ಬೆಂಗಳೂರು, (ನವೆಂಬರ್ 18): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಕಂಬಾಳು ಗೊಲ್ಲರಹಟ್ಟಿಯ ಬಳಿ ಚಿರತೆ ದಾಳಿಯಿಂದಾಗಿ ಕರಿಯಮ್ಮ(55) ಎಂಬ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಗೊಲ್ಲರಹಟ್ಟಿ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದು, ಮನೆಯಿಂದ ಆಚೆ ಹೋಗಲು ಹೆದರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆಹಿಡಿಯಲು ACF,DCF,ಸೇರಿದಂತೆ ಲೆಪರ್ಡ್ ಟಾಸ್ಕ್ ಫೋರ್ಸ್ ತಂಡ ಸಿದ್ದತೆ ನಡೆಸಿದೆ. ಈಗಾಗಲೇ ಗೊಲ್ಲರಹಟ್ಟಿಗೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿದ್ದು, ಚಿರತೆಯನ್ನು ಸೆರೆಹಿಡಿಯುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಅವರು ಶಪಥ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಸ್ಥಳೀಯರು ಎಸಿಎಫ್ ನಿಜಾಮುದ್ದೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಸಲ ಮನವಿ ಮಾಡಿದರೂ ಚಿರತೆ ಸೆರೆ ಹಿಡಿದಿಲ್ಲ. ಮಹಿಳೆ ಸಾವು ಬಳಿಕ ಈಗ ಬಂದಿದ್ದೀರೆಂದು ಎಸಿಎಫ್ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಸ್ಥಳೀಯ ನಿವಾಸಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಮಾಧ್ಯಮಗಳ ಜೊತೆ ಮಾತನಾಡಿದ ಎಸಿಎಫ್ ನಿಜಾಮುದ್ದೀನ್, ಮೃತ ಕರಿಯಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಮಹಿಳೆ ಸಾವಿನ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಪೊಲೀಸರ ಜೊತೆ ಸ್ಥಳಕ್ಕೆ ಬಂದು ಮಹಿಳೆ ಶವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಸ್ತು ತಿರುಗ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನವನದಿಂದ ಪಶು ವೈದ್ಯರನ್ನು ಕರೆಸಲಾಗುತ್ತಿದೆ. ಸ್ಥಳಕ್ಕೆ ಬರುವಂತೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಗೂ ಮನವಿ ಮಾಡಿದ್ದೇವೆ. ಚಿರತೆಯನ್ನು ಸೆರೆ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಅರವಳಿಕೆ ತಜ್ಞರೂ ತಂಡದಲ್ಲಿರುತ್ತಾರೆ, ಡ್ರೋನ್ ಕ್ಯಾಮರಾ ಬಳಸುತ್ತೇವೆ. ಚಿರತೆ ಸೆರೆ ಹಿಡಿಯುವವರೆಗೂ ನಮ್ಮ ತಂಡ ಜಾಗ ಬಿಟ್ಟು ಕದಲುವುದಿಲ್ಲ ಎಂದು ಶಪಥ ಮಾಡಿದರು.
ಇನ್ನು ಈ ಘಟನೆ ಬಗ್ಗೆ ಲಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಟಿವಿ9ಗೆ ಪ್ರತಿಕ್ರಿಯಿಸಿ, ಚಿರತೆ ದಾಳಿಯಿಂದ ಮಹಿಳೆ ಮೃತಪಟ್ಟಿದ್ದು ತುಂಬಾ ನೋವುಂಟು ಮಾಡಿದೆ. ಸ್ಥಳಕ್ಕೆ ತೆರಳಿ ಕುಟುಂಬಕ್ಕೆ ಪರಿಹಾರ ನೀಡುವಂತೆ DCFಗೆ ಸೂಚಿಸಿದ್ದೇನೆ. ನಾಳೆ, ನಾಡಿದ್ದು ನಾನು ಭೇಟಿ ನೀಡಿ ವೈಯಕ್ತಿಕವಾಗಿಯೂ ಸಹಾಯ ಮಾಡುವೆ. ವಿಷಯ ಗೊತ್ತಾಗುತ್ತಿದ್ದಂತೆ ಅರಣ್ಯಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬನ್ನೇರುಘಟ್ಟದಿಂದ ಹೆಚ್ಚಿನ ಬೋನ್ ತಂದು ಸೆರೆ ಹಿಡಿಯುವಂತೆ ಹೇಳಿದ್ದೇನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.