ವೀರೇಂದ್ರ ಪಾಟೀಲರಿಗೆ ಅಪ್ಪ,ಸಿದ್ದರಾಮಯ್ಯಗೆ ಮಗ ಅಪಮಾನ:ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಸಿದ ಕೈ ಎಂದ ಜೋಶಿ
2930 ದಿನ. ಎರಡು ಅವಧಿ. 8 ವರ್ಷ 8 ದಿನ ಆಡಳಿತ ನಡೆಸಿದ ಸಿದ್ದರಾಮಯ್ಯ ಇಂದು (ಮೇ 28) ನಾಡಿನ ದೊರೆಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಲೋಕಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದು, ಸಿದ್ದರಾಮಯ್ಯ ರಾಜೀನಾಮೆ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ, ಸಂಪುಟ ಸಹದ್ಯೋಗಿಗಳಿಗೂ ಆಘಾತ ತಂದಿದೆ. ಅಲ್ಲದೇ ವಿರೋಧ ಪಕ್ಷದ ನಾಯಕರು ಸಹ ಸಿದ್ದರಾಮಯ್ಯನವರನ್ನ ಕೆಳಗಿಳಿಸಿದ್ದಕ್ಕೆ ಬೇಸರ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು, (ಮೇ 28): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ರಾಜಿನಾಮೆ ಒಬಿಸಿ ವರ್ಗಕ್ಕೆ ರಾಹುಲ್ ಗಾಂಧಿ (Rahul Gandhi) ಕೊಟ್ಟ ಬಳುವಳಿ. ದಿನ ಬೆಳಗಾದರೆ ಒಬಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಇಂದು ಅದೇ ವರ್ಗದ ಸಿಎಂ ಅನ್ನು ಕೆಳಗಿಳಿಸಿ ಅಪಮಾನಿಸಿದ್ದಾರೆ. ಕಾಂಗ್ರೆಸ್ ಆಡಳಿತದ 4 ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಮೇಲ್ವರ್ಗದವರು ಸಿಎಂ ಇದ್ದಾರೆ. ಕರ್ನಾಟಕದಲ್ಲಿ ಮಾತ್ರ ಒಬಿಸಿ ಸಿಎಂ ಇದ್ದರು. ಈಗ ಇದ್ದೊಬ್ಬ ಒಬಿಸಿ ಸಿಎಂ ಅನ್ನು ಕಾಂಗ್ರೆಸ್ ಅಸ್ಥಿರಗೊಳಿಸಿದೆ ಎಂದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ( Pralhad joshi) ಟೀಕಿಸಿದ್ದಾರೆ.
ಮುಖ್ಯಾಂಶಗಳು
- ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ
- ಇದ್ದೊಬ್ಬ ಒಬಿಸಿ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಕೆಳಗಿಳಿಸಿದ ಎಂದ ಜೋಶಿ
- ನೆಪಕ್ಕಷ್ಟೇ ಒಬಿಸಿ ಜಪಿಸುವ ಕಾಂಗ್ರೆಸ್; ಅರಾಜಕತೆ, ಅಸ್ಥಿರತೆಯೇ ಗ್ಯಾರೆಂಟಿ
- ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆ ಹದಗೆಡಿಸಿ ಹೈ ಕಮಾಂಡ್ ಗೆ ATM ಆಗಿದ್ದ ಎಂದು ಕಿಡಿ
ಮಂಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷ ನೆಪಕ್ಕಷ್ಟೇ ಒಬಿಸಿ ಜಪ ಮಾಡುತ್ತದೆ. ಆದರೆ, ನಡೆದುಕೊಳ್ಳುವ ರೀತಿಯೇ ಬೇರೆ. ಒಬಿಸಿ ವರ್ಗದವರನ್ನು ಯಾವತ್ತೂ ಕಡೆಗಣಿಸುತ್ತಲೇ ಇದೆ ಎಂದು ಕಿಡಿಕಾರಿದರು.
ಇದನ್ನೂ ನೋಡಿ: ಕರುನಾಡ ಜನತೆಗೆ ಕೈ ಮುಗಿದ ಸಿದ್ದರಾಮಯ್ಯ ಪೋಸ್ಟ್ ನಲ್ಲೇನಿದೆ?
ವೀರೇಂದ್ರ ಪಾಟೀಲರಿಗೆ ಅಪ್ಪ, ಸಿದ್ದರಾಮಯ್ಯರಿಗೆ ಮಗ ಅಪಮಾನ
ಅಪ್ಪ ರಾಜೀವ್ ಗಾಂಧಿ ಅಂದು ವೀರೇಂದ್ರ ಪಾಟೀಲರನ್ನು ನಡೆಸಿಕೊಂಡಂತೆ ಮಗ ರಾಹುಲ್ ಗಾಂಧಿ ಇಂದು ಸಿದ್ದರಾಮಯ್ಯ ಅವರನ್ನು ನಡೆಸಿಕೊಂಡಿದ್ದಾರೆ. ರಾಜೀವ್ ಗಾಂಧಿ ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅಪಮಾನಿಸಿದ್ದರು. ಅಂತೆಯೇ ಮಗ ರಾಹುಲ್ ಗಾಂಧಿ ಸಹ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಅವಮಾನಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕತೆ ಹದಗೆಡಿಸಿ, ಹೈ ಕಮಾಂಡ್ ಗೆ ATM ಆಗಿದ್ರು
ಅರಾಜಕತೆ, ಅಸ್ಥಿರತೆ, ಅವಿಶ್ವಾಸ, ಗೊಂದಲದ ವಾತಾವರಣವೇ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಆಂತರಿಕ ಗೊಂದಲ, ಅರಾಜಕತೆ, ಅಸ್ಥಿರತೆ ಪರಾಕಾಷ್ಠೆ ತಲೆದೋರಿದೆ. ಕಾಂಗ್ರೆಸ್ ಒಂದು ಅರಾಜಕತೆಯ ಪಕ್ಷ . ಸಿದ್ದರಾಮಯ್ಯ ಅವರು ವಿದಾಯ ಭಾಷಣದಲ್ಲಿ ರಾಜ್ಯದ ಸಂಪತ್ತು ಬರಿದಾಗಿದ್ದನ್ನು ಪ್ರಸ್ತಾಪಿಸುತ್ತ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ ಜೋಶಿ, ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳು ಮತ್ತು ಹೈಕಮಾಂಡ್ ಅನ್ನು ತೃಪ್ತಿಪಡಿಸಲು ಹೋಗಿ ರಾಜ್ಯದ ಆರ್ಥಿಕತೆಯನ್ನು ಹದಗೆಡಿಸಿದರು ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಬಹುತೇಕ ವಸ್ತುಗಳ ಬೆಲೆ ಏರಿಸಿ ಆರ್ಥಿಕತೆಯನ್ನು ತೂಗಿಸಲು ಸರ್ಕಸ್ ಮಾಡಿದ ಸಿದ್ದರಾಮಯ್ಯ ಅವರು, ಅಭಾವವಿಲ್ಲದ ಸಮಯದಲ್ಲೂ ಮೂರು ಬಾರಿ ಇಂಧನದ ಬೆಲೆ ಏರಿಸಿ ಜನಜೀವನ ದುಬಾರಿ ಮಾಡಿದರೆ, ಕಾಂಗ್ರೆಡ್ ಹೈ ಕಮಾಂಡ್, ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನು ATM ರೀತಿ ಬಳಸಿಕೊಂಡಿತು ಎಂದು ದೂರಿದರು.
ವಿಬಿಜಿ ರಾಮ್ ಜಿ, ಜಲಜೀವನ ಮಿಷನ್, 15ನೇ ಹಣಕಾಸು ಆರ್ಥಿಕ ನೆರವು, ಜಿ ಎಸ್ ಟಿ ಸೇರಿದಂತೆ ಕೇಂದ್ರ ಸರ್ಕಾರದ ಆರ್ಥಿಕ ನೆರವುಗಳ ಬಗ್ಗೆ ಕೂಲಕುಂಶ ಮಾಹಿತಿ ನೀಡಿದ್ದಲ್ಲದೆ, ಹಣ ಬಿಡುಗಡೆ ಆಗಿರುವ ಬಗ್ಗೆ ಹಲವು ಬಾರಿ ಕೇಂದ್ರ ಸ್ಪಷ್ಟಪಡಿಸಿದೆ. ಹಾಗಿದ್ದರೂ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದರು.





