ಬೆಂಗಳೂರು, ( ಜುಲೈ 14): ವಿದೇಶದಿಂದ ಅಕ್ರಮವಾಗಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ ಸ್ಮಗ್ಲರ್ನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೀನ್ಯಾ ಮೂಲದ ಒದಿಹಾಂಬೋ ಮಾರ್ಗನ್ ಬೈರನ್ ಎನ್ನುವ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದು ಲಗೇಜ್ ಬ್ಯಾಗ್ ಪರಿಶೀಲನೆ ವೇಳೆ ಅಕ್ರಮವಾಗಿ ತಂದಿದ್ದ ಮೂರು ಕೆ.ಜಿ. ಕೊಕೇನ್ ಪತ್ತೆಯಾಗಿದೆ. ಬರೋಬ್ಬರಿ 30 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಇದಾಗಿದೆ.
ಈ ಸ್ಮಗ್ಲರ್ ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6ಇ1302 ವಿಮಾನದಲ್ಲಿ ಬಂದಿದ್ದ. ಲಗೇಜ್ ಬ್ಯಾಗ್ ಚೆಕಿಂಗ್ ವೇಳೆ ಡಿ.ಆರ್.ಐ ತಂಡದ ಕಾರ್ಯಚರಣೆಯ ವೇಳೆ ಈ ಬಾರೀ ಮೌಲ್ಯದ ಕೊಕೇನ್ ಪತ್ತೆಯಾಗಿದೆ. ಕೊಕೇನ್ ಸಮೇತ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ನಿನ್ನೆ(ಜುಲೈ 13) ರಾತ್ರಿ ಬೆಂಗಳೂರಿಗೆ ಬರಬೇಕಿದ್ದ ವಿಮಾನ ವಿಳಂಬವಾಗಿದ್ದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಏರ್ ಇಂಡಿಯಾ ಎಕ್ಸಪ್ರೆಸ್ ಏರಲೈನ್ಸ್ ವಿರುದ್ಧ ಕಿಡಿಕಾರಿದ್ದಾರೆ. ಶನಿವಾರ ಸಂಜೆ 5:55ಕ್ಕೆ ಜೈಪುರದಿಂದ ಹೊರಟು 10:40 ಕ್ಕೆ ಬೆಂಗಳೂರು ತಲುಪಬೇಕಿದ್ದ ವಿಮಾನ ವಿಳಂಬವಾಗಿದೆ. ಬೆಂಗಳೂರು ಮೂಲದ ಒಟ್ಟು 40 ಪ್ರಯಾಣಿಕರು ಜೈಪುರದಲ್ಲಿ ವಿಮಾನ ಹತ್ತಿದ್ದಾರೆ. ಆದ್ರೆ, ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಟೇಕಾಫ್ ಆಗಿಲ್ಲ.ಇದರಿಂದ ಪ್ರಯಾಣಿಕರು ರಾತ್ರಿಯಲ್ಲ ಜೈಪುರ ವಿಮಾನ ನಿಲ್ದಾಣದಲ್ಲೇ ಕಾಲಕಳೆದಿದ್ದಾರೆ. ಕೊನೆಗೆ ಪ್ರಯಾಣಿಕರ ಆಕ್ರೋಶದ ಕಟ್ಟೆ ಹೊಡೆದಿದ್ದು, ಏರ್ಲೈನ್ಸ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಬಳಿಕ ಪ್ರಯಾಣಿಕರನ್ನು ಕೂಡಲೇ ಮುಂಬೈ ಏರ್ ಪೋರ್ಟ್ ತಲುಪಿಸಲಾಗಿದೆ. ಆದರೆ ಇದೀಗ ಏರ್ಲೈನ್ಸ್ ಸಿಬ್ಬಂದಿ ಮಾತ್ರ ವಿಮಾನ ನಾಳೆ (ಜುಲೈ 15) ಬೆಳಗ್ಗೆ ವಿಮಾನ ಬರುತ್ತೆ ಎಂದು ಹೇಳಿದ್ದಾರೆ. ಇದರಿಂದ ಪ್ರಯಣಿಕರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ನಾಳೆವರೆಗೂ ವಿಮಾನ ನಿಲ್ದಾಣದಲ್ಲೇ ಇದ್ದರೆ ಉದ್ಯೋಗ, ಶಾಲಾ-ಕಾಲೇಜು ಹೇಗೆ ಎಂದು ಗರಂ ಆಗಿದ್ದು, ಮುಂಬೈನಿಂದ ಬೆಂಗಳೂರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಸಾವಿರಾರು ರುಪಾಯಿ ಹಣ ಕಟ್ಟಿಸಿಕೊಂಡರೂ ಸಮರ್ಪಕ ಸೇವೆ ಕೊಡುತ್ತಿಲ್ಲ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಏರಲೈನ್ಸ್ ವಿರುದ್ಧ ಆರೋಪಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:41 pm, Sun, 14 July 24