ನೆಲಮಂಗಲ: ಮಹಿಳೆಯ ಶವ ಕಾಯುತ್ತಿದ್ದವರಿಗೆ ಶಾಕ್, ಜನರನ್ನು ಬೆದರಿಸಿ ಮೃತದೇಹ ಹೊತ್ತೊಯ್ಯಲೆತ್ನಿಸಿದ ಚಿರತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸಿನೆಮಾ ಶೈಲಿಯ ಭಯಾನಕ ಘಟನೆಯೊಂದು ನಡೆದಿದೆ. ಚಿರತೆಯೊಂದು ಮೃತದೇಹವನ್ನು ಹೊತ್ತೊಯಲು ಯತ್ನಿಸಿರುವಂತಹ ಘಟನೆ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಡಿಎಫ್ಓ, ಆರ್ಎಫ್ಓ ಬರುವಂತ್ತೆ ಪಟ್ಟುಹಿಡಿದಿದ್ದಾರೆ.
ನೆಲಮಂಗಲ, ನವೆಂಬರ್ 18: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಾಗ ಚಿರತೆಗಳು (leopard) ಕಾಣಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಜನರ ಮೇಲೆ ದಾಳಿ ಕೂಡ ಮಾಡಿವೆ. ಹಾಗಾಗಿ ಜನರು ಹೊಲ, ಗದ್ದೆಗಳಿಗೆ ಹೋಗುವುದಕ್ಕೆ ಭಯಪಡುವಂತಾಗಿದೆ. ಇದರ ಮಧ್ಯೆ ಅದೊಂದು ಘಟನೆ ಮಾತ್ರ ಎಂಥವರನ್ನು ಬೆಚ್ಚಿಬೀಳಿಸುತ್ತದೆ. ಮಹಿಳೆಯ ಶವ ಕಾಯುತ್ತಿದ್ದವರನ್ನು ಬೆದರಿಸಿ ಚಿರತೆ ಮೃತದೇಹವನ್ನು ಹೊತ್ತೊಯಲು ಯತ್ನಿಸಿರುವಂತಹ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ ಚಿರತೆ ದಾಳಿಗೆ ಕರಿಯಮ್ಮ(45) ಎನ್ನುವವರು ಬಲಿ ಆಗಿದ್ದಾರೆ. ರುಂಡವನ್ನು ಚಿರತೆ ತಿಂದಿದ್ದರಿಂದ ಮುಂಡ ಮಾತ್ರ ಪತ್ತೆ ಆಗಿತ್ತು. ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿತ್ತು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಯಚೂರು: ಚಿರತೆ ಹೆದರಿಸಲು ಹೋದವರ ಮೇಲೆ ಚಿರತೆ ದಾಳಿ, ಮೂವರಿಗೆ ಗಂಭೀರ ಗಾಯ
ಇಷ್ಟೆಲ್ಲಾ ಆದ ಬಳಿಕ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ. ಬೆಂಕಿ ಹಾಕಿ ಮಹಿಳೆಯ ಶವ ಕಾಯುತ್ತಿದ್ದವರಿಗೆ ಈ ವೇಳೆ ಮತ್ತೊಂದು ಶಾಕ್ ಎದುರಾಗಿದೆ. ಪೊಲೀಸ್ ಹಾಗೂ ಸಾರ್ವಜನಿಕರನ್ನೇ ಬೆದರಿಸಿ ಮೃತದೇಹವನ್ನು ಹೊತ್ತೊಯಲು ಚಿರತೆ ಯತ್ನಿಸಿದೆ. ಕೂಡಲೇ ಅಲ್ಲೇ ಇದ್ದ ದೊಣ್ಣೆ, ಮಚ್ಚು ಮತ್ತು ಟಾರ್ಚ್ ಬಳಸಿ ಮತ್ತೊಮ್ಮೆ ಚಿರತೆ ಬಾಯಿಯಿಂದ ಮೃತದೇಹವನ್ನು ಬಿಡಿಸಿಕೊಂಡಿದ್ದಾರೆ. ಸಿನೆಮಾ ಶೈಲಿಯ ಈ ಭಯಾನಕ ಘಟನೆ ಬಗ್ಗೆ ಗ್ರಾಮಸ್ಥರು ಟಿವಿ9 ಕ್ಯಾಮರಾ ಮುಂದೆ ಬಿಚ್ಚಿಟ್ಟಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ
ಸದ್ಯ ಈ ಘಟನೆಯಿಂದ ಗ್ರಾಮಸ್ಥರು ಒಂದು ಕಡೆ ಭಯಗೊಂಡಿದ್ದರೆ, ಮತ್ತೊಂದು ಕಡೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಲೆಮಾರುಗಳಿಂದ ಇಲ್ಲೇ ವಾಸ ಮಾಡುತ್ತಿದ್ದೇವೆ, ನಮಗೆ ರಕ್ಷಣೆ ಇಲ್ಲ. ಯಾವೊಬ್ಬ ಅರಣ್ಯ ಸಿಬ್ಬಂದಿಗಳು ಇಲ್ಲಿ ಬರುವುದಿಲ್ಲ. ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ದಾಳಿ ನಡೆದಾಗ ಮಾತ್ರ ಬಂದು ಹೋಗುತ್ತಾರೆ. ಇದುವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸ್ಥಳಕ್ಕೆ ಡಿಎಫ್ಓ, ಆರ್ಎಫ್ಓ ಬರುವಂತ್ತೆ ಪಟ್ಟುಹಿಡಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:46 am, Mon, 18 November 24