ರಾಮಾಯಣದಲ್ಲಿ ಶ್ರೀ ರಾಮಸೇತು ನಿರ್ಮಾಣದ ವೇಳೆ ಪುಟ್ಟ ಪ್ರಾಣಿ ಅಳಿಲು ಸಲ್ಲಿಸಿದ ಸೇವೆ ಪ್ರಶಂಸನಾರ್ಹ ಮತ್ತು ಗಮನ ಸೆಳೆಯುವಂತಹದ್ದು. ಇದೇ ಒಂದು ವಿಷಯವನ್ನಿಟ್ಟುಕೊಂಡು ಬೆಂಗಳೂರಿನ ನಾಗಸಂದ್ರದ ಕೈಗಾರಿಕೋದ್ಯಮಿಯೊಬ್ಬರು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ನವ ನಿರ್ಮಾಣದ ವೇದಿಕೆಯಲ್ಲಿ ಶಾಶ್ವತವಾಗಿ ವಿರಾಜಮಾನವಾಗಲಿದೆ.
ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕರಾದ ಸಿ ಪ್ರಕಾಶ್ ಅವರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ, 15 ಅಡಿ ಎತ್ತರ ಹಾಗೂ 7.5 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮನ ಸೇವೆ ಎಂದು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಅಯೋಧ್ಯೆಯ ರೈಲ್ವೆ ನಿಲ್ದಾಣ ಆವರಣದ ಮಧ್ಯ ಭಾಗದಲ್ಲಿ ಅನಾವರಣಗೊಳ್ಳಲಿದೆ.
ಇಂದು ಬೃಹದಾಕಾರದ ಅಳಿಲು ಪುತ್ಥಳಿ ಹೊತ್ತ ಟ್ರಕ್ ರಸ್ತೆ ಮಾರ್ಗವಾಗಿ ಅಯೋಧ್ಯೆಯತ್ತ ತೆರಳಿತು.ಇದೇ 11 ನೇ ತಾರೀಖು ಅಯೋಧ್ಯೆಗೆ ತಲುಪಲಿದ್ದು, 12 ನೇ ತಾರೀಖು ಅಯೋಧ್ಯೆ ರೈಲ್ವೆ ನಿಲ್ದಾಣ ಆವರಣದಲ್ಲಿ ಅಳಿಲು ಪ್ರತಿಷ್ಠಾಪನೆಗೊಳ್ಳಲಿದೆ. ಪ್ರತಿಷ್ಟಾಪನೆಗೆ ಸಂಬಂಧಿಸಿದಂತೆ ಈಗಾಗಲೇ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆಯಲ್ಲದೆ. ಸ್ಥಳವನ್ನೂ ನಿಗದಿ ಪಡಿಸಿದೆ ಎಂದು ಪುತ್ಥಳಿ ನಿರ್ಮಾತೃ ಸಿ. ಪ್ರಕಾಶ್ ಟಿವಿ 9ಗೆ ತಿಳಿಸಿದ್ದಾರೆ.
ಈ ಪುತ್ಥಳಿ ನಿರ್ಮಾಣಕ್ಕೆ ಕಾರ್ಟನ್ ಸ್ಟೀಲ್ ಬಳಸಿದ್ದು ಇದರಲ್ಲಿ ತಾಮ್ರದ ಮಿಶ್ರಣ ಇರುವುದರಿಂದ 100 ವರ್ಷಗಳಾದರೂ ಸಹ ಪುತ್ಥಳಿ ಯಾವುದೇ ರೀತಿ ಹಾಳಾಗಲು ಸಾಧ್ಯವಿಲ್ಲ. ಜೊತೆಗೆ ನಿರ್ವಹಣೆಗೆ ಯಾವುದೇ ವೆಚ್ಚ ತಗುಲುವುದಿಲ್ಲ ಎಂದು ಪುತ್ಥಳಿ ನಿರ್ಮಾಣ ಇಂಜಿನಿಯರ್ ಧನುಶ್ರೀ ಟಿವಿ 9ಗೆ ತಿಳಿಸಿದ್ದಾರೆ.
Also Read: ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಯುವಕ; ಕುಟುಂಬ, ಜಿಲ್ಲೆಯ ಜನರಲ್ಲಿ ಮನೆ ಮಾಡಿದ ಸಂತಸ
ಅಳಿಲು ಪುತ್ಥಳಿಯ ವಿನ್ಯಾಸಗಾರ ಕಲ್ಯಾಣ್ ರಾಥೋಡ್ ಟಿವಿ 9 ಜೊತೆ ಮಾತನಾಡಿ ಮೊದಲಿಗೆ ಪೇಪರ್ ನಲ್ಲಿ ಪುತ್ಥಳಿಯ ಮಾಡೆಲ್ ರೆಡಿ ಮಾಡಿಕೊಂಡು ನಂತರ ಈ ರೀತಿಯ ಪುತ್ಥಳಿ ರೆಡಿ ಮಾಡಲು ಸಾಧ್ಯವಾಯಿತು. ಇದರಲ್ಲಿ ಉದ್ಯಮಿ ಪ್ರಕಾಶ್ ಅವರ ಆಸಕ್ತಿ ಜೊತೆಗೆ ಕಂಪನಿಯ ಕಾರ್ಮಿಕರ ಸ್ವಇಚ್ಛೆ ಸಫಲವಾಗಿದೆ ಎಂದಿದ್ದಾರೆ.
ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಭಕ್ತ ಹನುಮನ ಜನ್ಮ ಭೂಮಿಯಾದ ಕರ್ನಾಟಕದ ವತಿಯಿಂದ ಈ ಅಳಿಲು ಸೇವೆ ಸಲ್ಲಿಕೆಯಾಗಿರುವುದು ಧನ್ಯತಾಭಾವದಿಂದ ಕೂಡಿದೆ ಎನ್ನುತ್ತಾರೆ ಪ್ರಕಾಶ್ ಪತ್ನಿ ಭಾರತಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ