ಆನೇಕಲ್: 15 ಜಿಂಕೆಗಳ ಸಾವು, ಬನ್ನೇರುಘಟ್ಟದಲ್ಲಿ ಸೂತಕದ ಛಾಯೆ
ಪ್ರಾಣಿ- ಪಕ್ಷಿ ಪ್ರಿಯರ ನೆಚ್ಚಿನ ತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್ನಿಂದ ಚಿರತೆ ಮರಿಗಳ ಸಾವಿನ ಪ್ರಕರಣ ಮಾಸುವ ಮುನ್ನವೇ ಜಿಂಕೆಗಳ ಸರಣಿ ಸಾವು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ವರ್ಗದ ಚಿಂತೆಗೆ ಕಾರಣವಾಗಿದೆ. ಏಳು ಚಿರತೆ ಮರಿಗಳ ಸಾವಿನ ಬಳಿಕ ಹದಿನೈದು ಜಿಂಕೆಗಳ ಸಾವಿನಿಂದಾಗಿ ಬನ್ನೇರುಘಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ.
ಆನೇಕಲ್, ಸೆ.20: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ(Bannerghatta Biological Park)ದಲ್ಲಿ ಕಳೆದೊಂದು ವಾರದಿಂದ ಪ್ರಾಣಿಗಳ ಸರಣಿ ಸಾವು ಸಂಭವಿಸುತ್ತಿದೆ. ಮಾರಕ ವೈರಸ್ಗೆ ತುತ್ತಾಗಿ ಏಳು ಚಿರತೆ ಮರಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಸಸ್ಯಹಾರಿ ಸಫಾರಿಯಲ್ಲಿದ್ದ ಜಿಂಕೆಗಳ ಸರಣಿ ಸಾವಾಗುತ್ತಿದೆ. ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳು ಕಿರಿದಾದ ಜಾಗದಲ್ಲಿ ಸರಿಯಾದ ಆರೈಕೆ ಹಾಗೂ ಆಹಾರದ ಸಮಸ್ಯೆಯಿಂದಾಗಿ ಬಳಲಿದ್ದವು. ಈ ಹಿನ್ನೆಲೆ ಅವುಗಳನ್ನು ಕಳೆದ ಆಗಸ್ಟ್ 17 ನೇ ತಾರೀಖಿನಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿತ್ತು.
37 ಜಿಂಕೆಗಳ ಪೈಕಿ 15 ಜಿಂಕೆಗಳು ಸರಣಿ ಸಾವು
ಕಳೆದ ಏಳೆಂಟು ದಿನಗಳಿಂದ ಬನ್ನೇರುಘಟ್ಟದ ಸಸ್ಯಹಾರಿ ಸಫಾರಿಯ ಕ್ವಾರೆಂಟೈನ್ ಜಾಗದಲ್ಲಿ ಜಿಂಕೆಗಳನ್ನು ನೋಡಿಕೊಳ್ಳಲಾಗಿತ್ತು. ಬಳಿಕ ಅವುಗಳನ್ನು ಸಸ್ಯಹಾರಿ ಸಫಾರಿಗೆ ಬಿಟ್ಟಿದ್ದು, ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ 37 ಜಿಂಕೆಗಳ ಪೈಕಿ 15 ಜಿಂಕೆಗಳು ಸರಣಿ ಸಾವನ್ನಪ್ಪಿವೆ. ಮೃತಪಟ್ಟ ಜಿಂಕೆಗಳ ಹೊಟ್ಟೆಯ ಕೆಲಭಾಗದಲ್ಲಿ ಭಾರಿ ಗಾತ್ರದ ಊತ ಕಾಣಿಸಿಕೊಂಡಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿಯ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಬನ್ನೇರುಘಟ್ಟ ಪಾರ್ಕ್ನಲ್ಲಿ ದುರ್ಘಟನೆ, ಸಿಬ್ಬಂದಿ ಸಾವು
ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಹಾರಿ ಸಫಾರಿಯ ಕ್ವಾರಂಟೈನ್ ಜಾಗದಲ್ಲಿ ಗಂಡು ಜಿಂಕೆಗಳೇ ಹೆಚ್ಚಾಗಿದ್ದವು. ಇದು ಜಿಂಕೆಗಳ ಮಿಲನದ ಸಮಯವಾದ್ದರಿಂದ ಹೆಣ್ಣು ಜಿಂಕೆಗಾಗಿ ಪರಸ್ಪರ ಕಾದಾಟದಿಂದಾಗಿ ಹೆಚ್ಚಿನ ಗಂಡು ಜಿಂಕೆಗಳು ಮೃತಪಟ್ಟಿವೆ. ಕೆಲವೊಂದು ಹೊಟ್ಟೆಯಲ್ಲಿ ಜಂತುಹುಳು ಬಾಧೆಯಿಂದ ಮೃತಪಟ್ಟಿರಬಹುದು ಹಾಗೂ ಜಿಂಕೆಗಳು ಅತ್ಯಂತ ಸೂಕ್ಷ್ಮ ಪ್ರಾಣಿಯಾಗಿದ್ದು, ಕೆಲವೊಮ್ಮೆ ಹೃದಯಾಘಾತದಿಂದ ಮೃತಪಟ್ಟಿರುವ ಸಾದ್ಯತೆಯೂ ಇದೇ. ಉಳಿದ ಜಿಂಕೆಗಳಿಗೆ ಜಂತುಹುಳು ನಿವಾರಕ ಡಿ ವರ್ಮಿಂಗ್ ಪೌಡರ್ನ್ನು ನೀರಿನಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಬನ್ನೇರುಘಟ್ಟ ಆಡಳಿತ ವರ್ಗ ಹಾಗೂ ವೈದ್ಯರ ತಂಡ ಜಿಂಕೆಗಳ ಬಗ್ಗೆ ತುರ್ತು ನಿಗಾ ವಹಿಸಲಾಗಿದ್ದು, ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯಾನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ಒಟ್ಟಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದೊಂದು ತಿಂಗಳಿನಿಂದ ಪ್ರಾಣಿಗಳ ಸಾವಿನ ಸವಾರಿ ನಡೆಯುತ್ತಿದ್ದು, ಬನ್ನೇರುಘಟ್ಟ ಆಡಳಿತ ವರ್ಗ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಾಣಿಗಳ ಸರಣಿ ಸಾವಿಗೆ ಬ್ರೇಕ್ ಹಾಕಬೇಕಿದೆ.
ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಮೂರು ಹಸುಗಳು ಧಾರುಣ ಸಾವು
ಆನೇಕಲ್: ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಮೂರು ಹಸುಗಳು ಧಾರುಣವಾಗಿ ಸಾವನ್ನಪ್ಪಿರುವಂತಹ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. ರೈತ ಚಿಕ್ಕಣ್ಣ ಎಂಬುವವರಿಗೆ ಸೇರಿದ ಮೂರು ಹಸುಗಳು ಬೆಂಗಳೂರಿನಿಂದ ಎರ್ನಾಕುಲಂಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸಾವನ್ನಪ್ಪಿವೆ. ಹಸುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಏಕಾಏಕಿ ಟ್ರಕ್ ಬರುವುದನ್ನು ಕಂಡ ಹಸುಗಳು ರೈಲ್ವೆ ಟ್ರ್ಯಾಕ್ ಕಡೆಗೆ ಹೋಗಿವೆ. ಈ ವೇಳೆ ರೈಲಿಗೆ ಸಿಲುಕಿ ಹಸುಗಳು ದಾರುಣವಾಗಿ ಸಾವನ್ನಪ್ಪಿವೆ. ಘಟನೆ ಸಂಬಂಧ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡೂವರೆ ಲಕ್ಷ ಮೌಲ್ಯದ ಹಸುಗಳು ಸಾವನ್ನಪ್ಪಿದ್ದು, ರೈಲ್ವೆ ಇಲಾಖೆ ಸೂಕ್ತ ಪರಿಹಾರ ಕೊಡಬೇಕೆಂದು ರೈತ ಕುಟುಂಬ ಒತ್ತಾಯಿಸಿದೆ. ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ