ನಲ್ಲಿ ನೀರು ಹಿಡಿದು ಕೊಳ್ಳುವ ವಿಚಾರಕ್ಕೆ ಜಗಳ; ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಕನಕುಪ್ಪೆ ಗ್ರಾಮದಲ್ಲಿ ನಲ್ಲಿ ನೀರಿಗಾಗಿ ಜಗಳ ನಡೆದಿದ್ದು ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮಹಿಳೆಯ ಹೊಟ್ಟೆ ಹಾಗೂ ಖಾಸಗಿ ಭಾಗಕ್ಕೆ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ, ಸೆ.20: ನಲ್ಲಿ ನೀರು(Water) ಹಿಡಿದು ಕೊಳ್ಳುವ ವಿಷಯವಾಗಿ ಜಟಾಪಟಿ ನಡೆದಿದ್ದು ಮಹಿಳೆಯರು ಒಬ್ಬರ ಮೇಲೊಬ್ಬರು ಹಲ್ಲೆ(Assault) ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಕನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ರೋಜಾ ಎಂಬ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಗ್ರಾಮದ ಗೌರಮ್ಮ, ಶಿವರಾಜ ಎಂಬ ಆರೋಪಿಗಳು ರೋಜಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೊಟ್ಟೆ ಹಾಗೂ ಖಾಸಗಿ ಜಾಗಕ್ಕೂ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ.
ನಲ್ಲಿ ನೀರಿಗಾಗಿ ನಡೆದ ಜಗಳ ಇಡೀ ಗ್ರಾಮದಲ್ಲಿ ಆತಂಕಕ್ಕೆ ತಳ್ಳಿದೆ. ಜಗಳದಲ್ಲಿ ಗಾಯಗೊಂಡ ರೋಜಾ ಅವರನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮದಲ್ಲಿ ಸಾಕಷ್ಟು ಪುಂಡಾಟಿಕೆ, ದರ್ಪ ನಡೆಯುತ್ತಿರುವ ಬಗ್ಗೆ ಹಲವು ದೂರುಗಳು ಬರುತ್ತಿದ್ದು ಅವುಗಳನ್ನು ಪೊಲೀಸರು ಪರಿಗಣಿಸುತ್ತಿಲ್ಲ ಎಂದು ಗ್ರಾಮದ ಮಹಿಳೆಯರು ಆರೋಪ ಮಾಡಿದ್ದಾರೆ. ಮಹಿಳೆ ಮೇಲೆ ದರ್ಪ, ಹಲ್ಲೆ ಸಂಬಂಧಿಸಿದಂತೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಗಂಧದ ಮರ ಕಳ್ಳತನ
ಇನ್ನು ಮತ್ತೊಂದೆಡೆ ಬೆಂಗಳೂರಿನ ಜಾಲಹಳ್ಳಿ ಏರ್ ಫೋರ್ಸ್ ಕಾಂಪೌಂಡ್ನಲ್ಲಿ ಬೆಳೆಸಲಾಗಿದ್ದ ಬೆಲೆ ಬಾಳುವ ಶ್ರೀಗಂಧದ ಮರ ಕಳ್ಳತನವಾಗಿದೆ. ಶ್ರೀಗಂಧದ ಮರ ಕಳ್ಳತನ ಬಗ್ಗೆ ಏರ್ ಫೋರ್ಸ್ ಅಧಿಕಾರಿ ಭಾಸ್ಕರ್ ಘೋಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅರಣ್ಯ ಕಾಯ್ದೆ 1963 ರೀತ್ಯಾ, 86,IPC 1860-379 ಅಡಿಯಲ್ಲಿ ಗಂಗಮ್ಮ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತಿರುಪತಿ ಬೆಟ್ಟದ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆ; ಇದುವರೆಗೂ ಬೋನಿಗೆ ಬಿದ್ದಿವೆ 6 ಚಿರತೆಗಳು
ಊರಿಗೆ ತೆರಳಿದ್ದಾಗ ಮನೆ ಕಳ್ಳತನ
ಗೌರಿ ಗಣೇಶ ಹಬ್ಬದ ನಿಮಿತ್ತ ಊರಿಗೆ ತೆರಳಿದ್ದಾಗ ಮನೆ ಕಳ್ಳತನವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ವೀರಶೆಟ್ಟಿಹಳ್ಳಿಯ ಭವೀಶ್ ಎಂಬುವವರ ಮನೆಗೆ ನುಗ್ಗಿ ಖದೀಮರು ಕೈ ಚಳಕ ತೋರಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಭವೀಶ್ ಮನೆಗೆ ನುದ್ದಿ ಡೋರ್ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ. 2ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 2ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಭವೀಶ್ ಅವರು ಹಬ್ಬಕ್ಕೆ ತುರುವೆಕೆರೆ ಗ್ರಾಮಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ, ಗರ್ಭಿಣಿ ಮೇಲೆ ಹಲ್ಲೆ
ತುಮಕೂರಿನಲ್ಲೊಂದು ಅಮಾನುಷ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಾಗಸಂದ್ರ ಗೊಲ್ಲರಹಟ್ಟಿಯಲ್ಲಿ ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿದ್ದು ಗಲಾಟೆ ಬಿಡಿಸಲು ಬಂದ ಐದು ತಿಂಗಳ ಗರ್ಭಿಣಿ ಮೇಲೆ ಹಲ್ಲೆ ಮಾಡಲಾಗಿರುವ ಆರೋಪ ಕೇಳಿ ಬಂದಿದೆ. ಗ್ರಾಮದ ಕುಮಾರ್ ಹಾಗೂ ಹರೀಶ್ ಗಂಗಣ್ಣ, ಗಿಡಯ್ಯ ಬಸವರಾಜು ಪಾಪಣ್ಣ, ಕಲಿ ನಡುವೆ ಜಗಳ ನಡೆಯುತ್ತಿತ್ತು. ಜಗಳ ಬಿಡಿಸಲು ಬಂದ ಕುಮಾರ್ ಪತ್ನಿ ಹರ್ಷಿತ ಮೇಲೆ ಹಲ್ಲೆ ನಡೆದಿದೆಯಂತೆ.
ಘಟನೆಯಲ್ಲಿ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದೆಯಲಾಗಿದೆ. ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಹೊಟ್ಟೆ ಒಳಗಿನ ಪುಟ್ಟ ಕಂದಮ್ಮ ಮೃತಪಟ್ಟಿದೆ. ಹಲ್ಲೆ ಹಾಗೂ ಮಗು ಸಾವಿನ ಬಗ್ಗೆ ದಂಪತಿ ಸಿ.ಎಸ್ ಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಶಿಶು ಸಾವಿನ ಪ್ರಕರಣ ಬಿಟ್ಟು ಹಲ್ಲೆ ಪ್ರಕರಣ ಮಾತ್ರ ದಾಖಲು ಮಾಡಿದ್ದಾರೆ. ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ. ಹಾಗೂ ಹಲ್ಲೆ ಮಾಡಿದವರು ದಂಪತಿ ಮೇಲೆ ಬೆದರಿಕೆ ಹಾಕುತ್ತಿದ್ದಾರಂತೆ. ನಿತ್ಯ ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದೇವೆ. ನಮಗೆ ನ್ಯಾಯ ಬೇಕು ಎಂದು ದಂಪತಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:07 am, Wed, 20 September 23