ಪುರಾತನ ದೇವಾಲಯವಿರೋ ಜಮೀನಿನ ಮೇಲೆ ಬಲಾಡ್ಯರ ಕಣ್ಣು; ದೇಗುಲ ಉಳಿವಿಗೆ ಗ್ರಾಮಸ್ಥರ ಹೋರಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 18, 2024 | 6:34 PM

ಅದು ಗಂಗರ ಕಾಲದ ಇತಿಹಾಸ ಪ್ರಸಿದ್ದ ಪುರಾತನ ದೇವಾಲಯ. ಆ ದೇವಾಲಯವು ಬೆಟ್ಟದ ತಪ್ಪಲಿನ ಬಂಡೆಯ ಅಡಿಯಲ್ಲಿದ್ದು, ಇದೇ ಐತಿಹಾಸಿಕ ದೇವಾಲಯಕ್ಕೆ ಕಂಟಕ ಎದುರಾಗಿದೆ. ದೇವಾಲಯ ಹಾಗೂ ಪಕ್ಕದ ಜಮೀನು ಕೆಲವು ಬಲಾಡ್ಯರ ಕಣ್ಣಿಗೆ ಗುರಿಯಾಗಿದ್ದು, ಈಗ ಗ್ರಾಮಸ್ಥರು ಆ ದೇವಾಲಯದ ಉಳಿವಿಗಾಗಿ ಹೋರಾಟದ ಹಾದಿಗೆ ಇಳಿದಿದ್ದಾರೆ.

ಪುರಾತನ ದೇವಾಲಯವಿರೋ ಜಮೀನಿನ ಮೇಲೆ ಬಲಾಡ್ಯರ ಕಣ್ಣು; ದೇಗುಲ ಉಳಿವಿಗೆ ಗ್ರಾಮಸ್ಥರ ಹೋರಾಟ
ಮುಕ್ಕಣ್ಣೇಶ್ವರ ದೇವಾಲಯ
Follow us on

ಬೆಂಗಳೂರು ಗ್ರಾಮಾಂತರ, ಆ.18: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಮಾಡೇಶ್ವರ ಗ್ರಾಮದ ಬೆಟ್ಟದ ಬುಡದಲ್ಲಿ 8 ನೇ ಶತಮಾನದ ಗಂಗರ ಕಾಲದ ಪುರಾತನ ಮುಕ್ಕಣ್ಣೇಶ್ವರ ದೇವಾಲಯ(Temple)ವಿದೆ. ಈ ದೇವಾಲಯವು ಕ್ರಿ.ಶ 780 ರಲ್ಲಿ ಸ್ಥಾಪನೆಯಾಗಿದ್ದು, ಈಗ ಈ ದೇವಾಲಯಕ್ಕೆ ಕಂಟಕ ಎದುರಾಗಿದೆ. ದೇವಾಲಯದ ಅಕ್ಕ-ಪಕ್ಕದಲ್ಲಿ ಉದ್ಯಮಿಯೊಬ್ಬರು ಎರಡೂವರೆ ಎಕರೆ ಜಮೀನು ಖರೀದಿ ಮಾಡಿ ಖಾಸಗಿಯಾಗಿ ಅಭಿವೃದ್ದಿ ಮಾಡಲು ಮುಂದಾಗಿದ್ದಾರೆ. ಇದರ ನಡುವೆ ಉದ್ಯಮಿ ಆನಂದ್ ಎಂಬುವವರು ಎರಡೂವರೆ ಎಕರೆ ಖರೀದಿ ಮಾಡಿ ದೇವಾಲಯ ಪಕ್ಕದ ಅ ಖರಾಬು 9 ಎಕರೆ ಭೂಮಿಯನ್ನ ಕೂಡ ಬಳಸಿಕೊಳ್ಳಲು ಮುಂದಾಗಿದ್ದು, ಇದರಿಂದ ಪುರಾತನ ಮುಕ್ಕಣ್ಣೇಶ್ವರ ದೇವಾಲಯ ಅಭಿವೃದ್ದಿಗೆ ಕಂಟಕವಾಗಲಿದೆಯಂತೆ. ಜೊತೆಗೆ ಈ ರೀತಿಯಾದರೆ ಬೆಟ್ಟ ಹಾಗೂ ದೇವಾಲಯ ನಾಶವಾಗಲಿದ್ದು, ಇತಿಹಾಸ ಪ್ರಸಿದ್ದ ದೇವಾಲಯವನ್ನ ರಕ್ಷಣೆ ಮಾಡುವಂತೆ ಇತಿಹಾಸಕಾರರು, ಪರಿಸರ ಪ್ರೇಮಿಗಳು ಜಿಲ್ಲಾಡಳಿತವನ್ನ ಒತ್ತಾಯಿಸಿದ್ದಾರೆ.

ಅಂದಹಾಗೆ ದೇವಾಲಯದ ಜೀರ್ಣೋದ್ದಾರ ಮಾಡಿ ಉಳಿಸುವ ನಿಟ್ಟಿನಲ್ಲಿ ಉದ್ಯಮಿ ಆನಂದ್ ಮತ್ತು ಗ್ರಾಮಸ್ಥರನ್ನ ಸೇರಿಸಿ ಚರ್ಚೆ ನಡೆಸಲು ಆಯೋಜನೆ ಮಾಡಿದ್ದರು. ಈ ವೇಳೆ ದೇವಾಲಯವನ್ನ ಅಭಿವೃದ್ದಿ ಮಾಡಲು ನಾವೇ ಸಮಿತಿಯನ್ನ ಮಾಡಿಕೊಂಡು ಹಣವನ್ನ ಚಂದಾ ಎತ್ತಿ ಮಾಡುತ್ತೇವೆ. ಅದಕ್ಕೆ ದೇವಾಲಯದ ಪಕ್ಕದ ಜಾಗವನ್ನ ಬಿಟ್ಟುಕೊಡುವಂತೆ ಉದ್ಯಮಿಗೆ ಗ್ರಾಮಸ್ಥರು ಮನವಿ ಮಾಡಿದರು. ಆದ್ರೆ, ಇದಕ್ಕೆ ಒಪ್ಪದ ಉದ್ಯಮಿ ಆನಂದ್ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ:ಜಮೀನಿನಲ್ಲಿ ದಾರಿ ಬಿಡಲು ಒತ್ತಾಯ ಪೂರ್ವಕ ಸಹಿ; ತಹಶೀಲ್ದಾರ್ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಮಹಿಳೆ ಪ್ರತಿಭಟನೆ

ಈ ತರಹದ ಇತಿಹಾಸ ಪ್ರಸಿದ್ದಿಯುಳ್ಳ ಗುಹಾಂತರ ದೇವಾಲಯಗಳು ಇರುವುದು ಕಡಿಮೆ. ಒಂದು ಕಡೆ ಪುರಾತನ ದೇವಾಲಯ ಉಳಿಸಿಕೊಳ್ಳಲು ಮಾಡೇಶ್ವರ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದು, ದೇವಾಲಯದ ಸುತ್ತ ಪರಿಸರ ಹಾಗೂ ಜೀವ ವೈವಿದ್ಯ ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ಸಭೆಯಿಂದ ಗ್ರಾಮಸ್ಥರು ಹೊರ ನಡೆದರು. ಈ ಬಗ್ಗೆ ಉದ್ಯಮಿ ಆನಂದ್​ರನ್ನ ಕೇಳಿದರೆ ನಾವು ಯಾವುದೇ ದೇವಾಲಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಒಟ್ಟಾರೆಯಾಗಿ ಜೀವ ವೈವಿದ್ಯಮಯ ತಾಣವಾಗಿ ಗುರುತಿಸಿಕೊಂಡಿರುವ ಮುಕ್ಕಣ್ಣೇಶ್ವರ ದೇವಾಲಯದ ಸುತ್ತ ಖಾಸಗಿಕೃತ ಚಟುವಟಿಕೆಗಳನ್ನ ಪ್ರಾರಂಭ ಮಾಡಲಾಗಿದ್ದು, ಒಂದು ಕಡೆ ಖರಾಬು ಜಾಗವನ್ನ ಕಬಳಿಕೆ ನಡೆಯುತ್ತಿದೆ ಎನ್ನುವ ಆರೋಪ ಗ್ರಾಮಸ್ಥರು ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಮುಕ್ಕಣ್ನೇಶ್ವರ ದೇವಾಲಯ ಜಾಗದ ವಿವಾದದ ವಿಚಾರವಾಗಿ ಜಿಲ್ಲಾಡಳಿತ ಮದ್ಯಪ್ರವೇಶ ಮಾಡಿ ತನಿಖೆ ನಡೆಸಿ ಇತಿಹಾಸ ಪುರಾತನ ದೇವಾಲಯ ಉಳಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ