಕಳನ್ನ ಕಳಿಸಲ್ಲ. ಗ್ರಾಮದಲ್ಲಿನ ಮತ್ತೊಂದು ಅಂಗನವಾಡಿಗೆ ಕಳಿಸುತ್ತೆವೆ ಎಂದ ಅವರೇ ಬೇರೆ ಕಥೆಯನ್ನ ಹೇಳುತ್ತಿದ್ದಾರೆ.

ಇದನ್ನೂ ಓದಿ:ದಲಿತರ ಸ್ಮಶಾನಕ್ಕೆ ಹೋಗಲು ಇಲ್ಲ ಸೂಕ್ತ ರಸ್ತೆ: ವ್ಯಕ್ತಿ ಶವ ಇಟ್ಟು ಅಧಿಕಾರಿಗಳ ವಿರುದ್ದ ಆಕ್ರೋಶ

ಇನ್ನು ಗ್ರಾಮದಲ್ಲಿ ಶಿಕ್ಷಕಿ ವಿಚಾರಕ್ಕೆ ಕಿರಿಕ್ ಶುರುವಾಗುತ್ತಿದ್ದಂತೆ ಶಿಕ್ಷಕಿಯನ್ನ ವಾಪಸ್ ಕರೆಸಿಕೊಂಡ ಅಧಿಕಾರಿಗಳು, ಸೋಮವಾರ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಸೋಮವಾರ ಶಿಕ್ಷಕಿ ಮತ್ತು ಗ್ರಾಮಸ್ಥರನ್ನ ಕೂರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆ ನಡೆಸಲಿದ್ದು, ಅಂದು ಮತ್ಯಾವ ಹೈಡ್ರಾಮ ನಡೆಯುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ