ಗಂಡ ಮಾಡಿದ ಸಾಲಕ್ಕೆ ಪತ್ನಿಯನ್ನ ಠಾಣೆಗೆ ಎಳೆದುತಂದ ಪೊಲೀಸರು; ಅವಮಾನ ತಾಳದೆ ಮನೆಗೆ ಬಂದು ಪತ್ನಿ ನೇಣಿಗೆ ಶರಣು
ಪತಿ ಮಾಡಿದ ಸಾಲಕ್ಕೆ ಪತ್ನಿಯನ್ನ ಠಾಣೆಗೆ ಪೊಲೀಸರು ಕರತಂದಿದ್ದು, ಅವಮಾನ ತಾಳತಾರದೆ ಪತ್ನಿ ಮನೆಗೆ ತೆರಳಿದ ಬಳಿಕ ನೇಣಿಗೆ ಶರಣಾಗಿದ್ದಾರೆ.

ನೆಲಮಂಗಲ: ಪತಿ ಮಾಡಿದ ಸಾಲಕ್ಕೆ ಪತ್ನಿಯನ್ನ ಠಾಣೆಗೆ ಪೊಲೀಸರು ಕರತಂದಿದ್ದು, ಅವಮಾನ ತಾಳತಾರದೆ ಪತ್ನಿ ಮನೆಗೆ ತೆರಳಿದ ಬಳಿಕ ನೇಣಿಗೆ ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಮಾರುತಿನಗರದಲ್ಲಿ ಘಟನೆ ನಡೆದಿದೆ. ಅಖಿಲಾ (35) ಮೃತ ದುರ್ದೈವಿ. ಫ್ರಾಡ್, ಫ್ರಾಡ್ ಅಂತಾ ಸದಾ ಅವಮಾನ ಮಾಡ್ತಾರೆ ಎಂದು ಡೆತ್ ನೋಟ್ ಬರೆದು ಅಖಿಲಾ ಸೂಸೈಡ್ ಮಾಡಿಕೊಂಡಿದ್ದಾರೆ. ಮೃತ ಅಖಿಲಾ ಅವರಿಗೆ ಎರಡು ಮಕ್ಕಳು ಇವೆ.
ಅಖಿಲಾ ಅವರ ಪತಿ ಮಧುಕುಮಾರ್ ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಎಂಬಾತನ ಬಳಿ 1 ಲಕ್ಷ ಹಣ ಸಾಲ ಪಡೆದಿದ್ದರು. ಹಣ ವಾಪಸ್ಸು ನೀಡುವ ವಿಚಾರಕ್ಕೆ ಚಂದನ್ ಕಿರುಕುಳ ನೀಡ್ತಿದ್ದ. ಪೊಲೀಸರ ಕಡೆಯಿಂದಲೂ ಕಿರುಕುಳ ಕೊಡಿಸುತ್ತಿದ್ದ ಎಂದು ಅರೋಪಿಸಿದ್ದರು. ಪತಿ ಮನೆಯಲ್ಲಿ ಇರದ ಸಮಯದಲ್ಲಿ ಅಖಿಲಾರನ್ನ ಠಾಣೆಗೆ ಕರೆದುಕೊಂಡು ವಿಚಾರಣೆ ನೆಪದಲ್ಲಿ ಟಾರ್ಚರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯಿಂದ ನೇರವಾಗಿ ಮನೆಗೆ ಬಂದು ಅಖಿಲಾ ಸೂಸೈಡ್ ಮಾಡಿಕೊಂಡಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ತೋಟದ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ: ದಂಪತಿಗಳಿಬ್ಬರು ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಚಳ್ಳಕುರ್ಕಿ ಬಳಿಯ ಜಮೀನಿನ ತೋಟದ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಯ್ಯ, ಜಯಮ್ಮ ಮೃತ ದಂಪತಿ. ಘಟನಾ ಸ್ಥಳಕ್ಕೆ ಪಿಡಿ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ನಿಯಂತ್ರಣ ತಪ್ಪಿ ಮೂವರು ಸಾವು, ಓರ್ವರ ಸ್ಥಿತಿ ಚಿಂತಾಜನಕ ಬೆಳಗಾವಿ: ಸಂಕೇಶ್ವರ ಹೊರವಲಯದಲ್ಲಿ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಮೂವರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಸಂಕೇಶ್ವರ ಪಟ್ಟಣ ಹೊರವಲಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮಲಿಕ್ ಜಮಾದಾರ್ ಎಂಬ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಸಂಕೇಶ್ವರದ ಬಸವರಾಜ ಮಾಳಿ(23), ಪ್ರವೀಣ್ ಸನದಿ(24), ಮೆಹಬೂಬಾ ಶೇಗಡಿ(23) ಮೃತ ದುರ್ದೈವಿಗಳು. ಗಾಯಾಳುವಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಂದೇ ಬೈಕಿನಲ್ಲಿ ನಾಲ್ಕು ಜನ ಯುವಕರು ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್‌ಲೈನ್ ಮೂಲಕ ವಂಚಿಸುತ್ತಿದ್ದವರ ಬ್ಯಾಂಕ್ ಖಾತೆ ಫ್ರೀಜ್ ಮೈಸೂರು: ಮೈಸೂರು ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿ ಆನ್‌ಲೈನ್ ಮೂಲಕ ವಂಚಿಸುತ್ತಿದ್ದವರ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ. ಮೈಸೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದವು. ಇದರ ಜಾಡು ಹಿಡಿದ ಪೊಲೀಸರು ಪ್ರಕರಣಗಳನ್ನು ಭೇದಿಸಿ ಆನ್‌ಲೈನ್ ಮೂಲಕ ವಂಚಿಸುತ್ತಿದ್ದವರ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದಾರೆ.
ಅಲ್ಲದೆ ಆನ್ ಲೈನ್ನಿಂದ ವಂಚನೆಗೊಳಗಾಗಿದ್ದವರಿಗೆ ಹಣ ಮರುಪಾವತಿ ಮಾಡಿದ್ದಾರೆ. ಒಟ್ಟು 6,43,297 ರೂ ಹಣ ಮರುಪಾವತಿ ಮಾಡಲಾಗಿದೆ. ವಿಜಯನಗರ ನಿವಾಸಿಗಳಾದ ಚಂದಾಲಾಲ್ ಮತ್ತು ಸುನೀತಾಗೆ ಕೆವೈಸಿ ಒಟಿಪಿ ಪಡೆದು ಒಟ್ಟು 4,49,100 ರೂಪಾಯಿ ವಂಚನೆ ಮಾಡಲಾಗಿತ್ತು. ವಿದ್ಯಾರಣ್ಯಪುರಂ ಚಂದ್ರು ಅವರಿಗೆ 1,69,199 ರೂಪಾಯಿ ವಂಚನೆ ಆಗಿದೆ. ದಟ್ಟಗಳ್ಳಿಯ ರವಿ ಹೆಬ್ಬಾರ್ ಅವರಿಗೆ 22,999 ರೂಪಾಯಿ ವಂಚನೆ. ಹಿನಕಲ್ ನಿವಾಸಿ ಪ್ರೇಮ್ ದಾಸ್ ಅವರಿಗೆ 1,999 ರೂಪಾಯಿ ವಂಚನೆ ಆಗಿತ್ತು. ಸದ್ಯ ಈ ನಾಲ್ಕು ಪ್ರಕರಣಗಳನ್ನು ಭೇದಿಸಿದ ಪೊಲೀಸರು, ವಂಚನೆಗೊಳಗಾಗಿದ್ದವರಿಗೆ ಹಣ ಮರುಪಾವತಿ ಮಾಡಿದ್ದಾರೆ.
Published On - 1:43 pm, Fri, 25 February 22