ಆ ಗ್ರಾಮವೊಂದು ಕೆಂಪೇಗೌಡ ಏರ್ಪೋಟ್ ಪಕ್ಕವಿದ್ದು ಜನಸಖ್ಯೆಯು 10 ಸಾವಿರಕ್ಕೂ ಹೆಚ್ಚಿದೆ. ಇದೇ ಗ್ರಾಮದಲ್ಲಿ ಇದ್ದ ಸ್ಮಶಾನ ಕೆರೆ ತುಂಬಿ ಕೋಡಿ ಹೋದ ಪರಿಣಾಮ ಇಡೀ ಸ್ಮಶಾನ ನೀರಿನಲ್ಲಿ ತುಂಬಿದ್ದು, ಶವಸಂಸ್ಕಾರಕ್ಕೆ ಜಾಗವೇ ಇಲ್ಲವಾಗಿದೆ. ಸ್ಮಶಾನಕ್ಕೆ ಜಾಗ ಮಂಜೂರಾತಿ ನೀಡುವಂತೆ ಹಾಗೂ ಕೆರೆ ಒತ್ತುವರಿ ತೆರವು ಮಾಡುವಂತೆ ಹಲವು ಬಾರಿ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದರೂ ಅಧಿಕಾರಿಗಳು ಕ್ಯಾರೇ ಅಂದಿಲ್ಲ. ಅದಕ್ಕಾಗಿ ಆ ವ್ಯಕ್ತಿ ಏಕಾಂಗಿಯಾಗಿ ಪಂಚಾಯ್ತಿ ಮುಂದೆ ಏನ್ ಮಾಡಿದ್ದಾರೆ ಅಂದರೆ…
ಗ್ರಾಮ ಪಂಚಾಯ್ತಿ (village panchayat) ಮುಂದೆ ಚಾಪೆ ಹಾಸಿಕೊಂಡು ಏಕಾಂಗಿಯಾಗಿ ಸತ್ಯಾಗ್ರಹ ಮಾಡ್ತಿದ್ದಾರೆ ಆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ! ಧರಣಿ ಮಾಡಿರುವ ಮಾಜಿ ಸದಸ್ಯನ ಸತ್ಯಾಗ್ರಹವನ್ನ ಕೈ ಬಿಡುವಂತೆ ಕಂದಾಯ ಅಧಿಕಾರಿಗಳು ಮನವೊಲಿಸಿದ್ದಾರೆ. ಆದರೆ ಇವರು ಗ್ರಾಮಕ್ಕೆ ಸ್ಮಶಾನ ನೀಡಿ, ಕೆರೆ ಒತ್ತುವರಿ ತೆರವು ಮಾಡಿ ಆಮೇಲೆ ಧರಣಿ (dharani) ಕೈಬಿಡ್ತೇನೆ ಎಂದಿದ್ದಾರೆ. ಹೌದು ಇಂತಹ ದೃಶ್ಯಾವಳಿ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮ ಪಂಚಾಯ್ತಿ ಬಳಿ (budigere in devanahalli).
ಅಂದಹಾಗೆ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು, ಕಳೆದೆರಡು ವರ್ಷಗಳಿಂದ ಬೀಳುತ್ತಿರುವ ಮಳೆಯಿಂದ ಬೂದಿಗೆರೆ ಕೆರೆ ತುಂಬಿ ಕೋಡಿ ಬಿದ್ದಿದೆ. ಪರಿಣಾಮ ಕೆರೆಕೋಡಿಗೆ ಹೊಂದಿಕೊಂಡ ಸ್ಮಶಾನ ಜಾಗವು ತುಂಬಿಕೊಂಡಿದ್ದು, ಶವಸಂಸ್ಕಾರಕ್ಕೆ ಜಾಗ ಇಲ್ಲದಂತಾಗಿ ಜನ ತೊಂದರೆಪಡುತ್ತಿದ್ದಾರೆ. ಇನ್ನು ಅಂದರಹಳ್ಳಿ ಕೆರೆ ಕೋಡಿಗೆ ಸೇರಿದ ಕೋಟ್ಯಾಂತರ ಬೆಲೆಯ ಜಾಗ ಒತ್ತುವರಿಯಾಗಿದೆ. ಈ ಒತ್ತುವರಿ ತೆರವು ಮತ್ತು ಸ್ಮಶಾನ ಜಾಗ ಮಂಜೂರಾತಿಗೆ ಆಗ್ರಹಿಸಿ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಮೂರ್ತಿ ಎಂಬಾತ ಪಂಚಾಯ್ತಿ ಕಚೇರಿ ಬಳಿ ಧರಣಿಗೆ ಕೂತಿದ್ದಾರೆ.
ಅಂದಹಾಗೆ ಇದೀಗ ಕೆರೆ ಪಕ್ಕದ ಸ್ಮಶಾನ ಇರೋದು ಕೇವಲ 30 ಗುಂಟೆ ಮಾತ್ರ. ಅದರಲ್ಲಿ ಈಗಾಗಲೇ ಸ್ಮಶಾನದಲ್ಲಿ ನೀರು ಆವರಿಸಿಕೊಂಡಿದ್ದು, ಜಾಗವೇ ಇಲ್ಲದಂತಾಗಿದೆ. ಹೀಗಾಗಿ ಧರಣಿ ಕುಳಿತಿರೋ ಮೂರ್ತಿ ಕಳೆದೆರೆಡು ವರ್ಷಗಳಿಂದ ಗ್ರಾಮದಲ್ಲಿ ಇರೋ ಜನಸಂಖ್ಯೆ ಹೆಚ್ಚಾಗಿರೋದ್ರಿಂದ ಬೇರೆಡೆ ಎರಡು ಎಕರೆ ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ ಮಾಡಿದ್ದರಂತೆ. ಜತೆಗೆ ಪಂಚಾಯ್ತಿಯ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಗಮನಕ್ಕೆ ತಂದಿದ್ದರೂ ಯಾರೂ ಕ್ಯಾರೇ ಅಂದಿಲ್ಲವಂತೆ. ಇದ್ರಿಂದ ಬೇಸತ್ತ ಮೂರ್ತಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಏಕಾಂಗಿ ಹೋರಾಟದ ಹಾದಿ ಹಿಡಿದಿದ್ದಾರೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದ್ದು, ಕೆರೆ ಕೋಡಿ ಬಳಿ ಒತ್ತುವರಿ ಜಾಗವನ್ನ ತೆರವು ಮಾಡುವಂತೆಯೂ ಮೂರ್ತಿ ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳು ಸ್ಮಶಾನ ಮಂಜೂರು ಮಾಡದೇ ಇದ್ದರೆ ಯಾವುದೇ ಕಾರಣಕ್ಕೂ ಸತ್ಯಾಗ್ರಹ ಕೈ ಬಿಡೋದಿಲ್ಲ ಅಂತಾ ಎಚ್ಚರಿಸಿದ್ದಾರೆ. ಇನ್ನು ಈತನ ಹೋರಾಟಕ್ಕೆ ಸ್ಥಳೀಯರು ಒಬ್ಬೊಬ್ಬರೇ ಸಾಥ್ ನೀಡಲು ಮುಂದಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ಪಾಪಣ್ಣ.
ಒಟ್ಟಾರೇ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಜಾಗ ಇಲ್ಲದೆ ನೊಂದಿರುವ ಮೂರ್ತಿ ಅವರು ಸ್ಮಶಾನಕ್ಕಾಗಿ ಏಕಾಂಗಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ ಎಂಬುದು ದಿಟ. ಜತೆಗೆ ಕೆರೆ ಉಳಿವಿಗಾಗಿ, ಒತ್ತುವರಿ ತೆರವಿಗಾಗಿ ಅಧಿಕಾರಿಗಳಿಗೆ ಏಕಾಂಗಿ ಸತ್ಯಾಗ್ರಹ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಮೂರ್ತಿಯ ಸತ್ಯಾಗ್ರಹದಿಂದ ಎಚ್ಚೆತ್ತು, ಸ್ಮಶಾನ ಜಾಗ ಮಂಜೂರಾತಿ ಹಾಗೂ ಕೆರೆ ಒತ್ತುವರಿ ತೆರವು ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. (ವರದಿ: ನವೀನ್, ಟಿವಿ 9, ದೇವನಹಳ್ಳಿ)